ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಗ್‌ ಬಿ ಮೊಮ್ಮಗಳ ಐಐಎಂ ಅಹಮದಾಬಾದ್ ಪ್ರವೇಶ: ಸಂತಸ ಹಂಚಿಕೊಂಡ ನವ್ಯಾ

Published 2 ಸೆಪ್ಟೆಂಬರ್ 2024, 14:51 IST
Last Updated 2 ಸೆಪ್ಟೆಂಬರ್ 2024, 14:51 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ನ ಹಿರಿಯ ನಟ ಅಮಿತಾಬ್‌ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಐಐಎಂ ಅಹಮದಾಬಾದ್ ಸೇರಿದ ಇನ್‌ಸ್ಟಾಗ್ರಾಂ ಪೋಸ್ಟ್ ಸಾಮಾಜಿಕ ಮಾಧ್ಯಮದ ಗಮನ ಸೆಳೆದಿದೆ.

ಅಮಿತಾಬ್ ಹಾಗೂ ಜಯಾ ಬಚ್ಚನ್ ಅವರ ಪುತ್ರಿ ಶ್ವೇತಾ ಅವರ ಮಗಳಾದ ನವ್ಯಾ ನವೇಲಿ ನಂದಾ ಅವರು ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಕೋರ್ಸ್‌ಗೆ ದಾಖಲಾಗಿದ್ಧಾರೆ. 

ಎಂಬಿಎ ದಾಖಲಾಗಿರುವುದಕ್ಕೆ ಐಐಎಂ ಅಹಮದಾಬಾದ್‌ನ ಸಹ ಪ್ರಾಧ್ಯಾಪಕಿ ಪ್ರಮೀಳಾ ಅಗರವಾಲ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ‘ಅವರ ಶೈಕ್ಷಣಿಕ ವಿವರಗಳು ಅದ್ಭುತವಾಗಿವೆ. ಹೀಗಾಗಿ ಕ್ಯಾಟ್ (CAT) ಪ್ರವೇಶ ಪರೀಕ್ಷೆ ಎದುರಿಸುವ ಅಗತ್ಯವಿಲ್ಲ. ಆದರೂ ಇಲ್ಲಿನ ಕಠಿಣ ತರಬೇತಿಗಾಗಿ ಧೈರ್ಯದಿಂದ ಮುಂದೆ ಬಂದು ದಾಖಲಾಗುತ್ತಿರುವುದು ಸಂತಸದ ವಿಷಯ. ಇತರ ವಿದ್ಯಾರ್ಥಿಗಳಂತೆಯೇ ನವ್ಯಾ ಕೂಡಾ ‘ಐಐಎಂ–ಎ’ನ ಶೈಕ್ಷಣಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿ’ ಎಂದು ಆಶಿಸಿದ್ದಾರೆ.

ಅಮೆರಿಕದ ಫರ್ಧಾಮ್‌ ವಿಶ್ವವಿದ್ಯಾಲಯದಿಂದ ಡಿಜಿಟಲ್ ಟೆಕ್ನಾಲಜಿ ಮತ್ತು ಯುಎಕ್ಸ್‌ ಡಿಸೈನ್ ವಿಷಯದಲ್ಲಿ ನವ್ಯಾ ಪದವಿ ಪಡೆದಿದ್ದಾರೆ. ಜತೆಗೆ ಅವರು ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದು, ‘ಪ್ರಾಜೆಕ್ಟ್‌ ನವೇಲಿ’ ಎಂಬ ಎನ್‌ಜಿಒ ನಡೆಸುತ್ತಿದ್ದಾರೆ. ಆ ಮೂಲಕ ಲಿಂಗ ಸಮಾನತೆ ಕುರಿತು ವ್ಯಾಪಕ ಕಾರ್ಯ ಕೈಗೊಂಡಿದ್ದಾರೆ. ಇದರೊಂದಿಗೆ ತಮ್ಮ ಕುಟುಂಬ ಒಡೆತನದ ವ್ಯವಹಾರಗಳಲ್ಲೂ ನವ್ಯಾ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

26 ವರ್ಷದ ನವ್ಯಾ ಅವರು, ತಾವು ಐಐಎಂ ಅಹಮದಾಬಾದ್‌ನಲ್ಲಿ ಕೋರ್ಸ್‌ಗೆ ಸೇರಿದ್ದನ್ನು ಅತ್ಯಂತ ಸಂತಸದಿಂದ ಹಂಚಿಕೊಂಡಿದ್ದಾರೆ. ಹಸಿರು ಹೊದ್ದ ಕ್ಯಾಂಪಸ್‌ನಲ್ಲಿ ತನ್ನ ಸಹಪಾಠಿಗಳೊಂದಿಗೆ ತೆಗಿಸಿಕೊಂಡಿರುವ ಚಿತ್ರಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಐಐಎಂ ಫಲಕದ ಮುಂದೆ ಕಪ್ಪು ಸೂಟ್ ತೊಟ್ಟು ನಿಂತಿದ್ದಾರೆ. ಹೊಸ ತಂಡದೊಂದಿಗೆ ಕೇಕ್ ಕತ್ತರಿಸುವ ಕಾರ್ಯಕ್ರಮದಲ್ಲೂ ಭಾಗಿಯಾಗಿ, ಬೋಧಕರಿಗೆ ಧನ್ಯವಾದ ತಿಳಿಸಿದ್ದಾರೆ. 

ನವ್ಯಾ ಅವರ ಪೋಸ್ಟ್‌ಗೆ ಅವರ ತಾಯಿ ಶ್ವೇತಾ ಅವರು ಪ್ರತಿಕ್ರಿಯಿಸಿದ್ದು, ‘ನೀನು ನಮ್ಮಲ್ಲರ ಹೆಮ್ಮೆ’ ಎಂದಿದ್ದಾರೆ. ಇನ್ನೂ ಕೆಲವರು ಅಭಿನಂದನೆ ಸಲ್ಲಿಸಿದ್ದಾರೆ.

ನವ್ಯಾ ಅವರ ಈ ಪೋಸ್ಟ್‌ಗೆ ಇನ್ನೂ ಕೆಲವರು, ಐಐಎಂನಲ್ಲಿ ಎಂಬಿಎ ಕೋರ್ಸ್‌ಗೆ ದಾಖಲಾಗಲು ಕಠಿಣ ಪರಿಶ್ರಮ ಅಗತ್ಯ. ಆದರೆ ನವ್ಯಾ ಅವರ ಈ ತ್ವರಿತ ಸಾಧನೆ ಹಿಂದಿನ ಕೋಚಿಂಗ್ ಕೇಂದ್ರ ಯಾವುದು? ಈ ಒಂದು ವರ್ಷ ಅವಧಿಯಲ್ಲಿ ಅವರು ಹಲವು ಪ್ರವಾಸ, ಕುಟುಂಬದ ಕಾರ್ಯಕ್ರಮಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಕೆಲವೊಂದು ಸಾಮಾಜಿಕ ಕಾರ್ಯಗಳ ಚಿತ್ರಗಳೂ ಇವೆ. ಇಷ್ಟೆಲ್ಲದರ ನಡುವೆ ಅವರಿಗೆ ಸಿಎಟಿ ಪರೀಕ್ಷೆಗೆ ಸಿದ್ಧತೆ ಸಮಯ ಸಿಕ್ಕಿದ್ದು ಯಾವಾಗ ಎಂದೂ ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT