ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧೋನ್ಮಾದದ ದೇಶ ನಿರ್ಮಿಸಲು ರಾಷ್ಟ್ರವಾದ, ‘ಭಾರತ್‌ ಮಾತಾ ಕೀ ಜೈ’ ಬಳಕೆ: ಸಿಂಗ್

Last Updated 22 ಫೆಬ್ರುವರಿ 2020, 14:11 IST
ಅಕ್ಷರ ಗಾತ್ರ

ನವದೆಹಲಿ: ಲಕ್ಷಾಂತರ ಜನರು, ನಾಗರಿಕರ ಹೊರತಾದ ಯುದ್ಧೋನ್ಮಾದದ ಮತ್ತು ಅಪ್ಪಟ ಭಾವನಾತ್ಮಕ ಕಲ್ಪನೆಯ ದೇಶ ನಿರ್ಮಿಸುವ ಸಲುವಾಗಿ ರಾಷ್ಟ್ರವಾದ ಮತ್ತು ‘ಭಾರತ್‌ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಸದ್ಯ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಪ್ರಧಾನ ಮಂತ್ರಿ, ಅರ್ಥಶಾಸ್ತ್ರಜ್ಞ ಮನಮೋಹನ ಸಿಂಗ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಜವಾಹರಲಾಲ್‌ ನೆಹರು ಅವರ ಕುರಿತ ‘ಹೂ ಈಸ್‌ ಭಾರತ್‌ ಮಾತಾ’ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಶನಿವಾರ ಅವರು ಮಾತನಾಡಿದರು.

‘ವಿಶ್ವ ವೇದಿಕೆಗಳಲ್ಲಿ ಭಾರತವು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿಂತಿರುವುದರ ಹಿಂದೆ ಮತ್ತು ಜಗತ್ತಿನ ಪ್ರಮುಖ ಶಕ್ತಿಯಾಗಿ ಕಾಣುತ್ತಿರುವುದರ ಹಿಂದೆ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್‌ ನೆಹರು ಅವರ ಪರಿಶ್ರಮವಿದೆ. ಅವರು ನವ ಭಾರತದ ಶಿಲ್ಪಿ,’ ಎಂದು ಅವರು ಬಣ್ಣಿಸಿದರು.

‘ದೇಶ ಆಗಷ್ಟೇ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದ್ದ ಕಾಲದಲ್ಲಿ, ಅತ್ಯಂತ ಕಷ್ಟದ ದಿನಗಳಲ್ಲಿ, ಇನ್ನಷ್ಟೇ ದೇಶ ನಿರ್ಮಾಣವಾಗಬೇಕಿದ್ದಕಾಲಘಟ್ಟದಲ್ಲಿ ನೆಹರು ವಿಭಿನ್ನ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನಗಳೊಂದಿಗೆ ಈ ದೇಶವನ್ನು ಮುನ್ನಡೆಸಿದ್ದಾರೆ,’ ಎಂದೂ ಸಿಂಗ್‌ ತಿಳಿಸಿದರು.

‘ಹೊಸ ಭಾರತವನ್ನು ಅಗತ್ಯದ ಹಿನ್ನೆಲೆಯಲ್ಲಿ ನೆಹರು ಅವರು ಈ ದೇಶವನ್ನು ಸಾಮರಸ್ಯ ಮತ್ತು ಏಕತೆಯ ಉದ್ದೇಶಗಳೊಂದಿಗೆ ಕಟ್ಟಿದ್ದಾರೆ,’ ಎಂದು ಅವರು ಅಭಿಪ್ರಾಯಪಟ್ಟರು.

‘ನವ ಭಾರತದ ನಿರ್ಮಾಣಕ್ಕಾಗಿ ನೆಹರು ಹಲವು ವಿಶ್ವವಿದ್ಯಾಲಯಗಳಿಗೆ, ಅಕಾಡೆಮಿಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ಆದರೆ, ಅವರು ನಿರೀಕ್ಷಿಸಿದ ದೇಶವಾಗಿ ಇಂದು ಭಾರತವಿಲ್ಲ,’ ಎಂದು ಅವರು ಹೇಳಿಕೊಂಡರು.

‘ಇವತ್ತಿನ ಸಮಾಜದ ಕೆಲ ವರ್ಗದ ಜನ ಭಾರತದ ಇತಿಹಾಸ ತಿಳಿದುಕೊಳ್ಳದೇ, ಪೂರ್ವಾಗ್ರಹಪೀಡಿತರಾಗಿ, ನೆಹರು ಅವರನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ, ನನಗೆ ವಿಶ್ವಾಸವಿದೆ. ಇತಿಹಾಸಕ್ಕೆ ಸುಳ್ಳಗಳನ್ನು ನಿರಾಕರಿಸಿ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಬಿಂಬಿಸುವ ಶಕ್ತಿ ಇದೆ,’ ಎಂದು ಅವರು ಅಭಿಪ್ರಾಯಪಟ್ಟರು.

ಲೇಖಕರಾದ ಪುರುಷೋತ್ತಮ್‌ ಅಗರ್‌ವಾಲ್‌ ಮತ್ತು ರಾಧಾ ಕೃಷ್ಣ ಅವರು ರಚಿಸಿರುವ ’ ಹೂ ಈಸ್‌ ಭಾರತ್‌ ಮಾತಾ’ ಪುಸ್ತಕದಲ್ಲಿ ನೆಹರು ಅವರ ಆತ್ಮಚರಿತ್ರೆ, ಜಗತ್ತಿನ ಸಂಕ್ಷಿಪ್ತ ಇತಿಹಾಸ, ಭಾರತದ ಅನ್ವೇಷಣೆ ಕುರಿತ ಅಂಶಗಳಿವೆ. ನೆಹರು ಅವರ ಭಾಷಣಗಳು, ಲೇಖನ, ಸ್ವಾತಂತ್ರ ಪೂರ್ವ–ನಂತರದಲ್ಲಿ ನೆಹರು ಬರೆದ ಪತ್ರಗಳು, ಸಂದರ್ಶನಗಳಿವೆ. ಈ ಪುಸ್ತಕವನ್ನು ಮೊದಲು ಇಂಗ್ಲೀಷ್‌ನಲ್ಲಿ ತರಲಾಗಿದ್ದು, ಈಗ ಕನ್ನಡದಲ್ಲೂ ಬಿಡುಗಡೆ ಮಾಡಲಾಗಿದೆ.

‘ಲಕ್ಷಾಂತರ ಜನರು, ನಾಗರಿಕರ ಹೊರತಾದ ಯುದ್ಧೋನ್ಮಾದದ ಮತ್ತು ಸಂಪೂರ್ಣ ಭಾವನಾತ್ಮಕ ಕಲ್ಪನೆಯ ಭಾರತ ಕಟ್ಟುವ ಸಲುವಾಗಿ ರಾಷ್ಟ್ರವಾದ ಮತ್ತು ‘ಭಾರತ್‌ ಮಾತಾ ಕೀ ಜೈ’ ಎಂಬ ಘೋಷಣೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ‘ಹೂ ಈಸ್‌ ಭಾರತ್‌ ಮಾತಾ’ ಪುಸ್ತಕ ಅತ್ಯಂತ ಪ್ರಸ್ತುತ ಎನಿಸಿದೆ,’ ಎಂದು ಸಿಂಗ್‌ ಇದೇ ವೇಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT