ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ 'ಚೊಚ್ಚಲ' ಫಿಲಿಪ್‌ ಕೋಟ್ಲರ್‌ ಅಧ್ಯಕ್ಷೀಯ ಪ್ರಶಸ್ತಿ: ಏನಿದು? ಯಾವುದಿದು?

Last Updated 15 ಜನವರಿ 2019, 17:58 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 'ಚೊಚ್ಚಲ' ಫಿಲಿಪ್‌ ಕೋಟ್ಲರ್‌ ಅಧ್ಯಕ್ಷೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಸೋಮವಾರ ವರ್ಲ್ಡ್ ಮಾರ್ಕೆಟಿಂಗ್ ಸಮ್ಮಿಟ್ (ಡಬ್ಲ್ಯುಎಂಎಸ್) ಇಂಡಿಯಾ ಈ ಪ್ರಶಸ್ತಿಯನ್ನು ಮೋದಿಯವರಿಗೆ ಪ್ರದಾನ ಮಾಡಿದೆ. ಹೀಗಿರುವಾಗಈ ಪ್ರಶಸ್ತಿ ಏನು? ಪ್ರಶಸ್ತಿ ಹಿಂದಿರುವ ಸಂಗತಿಗಳೇನು?ಎಂಬುದರ ಬಗ್ಗೆ ದಿ ವೈರ್ ಪ್ರಕಟಿಸಿರುವ ವರದಿ ಇಲ್ಲಿದೆ.

ಏನಿದು ಪ್ರಶಸ್ತಿ?
ಡಬ್ಲ್ಯುಎಂಎಸ್ ಈ ಹಿಂದೆ ಮಾರ್ಕೆಟಿಂಗ್ ಮತ್ತು ಜಾಹೀರಾತು ಕಾರ್ಯ ವಲಯದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ನೀಡುತ್ತಿತ್ತು.ಆನಂತರ ವರ್ಲ್ಡ್ ಮಾರ್ಕೆಟಿಂಗ್ ಸಮ್ಮಿಟ್ (ಡಬ್ಲ್ಯುಎಂಎಸ್) ಗ್ರೂಪ್ ಸಂಸ್ಥಾಪಕ, ಮಾರ್ಕೆಟಿಂಗ್ ಮತ್ತು ಮ್ಯಾನೇಜ್‍ಮೆಂಟ್ ಗುರು ಫಿಲಿಪ್ ಕೋಟ್ಲರ್ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲು ಆರಂಭಿಸಿತು.

ಪ್ರಶಸ್ತಿಯ ನಿರ್ಣಾಯಕರು ಯಾರು?
ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ ಬಗ್ಗೆ WMS18 – ದೆಹಲಿ ಸಮ್ಮಿಟ್ ಆಗಲೀ, ಡಬ್ಲ್ಯುಎಂಎಸ್ ಗ್ರೂಪ್‍ನ ವೆಬ್‍ಸೈಟ್ ನಲ್ಲಿ ಯಾವುದೇ ಮಾಹಿತಿ ಇಲ್ಲ. ಈ ಪ್ರಶಸ್ತಿ ನೀಡಿದ ಸಂಸ್ಥೆ ಯಾವುದು ಮತ್ತು ಪ್ರಶಸ್ತಿಯ ನಿರ್ಣಾಯಕರು ಯಾರು ಎಂಬುದರ ಬಗ್ಗೆ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ಯಾವುದೇ ಉಲ್ಲೇಖ ಇಲ್ಲ.

ಮೋದಿಗೆ ಬಿಜೆಪಿ ನಾಯಕರಿಂದ ಅಭಿನಂದನೆಗಳ ಮಹಾಪೂರ
ಬಿಜೆಪಿಯ ಹಿರಿಯ ನೇತಾರರಾದ ಕೇಂದ್ರ ಸಚಿವ ಪೀಯುಷ್ ಗೋಯಲ್, ಸ್ಮೃತಿ ಇರಾನಿ, ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ಮಾಜಿ ಮುಖ್ಯಮಂತ್ರಿಗಳಾದ ರಮಣ್ ಸಿಂಗ್ ಮತ್ತು ವಸುಂಧರಾ ರಾಜೆ ಮೊದಲಾದವರು ಈ ಪ್ರಶಸ್ತಿ ಸ್ವೀಕರಿಸಿದ ಮೋದಿಯವರಿಗೆ ಟ್ವೀಟ್ ಅಭಿನಂದನೆ ಸಲ್ಲಿಸಿದ್ದರು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್ ಅವರು ಇದೊಂದು ಮಹತ್ ಸಾಧನೆ, ಎಲ್ಲ ಭಾರತೀಯರಿಗೂ ಇದು ಹೆಮ್ಮೆಯ ದಿನ ಎಂದು ಟ್ವೀಟಿಸಿದ್ದರು.

ಏತನ್ಮಧ್ಯೆ, ಸರಣಿ ಟ್ವೀಟ್‍ಗಳನ್ನು ಮಾಡಿದ ಪೀಯುಷ್ ಗೋಯಲ್, ಪ್ರಧಾನಿ ನರೇಂದ್ರ ಮೋದಿಗೆ ದಕ್ಕಿದ 6 ಪ್ರತಿಷ್ಠಿತ ಪುರಸ್ಕಾರಗಳನ್ನು ಪಟ್ಟಿ ಮಾಡಿದ್ದರು.ಇದರಲ್ಲಿ ಇತರ ಐದು ಪುರಸ್ಕಾರಗಳು ಸೌದಿ ಅರೇಬಿಯಾ, ಪ್ಯಾಲೇಸ್ತೀನ್ , ದಕ್ಷಿಣ ಕೊರಿಯಾ, ಅಫ್ಘಾನಿಸ್ತಾನದಿಂದ ಲಭಿಸಿದ್ದಾಗಿದೆ. ಆದರೆ ಇತ್ತೀಚಿಗಿನ ಪ್ರಶಸ್ತಿ ಬಗ್ಗೆ ಸ್ವಲ್ಪವೇ ಮಾಹಿತಿಯನ್ನು ನೀಡಲಾಗಿದೆ.

ಯಾರು ಈ ಫಿಲಿಪ್ ಕೋಟ್ಲರ್?
ಫಿಲಿಪ್ ಕೋಟ್ಲರ್ ಅಮೆರಿಕದ ಮಾರ್ಕೆಟಿಂಗ್ ಲೇಖಕ. ಪ್ರಸ್ತುತ ಇವರು ಕೆಲ್ಲೋಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಪ್ರಮುಖ ಪ್ರಾಧ್ಯಾಪಕರಾಗಿದ್ದಾರೆ ಎಂದು ವಿಕಿಪೀಡಿಯಾದಲ್ಲಿ ಮಾಹಿತಿ ಇದೆ.

ಡಿಸೆಂಬರ್‌ನಲ್ಲಿ ವರ್ಲ್ಡ್ ಮಾರ್ಕೆಟಿಂಗ್ ಸಮ್ಮಿಟ್ (ಡಬ್ಲ್ಯುಎಂಎಸ್) ಇಂಡಿಯಾ ಕಾರ್ಯಕ್ರಮ ನಡೆದಿತ್ತು. ಈ ವೆಬ್‍ಸೈಟ್ ಪರಿಶೀಲಿಸಿದಾಗ ವರ್ಲ್ಡ್ ಮಾರ್ಕೆಟಿಂಗ್ ಸಮ್ಮಿಟ್ ಗ್ರೂಪ್ ಆರಂಭವಾಗಿದ್ದು 2011ರಲ್ಲಿ.ಫಿಲಿಪ್ ಕೋಟ್ಲರ್ ಇದರ ಸಂಸ್ಥಾಪಕರಾಗಿದ್ದಾರೆ.ವರ್ಲ್ಡ್ ಮಾರ್ಕೆಟಿಂಗ್ ಸಮ್ಮಿಟ್ ಗ್ರೂಪ್, ಕೋಟ್ಲರ್ ಇಂಪಾಕ್ಟ್ (ಇದೇ ಕಂಪನಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್ ಪಾಲುದಾರರು) ಮತ್ತು ಸುಸ್ಲೆನ್ಸ್ ಇಂಟರ್‌ನ್ಯಾಷನಲ್ ಪ್ರೈವೆಟ್ಲಿಮಿಟೆಡ್ ಎಂಬ ಅಲಿಗಢ ಮೂಲದ ಕಂಪನಿಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಮಾಡಿದೆ.ಸುಸ್ಲೆನ್ಸ್ ಇಂಟರ್‌ನ್ಯಾಷನಲ್ ಪ್ರೈ.ಲಿಮಿಟೆಡ್ 2017ರಲ್ಲಿ ಆರಂಭವಾದ ಕಂಪನಿಯಾಗಿದೆ.

ಏನಿದು ಒಪ್ಪಂದ?
ಭಾರತದಲ್ಲಿ ಮೂರು ವರ್ಷ ಡಬ್ಲ್ಯುಎಂಎಸ್ ಆಯೋಜಿಸಲು ಇರುವ ಒಪ್ಪಂದ ಇದಾಗಿದೆ.

ಪ್ರಶಸ್ತಿಗೆ ಕೋಟ್ಲರ್ ಹೆಸರು ಹೇಗೆ ಬಂತು?
ವೆಬ್‍ಸೈಟ್‍ನಲ್ಲಿರುವ ಮಾಹಿತಿ ಪ್ರಕಾರ 2018ರಲ್ಲಿ ಕೋಟ್ಲರ್ ಅವರು ತಮ್ಮ ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ಪ್ರಶಸ್ತಿ ಆಯೋಜಕರಾದ ಕೋಟ್ಲರ್ ಇಂಪಾಕ್ಟ್ ಮತ್ತು ಧನ್‍ಬಾದ್‍ನ ಐಐಟಿಯ ಡಿಪಾರ್ಟ್ಮೆಂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್ (ಐಎಸ್ಎಂ)ಗೆ ಅನುಮತಿ ನೀಡಿದ್ದರು.

ಕಾರ್ಯಕ್ರಮ ನಡೆದದ್ದು ಯಾವಾಗ?
ವರ್ಲ್ಡ್ ಮಾರ್ಕೆಟಿಂಗ್ ಸಮ್ಮಿಟ್ ಇಂಡಿಯಾ 2018 ಎಂಬ ಕಾರ್ಯಕ್ರಮವು ಡಿಸೆಂಬರ್ 14, 2018ರಂದು ದೆಹಲಿಯ ಪ್ರೈಡ್ ಪ್ಲಾಜಾ ಹೋಟೆಲ್‍ನಲ್ಲಿ ನಡೆದಿತ್ತು.ಈ ಕಾರ್ಯಕ್ರಮದಲ್ಲಿಕೇಂದ್ರ ಸರ್ಕಾರದ ಥಿಂಕ್ ಟ್ಯಾಂಕ್, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಪ್ರಧಾನ ಭಾಷಣ ಮಾಡಿದ್ದರು.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಮಾರ್ಕೆಟಿಂಗ್‍ನಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ನೀಡುವ ಕೋಟ್ಲರ್ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ₹1 ಲಕ್ಷದಷ್ಟು ಶುಲ್ಕ ಪಾವತಿಸಬೇಕು.

ದೆಹಲಿಯಲ್ಲಿ ನಡೆದ ಕಾರ್ಯಕ್ರಮ ಪ್ರಾಯೋಜಕರು ಯಾರು?
GAIL ಇಂಡಿಯಾ, ಬಾಬಾ ರಾಮದೇವ್ ಅವರ ಪತಂಜಲಿ ಗ್ರೂಪ್, ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರ ಸಹ ಮಾಲೀಕತ್ವದ ರಿಪಬ್ಲಿಕ್ ಟಿವಿ ಮತ್ತು ಇತರ ಕಂಪನಿಗಳು.ಈ ಹಿಂದಿನ ಕೆಲವು ಕಾರ್ಯಕ್ರಮಗಳ ಪಾಲುದಾರಿಕೆಯನ್ನು ಡಿಜಿಟಲ್ ಕಂಟೆಂಟ್ ವೇದಿಕೆಯಾದ ವಿಟ್ಟೀ ಫೀಡ್ ವಹಿಸಿತ್ತು.ಈ ಪ್ರಶಸ್ತಿ ವಿಟ್ಟಿ ಫೀಡ್‍ಗೂ ಲಭಿಸಿದೆ.

7, ಲೋಕ ಕಲ್ಯಾಣ್ ಮಾರ್ಗ್ನಲ್ಲಿರುವಮೋದಿ ಅವರ ನಿವಾಸದಲ್ಲಿಈ ಪ್ರಶಸ್ತಿ ಪ್ರದಾನ ಮಾಡುವಾಗ ಅಲ್ಲಿ ಉಪಸ್ಥಿತರಿದ್ದ ಪ್ರೊಫೆಸರ್ ಜಗದೀಶ್ ಸೇಥ್ ಆಗಲೀ, ಫಿಲಿಪ್ ಕೋಟ್ಲರ್ ಆಗಲೀ ಈ ಪ್ರಶಸ್ತಿಯ ನಿರ್ಣಾಯಕರ ಬಗ್ಗೆ ಟ್ವೀಟ್ ಮಾಡಿಲ್ಲ.ವೆಬ್‍ಸೈಟ್‍ನಲ್ಲಿಯೂ ಈ ಬಗ್ಗೆ ಮಾಹಿತಿ ಇಲ್ಲ.ಅಂದಹಾಗೆ ಮೋದಿಗೆ ನೀಡಿದ ಪ್ರಶಸ್ತಿ ಪತ್ರದಲ್ಲಿ ಕೋಟ್ಲರ್ ಅವರ ಸಹಿಯಂತೂ ಇದೆ.

ಇವರೇನಂತಾರೆ?
ಡಬ್ಲ್ಯುಎಂಎಸ್ ವೆಬ್‍ಸೈಟ್‍ನಲ್ಲಿ ಹೇಳಿದಂತೆ ಪ್ರಶಸ್ತಿ ಸಮಿತಿಯ ಉಸ್ತುವಾರಿ ವಹಿಸಿರುವ ಐಐಟಿ (ಐಎಸ್ಎಂ) ಧನ್‍ಬಾದ್‍ನ ಡಾ.ಪ್ರಮೋದ್ ಪಾಠಕ್ ಅವರ ಪ್ರಕಾರ ಕೋಟ್ಲರ್ ಮಾರ್ಕೆಟಿಂಗ್ ಎಕ್ಸಲೆನ್ಸ್ ಅವಾರ್ಡ್ ಯಾರಿಗೆ ನೀಡಬೇಕೆಂದು ತೀರ್ಮಾನವಾಗಿದ್ದು, ಇದನ್ನು ಬೇರೆಯೇ ಪ್ರಕ್ರಿಯೆ ಮೂಲಕ ನೀಡಲಾಗುವುದು ಎಂದಿದ್ದಾರೆ.

ಈ ಬಗ್ಗೆ ದಿ ವೈರ್ ಜತೆ ಮಾತನಾಡಿದ ಪಾಠಕ್, ಮೋದಿಯವರಿಗೆ ನೀಡಿದ ಪ್ರಶಸ್ತಿ ಬಗ್ಗೆ ನನಗೇನೂ ತಿಳಿದಿಲ್ಲ ಈ ಬಗ್ಗೆ ತೌಸೀಫ್ ಜಿಯಾ ಸಿದ್ದಿಖಿ ಅವರಲ್ಲಿ ಕೇಳಿ ಅಂದಿದ್ದಾರೆ.

ಸುಸ್ಲೆನ್ಸ್ ರಿಸರ್ಚ್ ಇಂಟರ್ ನ್ಯಾಷನಲ್ ಇನ್ಸಿಟ್ಯೂಟ್ ಪ್ರೈ.ಲಿಮಿಟೆಡ್‍ನ ಸಂಸ್ಥಾಪಕರಾಗಿದ್ದಾರೆ ಸಿದ್ದಿಖಿ.ಇವರು ಬಹರೇನ್ ಮತ್ತು ಸೌದಿ ಅರೇಬಿಯಾದಲ್ಲಿ ಫಿಲಿಪ್ ಕೋಟ್ಲರ್ ಕಂಪನಿಯ ಪ್ರತಿನಿಧಿಯಾಗಿದ್ದಾರೆ.ಡಬ್ಲ್ಯುಎಂಸ್ 18 ಮಾರ್ಕೆಟಿಂಗ್ ಎಕ್ಸಲೆನ್ಸ್ ಅವಾರ್ಡ್ ನೀಡುವ ಪ್ರಶಸ್ತಿ ಸಮಿತಿಯಲ್ಲಿದ್ದಾರೆ ಇವರು. ಆದರೆ ಮೋದಿಯವರಿಗೆ ನೀಡಿದ ಅಧ್ಯಕ್ಷೀಯ ಪ್ರಶಸ್ತಿಯ ನಿರ್ಣಯ ಪ್ರಕ್ರಿಯೆ ಹೇಗೆ ಎಂಬುದರ ಬಗ್ಗೆ ಮಾತನಾಡಲು ಇವರು ನಿರಾಕರಿಸಿದ್ದಾರೆ.ಇದು ತುಂಬಾ ಗೌಪ್ಯವಾದ ಪ್ರಶಸ್ತಿ ಎಂದು ಸಿದ್ದಿಖಿ ಹೇಳಿರುವುದಾಗಿ ದಿ ವೈರ್ ವರದಿ ಮಾಡಿದೆ.

ರಾಹುಲ್ ಟ್ವೀಟ್
ಪ್ರಧಾನಿ ಮೋದಿಗೆ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ ಲಭಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.


ಜಗತ್ತಿನ ಖ್ಯಾತ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ ಪಡೆದ ಪ್ರಧಾನಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದು ಎಷ್ಟೊಂದು ಪ್ರಸಿದ್ಧ ಅಂದರೆ ಈ ಪ್ರಶಸ್ತಿಗೆ ನಿರ್ಣಾಯಕರೇ ಇಲ್ಲ.ಈವರೆಗೆ ಈ ಪ್ರಶಸ್ತಿಯನ್ನು ಯಾರೂ ಪಡೆದಿಲ್ಲ ಮತ್ತು ಈ ಪ್ರಶಸ್ತಿ ಹಿಂದಿರುವುದು ಯಾವುದೋ ಹೇಳ ಹೆಸರಿಲ್ಲದ ಅಲಿಗಢ ಕಂಪನಿ.
ಆ ಕಾರ್ಯಕ್ರಮದ ಆಯೋಜಕರು: ಪತಂಜಲಿ ಮತ್ತು ರಿಪಬ್ಲಿಕ್ ಟಿವಿ ಎಂದು ದಿ ವೈರ್ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಸ್ಮೃತಿ ಇರಾನಿ, ತಮ್ಮ ಕುಟುಂಬದವರಿಗೇ ಭಾರತ ರತ್ನ ನೀಡಲು ನಿರ್ಧರಿಸಿದ್ದ ಕುಟುಂಬದವರೇ ಈ ರೀತಿ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT