ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌ ಅಕ್ರಮ | ಜೂನ್ 19 ರಂದು ಎಎಪಿಯಿಂದ ದೇಶದಾದ್ಯಂತ ಪ್ರತಿಭಟನೆ: ಸಂದೀಪ್ ಪಾಠಕ್

Published 17 ಜೂನ್ 2024, 13:06 IST
Last Updated 17 ಜೂನ್ 2024, 13:06 IST
ಅಕ್ಷರ ಗಾತ್ರ

ನವದೆಹಲಿ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಇಲ್ಲಿನ ಜಂತರ್ ಮಂತರ್‌ನಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ನೀಟ್ ಪರೀಕ್ಷೆಯಲ್ಲಿ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ. ಲಕ್ಷಾಂತರ ಮಕ್ಕಳ ಕನಸುಗಳ ಕಸಿದ ಮೋದಿ ಸರ್ಕಾರದ ಇಂತಹ ಹಗರಣಗಳನ್ನು ದೇಶ ಸಹಿಸುವುದಿಲ್ಲ. ಈ ಹಗರಣದ ವಿರುದ್ಧ ಆಮ್ ಆದ್ಮಿ ಪಕ್ಷ ದೇಶದಾದ್ಯಂತ ಪ್ರತಿಭಟನೆ ನಡೆಸಲಿದೆ' ಎಂದು ತಿಳಿಸಿದ್ದಾರೆ.

'ನಾಳೆ (ಜೂನ್ 18) ಬೆಳಿಗ್ಗೆ 10ಕ್ಕೆ ಎಎಪಿಯ ಎಲ್ಲಾ ಸಂಸದರು, ಶಾಸಕರು ಮತ್ತು ಪಕ್ಷದ ಕೌನ್ಸಿಲರ್‌ಗಳು ಜಂತರ್ ಮಂತರ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಜೂನ್ 19ರಂದು ಎಎಪಿ ದೇಶದಾದ್ಯಂತ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ' ಎಂದು ಪಾಠಕ್ ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ:

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 5ರಂದು ದೇಶದ 4,750 ಕೇಂದ್ರಗಳಲ್ಲಿ ನೀಟ್‌ ಪರೀಕ್ಷೆ ನಡೆದಿತ್ತು. ಸುಮಾರು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಜೂನ್‌ 14ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇತ್ತು. ಆದರೆ ಎನ್‌ಟಿಎ ಜೂನ್‌ 4ರಂದೇ ಫಲಿತಾಂಶ ಪ್ರಕಟಿಸಿತ್ತು.

ಹರಿಯಾಣದ ಫರೀದಾಬಾದ್‌ನಲ್ಲಿನ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಸೇರಿದಂತೆ, ದೇಶದಾದ್ಯಂತ 67 ಅಭ್ಯರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದು ಅಗ್ರ ಸ್ಥಾನ ಹಂಚಿಕೊಂಡಿದ್ದರು. ಕೆಲ ಅಭ್ಯರ್ಥಿಗಳಿಗೆ ಕೃಪಾಂಕವನ್ನು ಎನ್‌ಟಿಎ ನೀಡಿದ್ದು ಮತ್ತು ಒಂದೇ ಕೇಂದ್ರದ ಕೆಲವರು ಗರಿಷ್ಠ ಅಂಕಗಳನ್ನು ಗಳಿಸಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT