ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fali Nariman | ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್.ನರೀಮನ್ ನಿಧನ

Published 21 ಫೆಬ್ರುವರಿ 2024, 3:07 IST
Last Updated 21 ಫೆಬ್ರುವರಿ 2024, 3:07 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಜ್ಯ ಜಲವಿವಾದಗಳಲ್ಲಿ ಕರ್ನಾಟಕ ಕಾನೂನು ತಂಡದ ದಂಡನಾಯಕರಾಗಿದ್ದ ಪ್ರಖ್ಯಾತ ನ್ಯಾಯಶಾಸ್ತ್ರಜ್ಞ ಹಾಗೂ ಸಂವಿಧಾನ ತಜ್ಞ ಫಾಲಿ ಸ್ಯಾಮ್‌ ನರೀಮನ್‌ (95) ಇಲ್ಲಿ ವಿಧಿವಶರಾದರು. 

ನರೀಮನ್‌ ಬುಧವಾರ ಮಧ್ಯರಾತ್ರಿ 12.45ಕ್ಕೆ ಕೊನೆಯುಸಿರೆಳೆದರು. ಅವರು ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಅವರಿಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾದ ಪುತ್ರ ರೋಹಿಂಟನ್‌ ಎಫ್‌.ನರೀಮನ್‌ ಹಾಗೂ ಪುತ್ರಿ ಅನಾಹೀತಾ ಎಫ್‌. ನರೀಮನ್‌ ಇದ್ದಾರೆ. 

70 ವರ್ಷಗಳ ಸುದೀರ್ಘ ವಕೀಲ ವೃತ್ತಿಯಲ್ಲಿ ನರೀಮನ್‌ ಅವರು ಭೋಪಾಲ್‌ ಅನಿಲ ದುರಂತ, ಟಿಎಂಎ ಪೈ ಪ್ರಕರಣ, ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ, ಗುಜರಾತ್‌ನ ನರ್ಮದಾ ಪುನರ್ವಸತಿ ಪ್ರಕರಣ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ‍ಪ್ರಕರಣ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಾಜ್ಯಗಳಲ್ಲಿ ವಾದಿಸಿದ್ದಾರೆ. ಹಲವು ಕೃತಿಗಳನ್ನು ರಚಿಸಿದ್ದಾರೆ. 

ದೇಶದ ಶ್ರೇಷ್ಠ ಜಲವಿವಾದ ತಜ್ಞರಾಗಿದ್ದ ನರೀಮನ್‌ ಅವರು ಮೂರು ದಶಕಗಳ ಕಾಲ ಕರ್ನಾಟಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದರು ಹಾಗೂ ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿ ಹಲವು ವ್ಯಾಜ್ಯಗಳಲ್ಲಿ ಜಯ ತಂದುಕೊಟ್ಟಿದ್ದರು. 

1990ರಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ, ಕಾನೂನು ಸಚಿವರಾಗಿದ್ದ ಎಂ.ವೀರಪ್ಪ ಮೊಯಿಲಿ, ನೀರಾವರಿ ಸಚಿವರಾಗಿದ್ದ ಪುಟ್ಟಸ್ವಾಮಿಗೌಡ ಅವರು ನವದೆಹಲಿಯಲ್ಲಿ ಕಾವೇರಿ ಕೋಶ ಸ್ಥಾಪಿಸಿ ರಾಷ್ಟ್ರಮಟ್ಟದಲ್ಲಿ ಹೆಸರಾಗಿರುವ ವಕೀಲರೇ ರಾಜ್ಯದ ಪರ ವಾದ ಮಂಡಿಸಬೇಕು ಎಂಬ ಆಲೋಚನೆಯೊಂದಿಗೆ ನರೀಮನ್‌ ಅವರನ್ನು ಆಯ್ಕೆ ಮಾಡಿದ್ದರು. 1990ರಲ್ಲಿ ಕಾವೇರಿ ನ್ಯಾಯಮಂಡಳಿ ರೂಪುಗೊಂಡಾಗಿನಿಂದ ಅವರು ರಾಜ್ಯದ ಪರ ರಚನಾತ್ಮಕ ಮತ್ತು ಕ್ರಿಯಾತ್ಮಕ ವಾದ ಮಂಡಿಸಿದ್ದರು. ಕೃಷ್ಣಾ ಜಲವಿವಾದ ಮತ್ತು ಮಹದಾಯಿ ಪ್ರಕರಣಗಳಲ್ಲೂ ಅವರು ಸಮರ್ಥವಾಗಿ ವಾದ ಮಂಡಿಸಿ ರಾಜ್ಯಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಕಾವೇರಿ ಜಲ ವಿವಾದ ಭುಗಿಲೆದ್ದಾಗ ನರೀಮನ್ ಅವರು ಕರ್ನಾಟಕದ ಹಕ್ಕನ್ನು ಸಮರ್ಥವಾಗಿ ಮಂಡಿಸಿದ್ದರಿಂದ ರಾಜ್ಯಕ್ಕೆ ಹೆಚ್ಚು ನೀರು ಸಿಕ್ಕಿತ್ತು.

2016ರಲ್ಲಿ ಆವರಿಸಿದ್ದ ಬರ ರಾಜ್ಯಕ್ಕೆ ಸವಾಲಿನದ್ದಾಗಿತ್ತು. ಪ್ರತಿ ವಾರ ಇಂತಿಷ್ಟು ನೀರು ಬಿಡಲೇಬೇಕು ಎಂಬ ಸುಪ್ರೀಂ ಕೋರ್ಟ್‌ನ ಆದೇಶಗಳಿಂದ ರಾಜ್ಯ ರೋಸಿ ಹೋಗಿತ್ತು. ಸೆಪ್ಟೆಂಬರ್ 21ರಿಂದ 27ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್‌ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಕಾವೇರಿ ನದಿಯಲ್ಲಿ ನೀರಿಲ್ಲದ ಕಾರಣ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಅಸಾಧ್ಯ ಎಂದು ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ನ್ಯಾಯಪೀಠದ ಆದೇಶ ಪಾಲಿಸದ ಕಾರಣಕ್ಕೆ ಕರ್ನಾಟಕದ ಪರವಾಗಿ ವಾದಿಸಲು ನರೀಮನ್‌ ನಿರಾಕರಿಸಿದ್ದರು. 

2016ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾದಾಗ ನರೀಮನ್‌ ವಿರುದ್ಧ ರಾಜಕಾರಣಿಗಳು ಟೀಕೆ ಮಾಡಿದ್ದರು. ನಿಂದನೆಗಳಿಂದ ಮನನೊಂದು ಕರ್ನಾಟಕದ ಗೊಡವೆ ಬೇಡವೆಂದು ನರೀಮನ್‌ ದೂರ ಸರಿದಿದ್ದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರು ಮನವೊಲಿಸಿದ್ದರು. ‘ಕರ್ನಾಟಕವು ದಶಕಗಳಿಂದ ನನಗೆ ಹತ್ತಿರವಾಗಿರುವ ರಾಜ್ಯ. ನನ್ನ ಕರ್ನಾಟಕ ಪ್ರೀತಿಯನ್ನು ಯಾರೂ ಪ್ರಶ್ನಿಸಲಾಗದು. ರಾಜ್ಯದಿಂದ ನಾನು ಪಡೆಯುತ್ತಿರುವ ಶುಲ್ಕ ನಾನು ಇತರರಿಂದ ಪಡೆಯುವುದರ ಮೂರನೇ ಒಂದರಷ್ಟು ಮಾತ್ರ. ರಾಜ್ಯದ ಪ್ರಕರಣಗಳು ಇದ್ದಾಗ ಇತರೆ ಪ್ರಕರಣಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಈ ನಿರ್ಧಾರದಿಂದ ಉಂಟಾಗುವ ಹಣಕಾಸು ನಷ್ಟವನ್ನೂ ನಾನು ಲೆಕ್ಕಿಸಿಲ್ಲ. ನನ್ನ ಸೇವೆ ಕರ್ನಾಟಕಕ್ಕೆ ಬೇಡವೆಂದು ಸಜ್ಜನಿಕೆಯಿಂದ ಹೇಳಿದ್ದರೆ ಸಾಕಿತ್ತು. ದುಬಾರಿ ಶುಲ್ಕ, ಬೆನ್ನಿಗೆ ಚೂರಿ, ಮೋಸ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ ಅವಹೇಳನ ಮಾಡುವ ಅಗತ್ಯ ಏನಿತ್ತು’ ಎಂದು ಜಲಸಂಪನ್ಮೂಲ ಸಚಿವರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. 

ಕಾವೇರಿ ಜಲವಿವಾದದ ಅಂತಿಮ ತೀರ್ಪನ್ನು 2018ರ ಫೆಬ್ರುವರಿ 16ರಂದು ಸುಪ್ರೀಂ ಕೋರ್ಟ್‌ ಪ್ರಕಟಿಸಿತ್ತು. ಈ ವೇಳೆ ನರೀಮನ್‌ ಅವರ ನಿಲುವಿಗೆ ನ್ಯಾಯಪೀಠ ಮೆಚ್ಚುಗೆ ವ್ಯಕ್ತಪಡಿಸಿತ್ತು. ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಸಬೇಕಿದ್ದ ವಾರ್ಷಿಕ 192 ಟಿಎಂಸಿ ಅಡಿ ನೀರಿನ ಪ್ರಮಾಣವನ್ನು 177.25 ಟಿಎಂಸಿ ಅಡಿಗೆ ಕಡಿತ ಮಾಡಿ ತೀರ್ಪು ನೀಡಿತ್ತು. 

ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಅವಾಸ್ತವಿಕವಾಗಿ ವಾದ ಮಂಡಿಸುತ್ತಿದೆ ಎಂದು ನರೀಮನ್‌ ಅವರು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಚೆನ್ನೈ ನಗರದ ಕುಡಿಯುವ ನೀರಿನ ಅಗತ್ಯಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ತಮ್ಮ ಪಾಲಿನ ತಲಾ 5 ಟಿಎಂಸಿ ಅಡಿ ನೀರನ್ನು ಉದಾರವಾಗಿ ಬಿಟ್ಟುಕೊಟ್ಟಿರುವುದನ್ನು ತಿಳಿಸಿದ್ದರು. ಈ ಮೂಲಕ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 4.75 ಟಿಎಂಸಿ ಅಡಿ ನೀರು ಸಿಗುವಂತೆ ಮಾಡಿದ್ದರು.

ತುರ್ತು ಪರಿಸ್ಥಿತಿ ವಿರೋಧಿಸಿದ್ದ ನರೀಮನ್‌: 1929ರ ಜನವರಿ 10 ರಂದು ಜನಿಸಿದ ಅವರು 1950ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದರು. 1961ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಹತ್ತು ವರ್ಷಗಳ ನಂತರ ಅವರು ದೆಹಲಿಗೆ ಸ್ಥಳಾಂತರಗೊಂಡರು. ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕೆ ನಡೆಸಿದರು. ಕಾಂಗ್ರೆಸ್‌ ಸರ್ಕಾರವು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ಅವರನ್ನು 1972ರಲ್ಲಿ ನೇಮಿಸಿತು. ದೇಶದಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಅವರು ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮಭೂಷಣ (1991) ಹಾಗೂ ಪದ್ಮವಿಭೂಷಣಕ್ಕೆ (2007) ಭಾಜನರಾಗಿದ್ದಾರೆ. ಅವರು 1999-2005 ರವರೆಗೆ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT