ನಾಗ್ಪುರ: ನಮ್ಮ ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ ಸಂಕಷ್ಟಗಳು ಎದುರಾದ ಕಾರಣ ಶರದ್ ಪವಾರ್ ಬಣ ತೊರೆದು ಅಜಿತ್ ಪವಾರ್ ಅವರೊಂದಿಗೆ ಹೋಗಬೇಕಾಯಿತು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶಾಸಕ ರಾಜೇಂದ್ರ ಶಿಂಗ್ನೆ ಹೇಳಿದ್ದಾರೆ.
ಸದ್ಯ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಹಾಗೂ ಕೆಲವು ಶಾಸಕರು ಶಿವಸೇನಾ, ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರವನ್ನು ಕಳೆದ ವರ್ಷ ಸೇರಿಕೊಂಡರು. ಇದು ಎನ್‌ಸಿಪಿ ಇಬ್ಭಾಗವಾಗಲು ಕಾರಣವಾಯಿತು.
ಶರದ್ ಅವರು ಕಟ್ಟಿದ್ದ ಮೂಲ ಎನ್‌ಸಿಪಿಯನ್ನು ಅಜಿತ್ ಮುನ್ನಡೆಸುತ್ತಿದ್ದಾರೆ.
ಬುಲ್ಧಾನ ಜಿಲ್ಲೆಯ ಸಿಂದ್‌ಖೇಡ್ ರಾಜ ಕ್ಷೇತ್ರದ ಶಾಸಕ ರಾಜೇಂದ್ರ ಅವರು ವಾರ್ಧಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಅವರೊಂದಿಗೆ ವೇದಿಕೆ ಹಂಚಿಕೊಂಡರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶರದ್ ಪವಾರ್ ಅವರನ್ನು ಸದಾ ಗೌರವಿಸುತ್ತೇನೆ. ಅವರ ನಾಯಕತ್ವದಲ್ಲಿ 30 ವರ್ಷ ಕೆಲಸ ಮಾಡಿದ್ದೇನೆ. ತಮ್ಮ ರಾಜಕೀಯ ಬದುಕಿಗೆ ಅವರ ಕೊಡುಗೆ ದೊಡ್ಡದಾಗಿದ್ದು ಯಾವಾಗಲು ಋಣಿಯಾಗಿರುತ್ತೇನೆ ಎಂದಿದ್ದಾರೆ.
'ನಮ್ಮ ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ ತೊಂದರೆಗಳು ಎದುರಾದ ಕಾರಣ ಮತ್ತು ಅಸಹಾಯಕತೆಯಿಂದಾಗಿ ನಾನು ಅಜಿತ್ ಅವರೊಂದಿಗೆ ಆಡಳಿತ ಪಕ್ಷದ ಜೊತೆಗೆ ಹೋಗಬೇಕಾಯಿತು. ಸರ್ಕಾರ ಸದ್ಯ ನಮ್ಮ ಬ್ಯಾಂಕ್‌ಗೆ ₹ 300 ಕೋಟಿ ಅನುದಾನ ಒದಗಿಸಿದೆ. ಪವಾರ್ ಅವರು ನಮ್ಮ ಪಾಲಿಗೆ ಸದಾ ಪೂಜ್ಯನೀಯರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ಹೇಳಿಕೊಂಡಿದ್ದಾರೆ.