ರಾಯಪುರ: ಛತ್ತೀಸಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ನಕ್ಸಲಿಸಂ ನಿರ್ಮೂಲನೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಾಶ್‌ಪುರದಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚಂದ್ರಯಾನ–3 ಯೋಜನೆಯನ್ನು ಯಶಸ್ವಿಗೊಳಿಸಿತು. ಚಂದ್ರನ ಮೇಲೆ ರೋವರ್ ಇಳಿದ ಸ್ಥಳವನ್ನು ಶಿವಶಕ್ತಿ ಸ್ಥಳ ಎಂದು ಮೋದಿ ಗುರುತಿಸಿದರು. ಆದರೆ ಮುಖ್ಯಮಂತ್ರಿ ಭೂಪೇಶ್ ಸಿಂಗ್ ಬಘೇಲ ನೇತೃತ್ವದ ಕಾಂಗ್ರೆಸ ಸರ್ಕಾರ ಮಹಾದೇವನ (ಆ್ಯಪ್) ಹೆಸರಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು.
ಮುಂದುವರೆದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಧಾರ್ಮಿಕ ಮತಾಂತರ ನಡೆಸಲಾಗಿದೆ ಎಂದು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಆರೋಪಿಸಿದರು.
ನಮ್ಮ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದರೆ 5 ವರ್ಷಗಳಲ್ಲಿ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲಾಗುವುದು ಎಂದು ಅಮಿತ್ ಶಾ ಹೇಳಿದರು.
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರದ ಆಡಳಿತವೇ ಮೇಲುಗೈ ಸಾಧಿಸಿದೆ. ಬಘೇಲ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಹಗರಣದಲ್ಲಿ ತೊಡಗಿದೆ ಎಂದು ದೂರಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ವಿಚಾರಣ ಆಯೋಗ ರಚನೆ ಮಾಡಿ, ಎಲ್ಲಾ ಹಗರಣಗಳನ್ನು ತನಿಖೆ ಮಾಡಲಾಗುವುದು. ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲರನ್ನೂ ಜೈಲಿಗೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಾಕಷ್ಟು ಆದಿವಾಸಿ ಸಮುದಾಯದವರ ಮತಾಂತರ ನಡೆದಿದೆ ಎಂದು ಅಮೀತ್ ಶಾ ಆರೋಪಿಸಿದರು.