ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ರಮ್‌ ಲ್ಯಾಂಡರ್‌ ಗುರುತಿಸಿದ ನಾಸಾದ ಬಾಹ್ಯಾಕಾಶ ನೌಕೆ

Published 22 ಜನವರಿ 2024, 16:08 IST
Last Updated 22 ಜನವರಿ 2024, 16:08 IST
ಅಕ್ಷರ ಗಾತ್ರ

ನವದೆಹಲಿ: ಚಂದ್ರನ ಸುತ್ತ ಸುತ್ತುತ್ತಿರುವ ನಾಸಾದ ಬಾಹ್ಯಾಕಾಶ ನೌಕೆಯಲ್ಲಿರುವ ಲೇಸರ್ ಉಪಕರಣವು ಭಾರತದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಅನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.

ಚಂದ್ರನ ಪರಿವೀಕ್ಷಣಾ ಕಕ್ಷೆಗಾಮಿಯು (ಎಲ್‌ಆರ್‌ಒ) ವಿಕ್ರಮ್‌ ಲ್ಯಾಂಡರ್‌ನಲ್ಲಿರುವ ಸಣ್ಣ ಗಾತ್ರದ ರೆಟ್ರೊರಿಫ್ಲೆಕ್ಟರ್‌ ಸಾಧನದ ಮೇಲೆ ಲೇಸರ್ ಕಿರಣ ಹಾಯಿಸಿದ್ದು ಅದು ಪ್ರತಿಫಲನವಾಗಿದೆ. ಇದು ಚಂದ್ರನ ಮೇಲ್ಮೈಯಲ್ಲಿ ತಾಣಗಳನ್ನು ನಿಖರವಾಗಿ ಪತ್ತೆಹಚ್ಚುವ ಹೊಸ ವಿಧಾನವನ್ನು ಅಭಿವೃದ್ಧಿಪಡಿಸುವ ಅವಕಾಶದ ಬಾಗಿಲು ತೆರೆದಿದೆ ಎಂದು ನಾಸಾ ಹೇಳಿದೆ.

ಕಳೆದ ವರ್ಷದ ಡಿಸೆಂಬರ್ 12ರಂದು ಎಲ್‌ಆರ್‌ಒದಿಂದ ಲೇಸರ್ ಕಿರಣಗಳನ್ನು ಅದರ ಕಡೆಗೆ ರವಾನಿಸಿದಾಗ ವಿಕ್ರಮ್‌ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೆಂಜಿನಸ್‌ ಕುಳಿ ಬಳಿ, ಎಲ್‌ಆರ್‌ಒನಿಂದ 100 ಕಿಲೋಮೀಟರ್ ದೂರದಲ್ಲಿರುವುದು ಪತ್ತೆಯಾಗಿದೆ ಎಂದು ಅದು ಹೇಳಿದೆ.

ವಿಕ್ರಮ್‌ನಲ್ಲಿರುವ ನಾಸಾದ ಒಂದು ಸಣ್ಣ ರೆಟ್ರೊರಿಫ್ಲೆಕ್ಟರ್‌ನಿಂದ ಪ್ರತಿಫಲಿಸಿದ ಬೆಳಕು ಎಲ್‌ಆರ್‌ಒದಲ್ಲಿ ದಾಖಲಾದ ನಂತರ, ನಾಸಾ ವಿಜ್ಞಾನಿಗಳು ತಮ್ಮ ತಂತ್ರವು ಫಲಿಸಿದೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲದೆ, ಈ ಫಲಿತಾಂಶವನ್ನು ವಿಶ್ಲೇಷಿಸಿದಾಗ, ಸೂಟ್‌ಕೇಸ್ ಗಾತ್ರದ ರೆಟ್ರೊರಿಫ್ಲೆಕ್ಟರ್‌ನಿಂದ ಹೊಮ್ಮಿದ ಪ್ರತಿಫಲನದ ಬೆಳಕು, ಚಂದ್ರನು ನಮ್ಮ ಗ್ರಹದಿಂದ ವರ್ಷಕ್ಕೆ 3.8 ಸೆಂಟಿಮೀಟರ್‌ಗಳಷ್ಟು ದೂರ ಸರಿಯುತ್ತಿದ್ದಾನೆ ಎನ್ನುವ ಅಂಶವನ್ನು ಬಹಿರಂಗಪಡಿಸಿದೆ ಎಂದು ನಾಸಾ ಹೇಳಿದೆ.

ಈ ರೆಟ್ರೊರಿಫ್ಲೆಕ್ಟರ್‌ ತಂತ್ರವನ್ನು ಇನ್ನಷ್ಟು ಉತ್ತಮ ಪಡಿಸಿದರೆ ಭವಿಷ್ಯದ ಬಾಹ್ಯಾಕಾಶ ಯೋಜನೆಗಳನ್ನು ಹೆಚ್ಚು ವ್ಯಾಪಕವಾಗಿ ಬಳಸಲು ಸಾಧ್ಯವಾಗಲಿದೆ ಎಂದು ನಾಸಾ ಹೇಳಿರುವುದಾಗಿ ನಾಸಾ ಗೊಡ್ಡಾರ್ಡ್ ಸ್ಪೇಸ್‌ ಫ್ಲೈಟ್‌ ಸೆಂಟರ್‌ನ ಕ್ಸಿಯಾಲಿ ಸನ್ ಹೇಳಿದ್ದಾರೆ. ಇವರು ನಾಸಾ ಮತ್ತು ಇಸ್ರೊ ಪಾಲುದಾರಿಕೆಯ ಭಾಗವಾಗಿ, ವಿಕ್ರಮ್‌ ಲ್ಯಾಂಡರ್‌ನಲ್ಲಿ ಅಳವಡಿಸಲು ರೆಟ್ರೊರಿಫ್ಲೆಕ್ಟರ್‌ ಅಭಿವೃದ್ಧಿಪಡಿಸಿದ್ದ ತಂಡದ ನೇತೃತ್ವ ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT