ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಯಾಣ: ನೂತನ ಮುಖ್ಯಮಂತ್ರಿಯಾಗಿ ನಾಯಬ್ ಸಿಂಗ್ ಸೈನಿ ಪ್ರಮಾಣ ವಚನ

Published 12 ಮಾರ್ಚ್ 2024, 16:31 IST
Last Updated 12 ಮಾರ್ಚ್ 2024, 16:31 IST
ಅಕ್ಷರ ಗಾತ್ರ

ಚಂಡೀಗಢ: ಬಿಜೆಪಿ ಮುಖಂಡ ನಾಯಬ್ ಸಿಂಗ್ ಸೈನಿ ಅವರು ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮೊದಲು ಮನೋಹರಲಾಲ್ ಖಟ್ಟರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ, ಅವರ ಸಂಪುಟದ ಸದಸ್ಯರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 

ಬಿಜೆಪಿಯ ಮುಖಂಡರಾದ ಕನ್ವರ್ ಪಾಲ್, ಮೂಲ್‌ಚಂದ್ ಶರ್ಮ, ಜೈಪ್ರಕಾಶ್ ದಲಾಲ್ ಮತ್ತು ಬನ್ವರಿ ಲಾಲ್ ಹಾಗೂ ಪಕ್ಷೇತರ ಶಾಸಕ ರಂಜಿತ್ ಸಿಂಗ್ ಚೌತಾಲಾ ಅವರು ಸೈನಿ ಅವರ ಜೊತೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸೈನಿ ಅವರು ಖಟ್ಟರ್ ಅವರಿಗೆ ನಮಸ್ಕರಿಸಿದರು, ಅವರ ಆಶೀರ್ವಾದ ಕೋರಿದರು. ಖಟ್ಟರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹಠಾತ್ತನೆ ರಾಜೀನಾಮೆ ಸಲ್ಲಿಸಿದ ನಂತರದಲ್ಲಿ, ಬಿಜೆಪಿ ಪ್ರಮುಖರು ಒಬಿಸಿ ಸಮುದಾಯದ ಪ್ರಮುಖ ನಾಯಕ ಸೈನಿ ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮಗೊಳಿಸಿದರು.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆಗಿ ಆಯ್ಕೆಯಾಗುತ್ತಿದ್ದಂತೆಯೇ ಸೈನಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಆಗ ಸೈನಿ ಅವರ ಜೊತೆ ಕೇಂದ್ರ ಸಚಿವ ಅರ್ಜುನ್ ಮುಂಡಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚುಘ್, ಖಟ್ಟರ್ ಮತ್ತು ಪಕ್ಷದ ಹರಿಯಾಣ ಉಸ್ತುವಾರಿ ಬಿಪ್ಲಬ್ ದೇಬ್ ಅವರೂ ಇದ್ದರು.

ಸೈನಿ ಅವರು ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷರೂ ಹೌದು. ಅವರು ಹಾಲಿ ಸಂಸದ ಕೂಡ ಹೌದು. ಹರಿಯಾಣ ವಿಧಾನಸಭೆಗೆ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಬೇಕಿದೆ.

ಖಟ್ಟರ್ ಮತ್ತು ಸಂಪುಟದ 13 ಸದಸ್ಯರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಮಂಗಳವಾರ ಬೆಳಿಗ್ಗೆ ಸಲ್ಲಿಸಿದರು. ಇದಾದ ಕೆಲವೇ ಹೊತ್ತಿನಲ್ಲಿ ಬಿಜೆಪಿ ಶಾಸಕರು, ಶಾಸಕಾಂಗ ಪಕ್ಷದ ಸಭೆಯತ್ತ ಸಾಗಿದರು. ಖಟ್ಟರ್ ಅವರ ಆಪ್ತ ಎಂದು ಗುರುತಿಸಿಕೊಂಡಿರುವ ಸೈನಿ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಅರ್ಜುನ್ ಮುಂಡಾ ಮತ್ತು ಚುಘ್ ಅವರನ್ನು ಪಕ್ಷದ ವೀಕ್ಷಕರನ್ನಾಗಿ ದೆಹಲಿಯಿಂದ ಕಳುಹಿಸಿಕೊಡಲಾಗಿತ್ತು. 

ಸೈನಿ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಅಕ್ಟೋಬರ್‌ನಲ್ಲಿ ನೇಮಕ ಮಾಡಲಾಗಿತ್ತು. ಆಗ ಈ ಕ್ರಮವನ್ನು ರಾಜ್ಯದ ಒಬಿಸಿ ಸಮುದಾಯದ ಮತಗಳನ್ನು ಒಗ್ಗೂಡಿಸುವ ಪ್ರಯತ್ನ ಎಂದು ಹೇಳಲಾಗಿತ್ತು.

ಖಟ್ಟರ್ ಅವರನ್ನು ಕರನಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹರಿಯಾಣದಲ್ಲಿ ಬಿಜೆಪಿ ಮತ್ತು ಜೆಜೆಪಿ ನಡುವಿನ ಮೈತ್ರಿಯು ಅಂತ್ಯಗೊಳ್ಳುತ್ತಿದೆ ಎಂಬ ಊಹಾಪೋಹಗಳ ನಡುವೆ ಮುಖ್ಯಮಂತ್ರಿ ಬದಲಾವಣೆ ಆಗಿದೆ.

ಒಬಿಸಿ ಮತಗಳ ಮೇಲೆ ಕಣ್ಣು: ಒಬಿಸಿ ನಾಯಕ ನಾಯಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿ ಆಗಿಸುವ ಬಿಜೆಪಿಯ ತೀರ್ಮಾನದ ಹಿಂದೆ ಇರುವುದು ಸಮುದಾಯದ ಮತಗಳನ್ನು ಕ್ರೋಢೀಕರಿಸುವ ಉದ್ದೇಶ ಎಂದು ವಿಶ್ಲೇಷಿಸಲಾಗಿದೆ. 

ಜಾತಿ ಗಣತಿಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಆರ್‌ಜೆಡಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಒಬಿಸಿ ಸಮುದಾಯಗಳ ಓಲೈಕೆಗೆ ಮುಂದಾಗಿವೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಈ ಪ್ರಮುಖ ಸಮುದಾಯವನ್ನು ತನ್ನತ್ತ ಒಲಿಸಿಕೊಳ್ಳಲು ಹೆಜ್ಜೆ ಇರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT