ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಮತ ಸಾಬೀತುಪಡಿಸಿದ ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ

Published 13 ಮಾರ್ಚ್ 2024, 9:49 IST
Last Updated 13 ಮಾರ್ಚ್ 2024, 9:49 IST
ಅಕ್ಷರ ಗಾತ್ರ

ಚಂಡೀಗಢ : ಹರಿಯಾಣದ ನಾಯಬ್ ಸಿಂಗ್‌ ಸೈನಿ ನೇತೃತ್ವದ ಸರ್ಕಾರವು ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ವಿಶ್ವಾಸಮತವನ್ನು ಬುಧವಾರ ಸಾಬೀತುಪಡಿಸಿತು.

ಇದಕ್ಕೂ ಮೊದಲು, ವಿಶ್ವಾಸಮತ ನಿರ್ಣಯದ ಕುರಿತು ವಿಧಾನಸಭೆಯಲ್ಲಿ ಎರಡು ಗಂಟೆ ಕಾಲ ಚರ್ಚೆ ನಡೆಯಿತು. ಸೈನಿ ಅವರು ವಿಶ್ವಾಸಮತ ಯಾಚಿಸಿದರು. ಬಳಿಕ, ವಿಧಾನಸಭಾ ಸ್ಪೀಕರ್‌ ಜ್ಞಾನ್‌ ಚಂದ್ ಗುಪ್ತಾ ಅವರು ವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದರು.

ವಿಶ್ವಾಸಮತದ ವೇಳೆ ವಿಧಾನಸಭೆಗೆ ಗೈರುಹಾಜರಾಗುವಂತೆ ಜನನಾಯಕ ಜನತಾ ಪಕ್ಷವು (ಜೆಜೆ‍ಪಿ) ತನ್ನ ಎಲ್ಲಾ 10 ಶಾಸಕರಿಗೆ ವಿಪ್‌ ಜಾರಿ ಮಾಡಿತ್ತು. ವಿಶ್ವಾಸಮತ ನಿರ್ಣಯ ಕುರಿತ ಚರ್ಚೆ ಆರಂಭವಾಗುತ್ತಿದ್ದಂತೆ ಜೆಜೆಪಿಯ ಶಾಸಕರು ವಿಧಾನಸಭೆಯಿಂದ ನಿರ್ಗಮಿಸಿದರು. ಇಂಡಿಯನ್ ನ್ಯಾಷನಲ್‌ ಲೋಕದಳದ (ಐಎನ್ಎಲ್‌ಡಿ) ಏಕೈಕ ಶಾಸಕ ಕೂಡ ಈ ವೇಳೆ ಹಾಜರಿರಲಿಲ್ಲ.

ವಿಶ್ವಾಸಮತವನ್ನು ಮತಪತ್ರದ ಮೂಲಕ ನಡೆಸುವಂತೆ ಕಾಂಗ್ರೆಸ್‌ ಶಾಸಕರು ಸ್ಪೀಕರ್‌ ಅವರಿಗೆ ಕೇಳಿಕೊಂಡರು. ಆದರೆ ಆ ರೀತಿಯ ಮತದಾನಕ್ಕೆ ಅವಕಾಶ ಇಲ್ಲ ಎಂದು ಸ್ಪೀಕರ್‌ ಹೇಳಿದರು. 

90 ಸದಸ್ಯಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿಯು 41 ಶಾಸಕರ ಬಲ ಹೊಂದಿದೆ. ಅಲ್ಲದೇ, ಆರು ಮಂದಿ ಪಕ್ಷೇತರ ಶಾಸಕರು ಮತ್ತು ಹರಿಯಾಣ ಲೋಕಹಿತ ಪಕ್ಷದ ಏಕೈಕ ಶಾಸಕನ ಬೆಂಬಲ ಬಿಜೆಪಿಗೆ ಇದೆ. ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ 30 ಶಾಸಕರನ್ನು ಹೊಂದಿದೆ.

ಸೈನಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಅದಕ್ಕೂ ಮೊದಲು, ಮನೋಹರಲಾಲ್‌ ಖಟ್ಟರ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬುಧವಾರ ಅವರು ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದರು. 

ಕಾಂಗ್ರೆಸ್‌ ಅಸಮಾಧಾನ: ತರಾತುರಿಯಲ್ಲಿ ವಿಧಾನಸಭೆ ಅಧಿವೇಶನ ಕರೆದ ಕುರಿತು ವಿಶ್ವಾಸಮತ ನಿರ್ಣಯ ಮಂಡನೆಗೂ ಮೊದಲು ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿಸಿತು. ತುರ್ತಾಗಿ ಅಧಿವೇಶನ ಕರೆಯುವ ಅಗತ್ಯವಿರಲಿಲ್ಲ ಎಂದ ಕಾಂಗ್ರೆಸ್‌ ನಾಯಕ ಭೂಪಿಂದರ್‌ ಸಿಂಗ್‌ ಹೂಡಾ ಅವರು, ಶಾಸಕರಿಗೆ ಅಗತ್ಯ ಸಮಯಾವಕಾಶನ್ನೂ ನೀಡಲಾಗಿಲ್ಲ ಎಂದು ದೂರಿದರು. 

ಶಾಸಕರೆಲ್ಲರೂ ಸದನಕ್ಕೆ ಬರುವವರೆಗಾದರೂ ಅಧಿವೇಶನವನ್ನು ಮುಂದೂಡಿ ಎಂದು ಹೂಡಾ ಮನವಿ ಮಾಡಿದರು. ಆದರೆ, ನಿಗದಿತ ಸಮಯಕ್ಕೆ ಸದನದಲ್ಲಿ ಹಾಜರಿರುವುದು ಶಾಸಕರ ಕರ್ತವ್ಯ ಎಂದು ಪ್ರತಿಕ್ರಿಯಿಸಿದ ಸ್ಪೀಕರ್‌, ಈಗ ಚರ್ಚೆ ಆರಂಭಿಸೋಣ. ಅಷ್ಟರಲ್ಲಿ ಶಾಸಕರು ಬರುತ್ತಾರೆ ಎಂದರು. 

ಜೆಜೆಪಿಯು ತನ್ನ ಶಾಸಕರಿಗೆ ವಿಪ್‌ ಜಾರಿ ಮಾಡಿರುವ ಕುರಿತು ವ್ಯಂಗ್ಯವಾಡಿದ ಹೂಡಾ, ‘ಜೆಜೆಪಿ ಶಾಸಕರು ಸದನದಲ್ಲಿ ಹಾಜರಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಮತ ಚಲಾಯಿಸಬೇಕಿತ್ತು. ಆದರೆ ಅವರು ಸದನಕ್ಕೆ ಗೈರಾಗಿದ್ದಾರೆ. ಬಿಜೆಪಿ– ಜೆಜೆಪಿ ಒಳಒಪ್ಪಂದ ಮಾಡಿಕೊಂಡಿರುವುದು ಇದರಿಂದ ತಿಳಿಯುತ್ತದೆ’ ಎಂದರು. 

‘ಜನರನ್ನು ವಂಚಿಸಬೇಡಿ. ವಿಧಾನಸಭೆಯನ್ನು ವಿಸರ್ಜಿಸಿ, ಹೊಸದಾಗಿ ಚುನಾವಣೆ ನಡೆಸಿ’ ಎಂದು ಅವರು ಆಗ್ರಹಿಸಿದರು.

ಖಟ್ಟರ್‌ ಅವಧಿಯಲ್ಲಿ ಹರಿಯಾಣದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅವರಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ
ನಾಯಬ್‌ ಸಿಂಗ್‌ ಸೈನಿ ಹರಿಯಾಣ ಮುಖ್ಯಮಂತ್ರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT