ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಧು ರಾಜೀನಾಮೆ, ಕ್ಯಾಪ್ಟನ್‌ ದೆಹಲಿಗೆ; ಪಂಜಾಬ್‌ ಕಾಂಗ್ರೆಸ್‌ ಮತ್ತೆ ಪ್ರಕ್ಷುಬ್ಧ

Last Updated 28 ಸೆಪ್ಟೆಂಬರ್ 2021, 13:45 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ಕಾಂಗ್ರೆಸ್‌ ಮತ್ತೆ ರಾಜಕೀಯ ಪ್ರಕ್ಷುಬ್ಧತೆಗೆ ಸಾಕ್ಷಿಯಾಗಿದೆ. ರಾಜ್ಯ ಘಟಕದ ಅಧ್ಯಕ್ಷನಾಗಿ ಅಧಿಕಾರಿ ವಹಿಸಿ 71 ದಿನಗಳಲ್ಲೇ ನವಜೋತ್‌ ಸಿಂಗ್‌ ಸಿಧು ರಾಜೀನಾಮೆ ಸಲ್ಲಿಸಿದ್ದಾರೆ.

ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಜುಲೈ 18ರಂದು ಮಾಜಿ ಕ್ರಿಕೆಟಿಗ ಸಿಧು ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಆಗಿನ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ವಿರುದ್ಧ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು ಹಾಗೂ ಪತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಸಿಧುಗೆ ಬೆಂಬಲ ಸೂಚಿಸಿದ್ದರು.

ಮಂಗಳವಾರ ಸಿಧು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಪ್ರತಿಕ್ರಿಯಿಸಿದ ಅಮರಿಂದರ್‌, 'ಈ ವ್ಯಕ್ತಿಗೆ ಸ್ಥಿರತೆ ಇಲ್ಲ ಅಂತ ನಾನು ಮೊದಲೇ ಹೇಳಿದ್ದೆನಲ್ಲಾ ಹಾಗೂ ಗಡಿ ರಾಜ್ಯ ಪಂಜಾಬ್‌ಗೆ ತಕ್ಕನಾದ ವ್ಯಕ್ತಿಯಲ್ಲ' ಎಂದು ಟ್ವೀಟಿಸಿದರು.

ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಸಿಧು, 'ರಾಜಿಯ ಕಾರಣಗಳಿಂದಾಗಿ ವ್ಯಕ್ತಿಯೊಬ್ಬನ ವ್ಯಕ್ತಿತ್ವದಲ್ಲಿ ಕುಸಿತ ಉಂಟಾಗುತ್ತದೆ. ನಾನು ಪಂಜಾಬ್‌ನ ಭವಿಷ್ಯ ಮತ್ತು ಪಂಜಾಬ್‌ನ ಕಲ್ಯಾಣದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಹೀಗಾಗಿ, ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್‌ ಪಕ್ಷಕ್ಕೆ ನನ್ನ ಸೇವೆ ಮುಂದುವರಿಯಲಿದೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಮೃತಸರ ಲೋಕಸಭೆ ಕ್ಷೇತ್ರದ ಮಾಜಿ ಸಂಸದ ಸಿಧು, ಬಿಜೆಪಿ ತೊರೆದು 2017ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ನೂತನ ಸರ್ಕಾರದಲ್ಲಿನ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಸಿಧು ಬೇಸರಗೊಂಡಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಆಂತರಿಕ ಭಿನ್ನಮತದ ಕಾರಣಗಳಿಂದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ 10 ದಿನಗಳು ಕಳೆದರೆ, ಸಿಧು ಆಯ್ಕೆಯ ಭಾಗವಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಪಂಜಾಬ್‌ನ 16ನೇ ಮುಖ್ಯಮಂತ್ರಿಯಾದರು. ಪಂಜಾಬ್‌ನಲ್ಲಿ ಹುದ್ದೆಗೇರಿದ ದಲಿತ ಸಮುದಾಯದ ಮೊದಲ ವ್ಯಕ್ತಿ ಚರಣ್‌ಜಿತ್‌ ಸಿಂಗ್‌ ಅವರು ಅಧಿಕಾರ ವಹಿಸಿ 8 ದಿನಗಳಷ್ಟೇ ತುಂಬಿವೆ. ಸುಖ್‌ಜಿಂದರ್‌ ಸಿಂಗ್‌ ರಂಧಾವ ಮತ್ತು ಒ.ಪಿ. ಸೋನಿ ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದಾರೆ.

ಸೆಪ್ಟೆಂಬರ್ 18 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ಅಮರಿಂದರ್‌ ದೆಹಲಿಗೆ ಭೇಟಿ ನೀಡಿದ್ದಾರೆ. ಅವರು ದೆಹಲಿಯಲ್ಲಿ ಅಮಿತ್‌ ಶಾ ಸೇರಿದಂತೆ ಕೆಲವು ಬಿಜೆಪಿ ನಾಯಕರನ್ನು ಭೇಟಿಯಾಗಬಹುದು ಎಂದು ಕೆಲವು ಮಾಧ್ಯಮ ವರದಿ ಮಾಡಿದ ನಂತರ ಅಮರಿಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀಣ್ ತುಕ್ರಾಲ್, ಸಿಂಗ್ ಭೇಟಿ ಕುರಿತಂತೆ ವಿವರಣೆ ನೀಡಿದ್ದಾರೆ.

'ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ದೆಹಲಿ ಭೇಟಿ ಕುರಿತಂತೆ ಹಲವು ಊಹಾಪೋಹಗಳು ಎದ್ದಿವೆ. ವೈಯಕ್ತಿಕ ಕಾರಣಕ್ಕಾಗಿ ಅವರು ದೆಹಲಿಗೆ ಭೇಟಿ ನೀಡಲಿದ್ದಾರೆ. ಈ ಸಮಯದಲ್ಲಿ ಅವರು ಕೆಲವು ಸ್ನೇಹಿತರನ್ನು ಭೇಟಿ ಮಾಡಲಿದ್ದಾರೆ ಮತ್ತು ನೂತನ ಮುಖ್ಯಮಂತ್ರಿಗಾಗಿ ಕಪುರ್‌ತಲಾದ ಮನೆಯನ್ನು ಖಾಲಿ ಮಾಡುತ್ತಾರೆ. ಈ ವಿಚಾರವಾಗಿ ಯಾವುದೇ ಅನಗತ್ಯ ಊಹಾಪೋಹಗಳ ಅಗತ್ಯವಿಲ್ಲ' ಎಂದು ತುಕ್ರಾಲ್ ಟ್ವೀಟ್ ಮಾಡಿದ್ದಾರೆ.

ರಾಜೀನಾಮೆಯ ಬಳಿಕ ನನಗೆ ಅವಮಾನವಾಗಿದೆ ಎಂದಿದ್ದ ಅಮರಿಂದರ್‌, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು 'ಅನನುಭವಿ'ಗಳು ಎಂದು ಕರೆದರು. ಸಿಧು ಅವರನ್ನು 'ರಾಷ್ಟ್ರ ವಿರೋಧಿ' ಮತ್ತು 'ಅಪಾಯಕಾರಿ' ಎಂದಿದ್ದರು.

ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಬುಧವಾರ ಪಂಜಾಬ್‌ಗೆ ಭೇಟಿ ನೀಡುತ್ತಿದ್ದಾರೆ. ಮುಂದಿನ ಐದು–ಆರು ತಿಂಗಳಲ್ಲಿ ಪಂಜಾಬ್‌ ವಿಧಾನಸಭೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT