ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೀಮನ್ ನಿಧನ: ನ್ಯಾಯಾಂಗದ ದಾರಿಯಲ್ಲಿ ಸುದೀರ್ಘ ಪಯಣ...

Published 21 ಫೆಬ್ರುವರಿ 2024, 6:36 IST
Last Updated 21 ಫೆಬ್ರುವರಿ 2024, 6:36 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್.ನರೀಮನ್ ನಿಧನರಾಗಿದ್ದಾರೆ. 70 ವರ್ಷಗಳಿಗೂ ಹೆಚ್ಚು ವಕೀಲಿಕೆಯಲ್ಲಿ ಅಪಾರ ಅನುಭವ ಹೊಂದಿದ್ದ ಅವರು ರಾಜ್ಯದ ಜಲವಿವಾದಗಳಲ್ಲಿ ಕರ್ನಾಟಕದ ಪರವಾಗಿ ಸಮರ್ಥ ವಾದ ಮಂಡಿಸಿ ಹಲವು ವ್ಯಾಜ್ಯಗಳಲ್ಲಿ ಜಯ ತಂದು ಕೊಟ್ಟಿದ್ದರು.

ನರೀಮನ್ ಅವರು 1929ರ ಜನವರಿ 10ರಂದು ಮ್ಯಾನ್ಮಾರ್‌ನಲ್ಲಿ ಜನಿಸಿದರು. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಬಳಿಕ ಮುಂಬೈಗೆ ಬಂದು ಪದವಿ ಪಡೆದರು. 1950ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲಿಕೆ ಆರಂಭಿಸಿದರು.

1971ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾದರು. ಎರಡು ವರ್ಷಗಳ ಬಳಿಕ ಅವರನ್ನು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಲಾಯಿತು. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. ಇದನ್ನು ವಿರೋಧಿಸಿ ಸಾಲಿಸಿಟರ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

ನಂತರದ ದಿನಗಳಲ್ಲಿ ವಿವಿಧ ರಾಜ್ಯಗಳ ದೊಡ್ಡ ದೊಡ್ಡ ವ್ಯಾಜ್ಯಗಳಲ್ಲಿ ವಾದ ಮಂಡಿಸಿದರು. ಭೋಪಾಲ್‌ ಅನಿಲ ದುರಂತ ಪ್ರಕರಣ, ಗುಜರಾತ್‌ನ ನರ್ಮದಾ ಪುನರ್ವಸತಿ ಪ್ರಕರಣ, ಕರ್ನಾಟಕದ ಕಾವೇರಿ ಜಲ ವಿವಾದ ಹಾಗೂ ಜಯಲಲಿತಾ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು. 

1991–2010ರ ವರೆಗೆ ಭಾರತದ ಬಾರ್ ಒಕ್ಕೂಟದ ಅಧ್ಯಕ್ಷರಾಗಿದ್ದರು. 1989–2005ರವರೆಗೆ ಪ್ಯಾರಿಸ್‌ನಲ್ಲಿ ಅಂತರರಾಷ್ಟ್ರೀಯ ವಾಣಿಜ್ಯ ಮಂಡಳಿಯ ನ್ಯಾಯಾಲಯದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

1999ರಿಂದ 2005ರವರೆಗೆ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿಯೂ ನೇಮಕಗೊಂಡಿದ್ದರು. 1991ರಲ್ಲಿ ಪದ್ಮಭೂಷಣ ಹಾಗೂ 2007ರಲ್ಲಿ ಪದ್ಮ ವಿಭೂಷಣ ಪುರಸ್ಕಾರಕ್ಕೆ ಭಾಜನರಾಗಿದ್ದರು.

ನರೀಮನ್ ಅವರಿಗೆ ಪುತ್ರ ಮತ್ತು ಪತ್ರಿ ಇದ್ದಾರೆ. ಇವರ ಮಗ ರೋಹಿಂಟನ್‌ ಸುಪ್ರೀಂ ಕೋರ್ಟ್‌ ವಕೀಲರಾಗಿದ್ದಾರೆ. 2011–2013ರಲ್ಲಿ ಭಾರತದ ಸಾಲಿಸಿಟರ್ ಜನರಲ್ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT