ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಾರಾಂ ಪುತ್ರ ಸಾಯಿಯೂ ಅಪರಾಧಿ

Last Updated 26 ಏಪ್ರಿಲ್ 2019, 19:49 IST
ಅಕ್ಷರ ಗಾತ್ರ

ಅಹಮದಾಬಾದ್‌: ಅಸಾರಾಮ್‌ ಬಾಪು ಪುತ್ರ ನಾರಾಯಣ ಸಾಯಿ ಮೇಲಿದ್ದ ಅತ್ಯಾಚಾರದ ಆರೋಪ ಸಾಬೀತಾಗಿದೆ. ಸೂರತ್‌ ನ್ಯಾಯಾಲಯ ಅವನನ್ನು ಅಪರಾಧಿ ಎಂದು ಘೋಷಿಸಿದೆ.

ಸ್ವಯಂ ಘೋಷಿತ ದೇವಮಾನವ ಅಸಾರಾಮ್‌ ಬಾಪು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ರಾಜಸ್ಥಾನದ ನ್ಯಾಯಾಲಯ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಹಮದಾಬಾದ್‌ನ ಆಶ್ರಮದಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ನಗರದ ಇಬ್ಬರು ಸಹೋದರಿಯರು ಆರೋಪಿಸಿದ್ದರು. ಈ ಪೈಕಿ ಒಬ್ಬರು 2013ರಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಆತನ ಪುತ್ರನ ಮೇಲಿದ್ದ ಆರೋಪವೂ ಸಾಬೀತಾಗಿದೆ.

ಸಾಯಿ ಅತ್ಯಾಚಾರ ಎಸಗಿರುವುದು ಮತ್ತು ಅಪರಾಧ ಪಿತೂರಿ ನಡೆಸಿರುವುದು ಸಾಬೀತಾಗಿದೆ. ಹೀಗಾಗಿ ಅವನನ್ನು ತಪ್ಪಿತಸ್ಥ ಎಂದು ಘೋಷಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದಲ್ಲಿ 9 ಮಂದಿ ಭಾಗಿಯಾಗಿ ದ್ದರು. ಅವರ ಪೈಕಿ 6 ಮಂದಿ ತಪ್ಪಿತಸ್ಥರು ಎಂಬುದು ಸಾಬೀತಾಗಿದೆ. ಸಾಯಿಯ ಸಹವರ್ತಿಗಳಾದ ಮೋನಿಕಾ, ಅಜಯ, ನೇಹಾ ದಿವಾನ್‌ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ. ಹನುಮಾನ್‌, ಗಂಗಾ, ಜಮುನಾ ಮತ್ತು ರಮೇಶ್‌ ಎಂಬುವವರನ್ನು ತಪ್ಪಿತಸ್ಥರು ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 20 ಆರೋಪಿಗಳ ವಿಚಾರಣೆಗೆ ಕೋರ್ಟ್‌ತಡೆ ನೀಡಿದೆ ಎಂದು ಪ್ರಕರಣ ನಿಭಾ ಯಿಸಿದ್ದ ವಕೀಲರು ಹೇಳಿದರು.

ಸಾಯಿ ತಮ್ಮ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಿದ ಇಬ್ಬರು ಸಹೋದರಿಯರ ಪೈಕಿ ಒಬ್ಬರು ಸಂತ್ರಸ್ತೆ2013ರಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಎರಡು ತಿಂಗಳಲ್ಲೇ ಅವನನ್ನು ಪೊಲೀಸರು ಬಂಧಿಸಿದ್ದರು. ಅವನ ಜಾಮೀನು ಅರ್ಜಿಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ತಿರಸ್ಕೃತಗೊಂಡಿದ್ದವು.

‘2001 ಡಿಸೆಂಬರ್‌ನಿಂದ ಮತ್ತು 2002ರ ಹೋಳಿವರೆಗೆ ನಾರಾಯಣ ಸಾಯಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಮಾತ್ರವಲ್ಲ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದ. ಸಾಕಷ್ಟು ಬಾರಿ ಹಲ್ಲೆ ನಡೆಸಿದ್ದ. ತಾನೆಷ್ಟೇ ಆಕ್ರೋಶ, ಪ್ರತಿರೋಧ ವ್ಯಕ್ತಪಡಿಸಿದರೂ ಹಲವಾರು ಬಾರಿ ಬಲಾತ್ಕರಿಸಿದ್ದ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ ಸಾಯಿ, ‘ಇಷ್ಟೆಲ್ಲಾ ಆರೋಪಗಳನ್ನು ಮಾಡಿರುವ ಸಂತ್ರಸ್ತೆ ಆ ಬಳಿಕ ಕೆಲವು ವರ್ಷಗಳ ಕಾಲ ಆಶ್ರಮದಲ್ಲೇ ನೆಲೆಸಿದ್ದರು. ಸೂರತ್‌ ಆಶ್ರಮದ ಆಡಳಿತಾಧಿಕಾರಿಯಾಗಿಯೂ ಇದ್ದರು. ಬಳಿಕ ಮದುವೆಯಾದ ಅವರು ಆಶ್ರಮವನ್ನು ತೊರೆದರು. ಸರಿಸುಮಾರು 12 ವರ್ಷಗಳ ಬಳಿಕ ಅವರು ಪ್ರಕರಣ ದಾಖಲಿಸಿದ್ದಾರೆ’ ಎಂದು ಹೇಳಿದ್ದಾನೆ.

ಅಸಾರಾಮ್‌ ಬಾಪು ಮೇಲೂ ಕೂಡಾ ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದು, ಅಕ್ರಮಬಂಧನದಲ್ಲಿಟ್ಟಿರುವ ಪ್ರಕರಣಗಳು ದಾಖಲಾಗಿವೆ.

ತಂದೆ– ಮಗನ ಬಂಧನವಾಗುತ್ತಿದ್ದಂತೆಯೇ ಪ್ರಕರಣದ ನಿರ್ಣಾಯಕ ಸಾಕ್ಷಿಗಳ ಮೇಲೆ ಸರಣಿ ದಾಳಿಗಳು ನಡೆದವು. ಮೂವರ ಹತ್ಯೆ ನಡೆದವು. ಆಯುರ್ವೇದ ವೈದ್ಯ ಅಮೃತ ಪ್ರಜಾಪತಿ, ಆಶ್ರಮದ ಅಡುಗೆಭಟ್ಟ ಅಖಿಲ್‌ ಗುಪ್ತಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಜೋಧ್‌ಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಾಕ್ಷಿಯಾಗಿದ್ದ ಕೃಪಾಲ್‌ ಸಿಂಗ್‌ ಅವರನ್ನು ಉತ್ತರ ಪ್ರದೇಶದ ಷಾಜಹಾನ್‌ಪುರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಜಾಮೀನು ಪಡೆಯಲು ಮತ್ತು ಪ್ರಕರಣದಿಂದ ಹೊರಬರುವಂತೆ ಮಾಡಲು ಪೊಲೀಸರಿಗೆ ₹ 8 ಕೋಟಿ ಲಂಚ ನೀಡಲು ಯತ್ನಿಸಿದ ಆರೋಪ‍ವೂ ಸಾಯಿ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT