ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುಪಿಯ ಧಾರ್ಮಿಕ ಸ್ಥಳಗಳಿಂದ 46,000 ಧ್ವನಿವರ್ಧಕಗಳನ್ನು ತೆಗೆದುಹಾಕಿದ ಅಧಿಕಾರಿಗಳು

Last Updated 30 ಏಪ್ರಿಲ್ 2022, 15:49 IST
ಅಕ್ಷರ ಗಾತ್ರ

ಲಖನೌ: ಧಾರ್ಮಿಕ ಸ್ಥಳಗಳಿಂದ ಸುಮಾರು 46,000 ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಮತ್ತು ಇನ್ನೂ 59,000 ಧ್ವನಿವರ್ಧಕಗಳನ್ನು ನಿಯಮಗಳಿಗೆ ಅನುಸಾರ ಮಿತಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸುವ ಅಭಿಯಾನವನ್ನು ಯಾವುದೇ ತಾರತಮ್ಯವಿಲ್ಲದೆ ಜಾರಿಗೊಳಿಸಲಾಗುತ್ತಿದೆ ಎಂದು ಯುಪಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಹೇಳಿದರು.

ಈ ಕಾರ್ಯಾಚರಣೆಯ ಅಡಿಯಲ್ಲಿ, ಏಪ್ರಿಲ್ 25 ರಿಂದ, ಒಟ್ಟು 45,733 ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಮತ್ತು 58,861 ಧ್ವನಿವರ್ಧಕಗಳನ್ನು ನಿಯಮಗಳ ಅಡಿಯಲ್ಲಿ ಮಿತಿಗೊಳಿಸಲಾಗಿದೆ ಎಂದು ಕುಮಾರ್ ಹೇಳಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ಥಿ ಮಾತನಾಡಿ, ಏಪ್ರಿಲ್ 30ರವರೆಗಿನ ಕಾರ್ಯಾಚರಣೆ ಬಗ್ಗೆ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳಿಂದ ವರದಿಗಳನ್ನು ಕೇಳಿದೆ ಎಂದು ಹೇಳಿದ್ದಾರೆ.

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಕಾರ್ಯಾಚರಣೆಯನ್ನು ಏಪ್ರಿಲ್ 25 ರಂದು ಪ್ರಾರಂಭಿಸಲಾಗಿದೆ. ಇದು ಮುಂದಿನ ದಿನಗಳಲ್ಲಿಯೂ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

‘ತೆರವು ಮಾಡುತ್ತಿರುವ ಧ್ವನಿವರ್ಧಕಗಳು ಅನಧಿಕೃತವಾಗಿವೆ. ಜಿಲ್ಲಾಡಳಿತದಿಂದ ಸೂಕ್ತ ಅನುಮತಿ ಪಡೆಯದೆ ಇರಿಸಲಾಗಿರುವ ಧ್ವನಿವರ್ಧಕಗಳನ್ನು ಅಥವಾ ಅನುಮತಿಸಲಾದ ಸಂಖ್ಯೆಗಳಿಗಿಂತ ಹೆಚ್ಚು ಬಳಸಿದ ಧ್ವನಿವರ್ಧಕಗಳನ್ನು ಅನಧಿಕೃತ ಎಂದು ವರ್ಗೀಕರಿಸಲಾಗಿದೆ’ಎಂದು ಎಡಿಜಿ ಕುಮಾರ್ ವಿವರಿಸಿದರು.

ಧ್ವನಿವರ್ಧಕಗಳ ನಿರ್ಬಂಧ ಕುರಿತಂತೆ ಹೈಕೋರ್ಟ್‌ ನೀಡಿರುವ ಆದೇಶಗಳನ್ನು ಕಾರ್ಯಾಚರಣೆಯ ಸಮಯದಲ್ಲಿ ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT