ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ | 43 ವರ್ಷಗಳಲ್ಲಿ 47,928 ವಿದೇಶಿಯರು ಪತ್ತೆ; ಶೇ 43 ರಷ್ಟು ಹಿಂದೂಗಳು

Published 22 ಆಗಸ್ಟ್ 2024, 16:09 IST
Last Updated 22 ಆಗಸ್ಟ್ 2024, 16:09 IST
ಅಕ್ಷರ ಗಾತ್ರ

ಗುವಾಹಟಿ: ರಾಜ್ಯದಲ್ಲಿ 1971 ರಿಂದ 2014 ರವರೆಗೆ 47,900ಕ್ಕೂ ಹೆಚ್ಚು ವಿದೇಶಿಯರನ್ನು ಪತ್ತೆ ಮಾಡಲಾಗಿದೆ. ಈ ಪೈಕಿ ಶೇ 43 ರಷ್ಟು ಮಂದಿ ಹಿಂದೂಗಳು ಎಂದು ಅಸ್ಸಾಂ ಸರ್ಕಾರ ಗುರುವಾರ ತಿಳಿಸಿದೆ.

ಅಸೋಮ್‌ ಗಣ ಪರಿಷತ್‌ (ಎಜಿಪಿ) ಪಕ್ಷದ ಶಾಸಕ ಪೊನಾಕನ್‌ ಬರೂಹ್‌ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಈ ಮಾಹಿತಿ ನೀಡಿದ್ದಾರೆ.

ವಿದೇಶಿಯರ ನ್ಯಾಯಮಂಡಳಿಯು (ಎಫ್‌ಟಿ), 1971ರಿಂದ 2014ರ ಅವಧಿಯಲ್ಲಿ 47,928 ಮಂದಿ ವಿದೇಶಿಯರನ್ನು ಪತ್ತೆ ಮಾಡಿರುವುದಾಗಿ ಘೋಷಿಸಿದೆ. ಅದರಲ್ಲಿ 27,309 ಮಂದಿ ಮುಸ್ಲಿಮರು. 20,613 ಜನರು ಹಿಂದೂಗಳು. ಉಳಿದ ಆರು ಮಂದಿ ಇತರ ಧರ್ಮಗಳಿಗೆ ಸೇರಿದವರು. ಚಛರ್‌ ಜಿಲ್ಲೆಯಲ್ಲಿ ಹೆಚ್ಚಿನ ವಿದೇಶಿಯರು ಪತ್ತೆಯಾಗಿದ್ದಾರೆ. ಇಲ್ಲಿ ಗುರುತಿಸಲಾಗಿರುವ 10,152 ಮಂದಿ ಪೈಕಿ 8,139 ಜನರು ಹಿಂದೂಗಳು. ಉಳಿದವರು (2,013) ಮುಸ್ಲಿಮರು ಎಂದು ವಿವರಿಸಿದ್ದಾರೆ.

'ಅಸ್ಸಾಂ ಒಪ್ಪಂದ'ದ ಪ್ರಕಾರ, 1971ರ ಮಾರ್ಚ್‌ 25ರ ನಂತರ ರಾಜ್ಯಕ್ಕೆ ಬಂದಿರುವ ಎಲ್ಲ ವಿದೇಶಿಯರನ್ನು ಪತ್ತೆ ಹಚ್ಚಿ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದು. ನಂತರ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ 3.12 ಕೋಟಿಯಲ್ಲಿ ಅಸ್ಸಾಮಿ ಮಾತನಾಡುವವರ ಪ್ರಮಾಣ ಶೇ 48.38 ( 1.51 ಕೋಟಿ) ಇದೆ. ಒಟ್ಟು 90.24 ಲಕ್ಷ ಅಂದರೆ ಶೇ 28.92 ಜನರು ಬೆಂಗಾಲಿ ಮಾತನಾಡುತ್ತಾರೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.

ದಿಬ್ರುಗಢ ಜಿಲ್ಲೆಯ ಚಬೌ ಕ್ಷೇತ್ರದ ಶಾಸಕ ಬರೂಹ್‌ ಅವರು, ರಾಜ್ಯದಲ್ಲಿ ಅಸ್ಸಾಮಿ ಹೊರತಾದ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಏರುತ್ತಿದೆ. ಇದು ಸ್ಥಳೀಯ ಸಮುದಾಯದವರಲ್ಲಿ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT