ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

12ನೇ ತರಗತಿ ಮೌಲ್ಯಮಾಪನಕ್ಕೆ ಹೊಸ ವಿಧಾನ: ಎನ್‌ಸಿಇಆರ್‌ಟಿ ಶಿಫಾರಸು

9ರಿಂದ 11ನೇ ತರಗತಿವರೆಗೆ ಬೋರ್ಡ್‌ ಪರೀಕ್ಷೆ ಬೇಡ: ವಿವಿಧ ಶಿಕ್ಷಣ ಮಂಡಳಿಗಳ ನಡುವೆ ಸಮಾನತೆ ಬೇಕು
Published : 13 ಸೆಪ್ಟೆಂಬರ್ 2024, 19:44 IST
Last Updated : 13 ಸೆಪ್ಟೆಂಬರ್ 2024, 19:44 IST
ಫಾಲೋ ಮಾಡಿ
Comments

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಅನುಗುಣವಾಗಿ ಶಾಲಾ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ವಿಭಿನ್ನ ವಿಧಾನಗಳೊಂದಿಗೆ ಹೊಸ ಮೌಲ್ಯಮಾಪನ ವ್ಯವಸ್ಥೆ ಪರಿಚಯಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಇತ್ತೀಚಿಗೆ ಶಿಫಾರಸು ಮಾಡಿದೆ.

ಅಲ್ಲದೆ ಈ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯುವಂತೆ ಒತ್ತಾಯಿಸಿ ಕೆಂದ್ರ ಶಿಕ್ಷಣ ಸಚಿವಾಲಯಕ್ಕೆ ಪತ್ರ ಬರೆದಿದೆ.   

9, 10 ಮತ್ತು 11ನೇ ತರಗತಿಗಳಿಗೆ ಬೋರ್ಡ್‌ ಪರೀಕ್ಷೆಗಳನ್ನು ತೆಗೆಯಬೇಕು ಹಾಗೂ ಆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಒಳಗೊಂಡಂತೆ 12ನೇ ತರಗತಿಯ ಫಲಿತಾಂಶದ ಮೌಲ್ಯಮಾಪನ ಮಾಡಬೇಕು ಎಂಬುದು ಎನ್‌ಸಿಇಆರ್‌ಟಿಯ ಪ್ರಮುಖ ಶಿಫಾರಸು ಆಗಿದೆ.

ವಿರೋಧ ಪಕ್ಷಗಳು ಅಳ್ವಿಕೆಯಲ್ಲಿರುವ ರಾಜ್ಯಗಳು ಮತ್ತು ಕೇಂದ್ರದ ನಡುವಿನ ಹಗ್ಗ ಜಗ್ಗಾಟದ ನಡುವೆಯೂ ಈ ಸುಧಾರಣೆಗಳನ್ನು ಜಾರಿಗೊಳಿಸಲು ಕೆಲ ರಾಜ್ಯ ಮಂಡಳಿಗಳು ಮುಕ್ತವಾಗಿವೆ. ಆದರೆ ಅವುಗಳಿಗೆ ಅಲ್ಲಿನ ರಾಜ್ಯ ಸರ್ಕಾರಗಳು ಅಧಿಸೂಚನೆ ಹೊರಡಿಸಬೇಕಾದ ಅಗತ್ಯವಿದೆ. ಹೀಗಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪತ್ರ ಬರೆದು ಅಧಿಸೂಚನೆ ಹೊರಡಿಸುವಂತೆ ತಿಳಿಸಬೇಕು ಎಂದು ಎನ್‌ಸಿಇಆರ್‌ಟಿ ಪತ್ರದಲ್ಲಿ ಉಲ್ಲೇಖಿಸಿದೆ.   

ಎನ್‌ಸಿಇಆರ್‌ಟಿ ಅಡಿಯಲ್ಲಿರುವ ‘ಪಿಎಆರ್‌ಎಕೆಎಚ್‌’ (ಕಾರ್ಯಕ್ಷಮತೆಯ ಮೌಲ್ಯಮಾಪನ, ಸಮಗ್ರ ಅಭಿವೃದ್ಧಿಗಾಗಿ ಜ್ಞಾನದ ಪರಾಮರ್ಶೆ ಮತ್ತು ವಿಶ್ಲೇಷಣೆ) ಸಂಸ್ಥೆ ‘ಶಿಕ್ಷಣ ಮಂಡಳಿಗಳಲ್ಲಿ ಸಮಾನತೆ ಸ್ಥಾಪಿಸುವ’ ಕುರಿತು ಈ ಶಿಫಾರಸುಗಳನ್ನು ಮಾಡಿದೆ. 

ಪ್ರಮುಖ ಶಿಫಾರಸುಗಳು

* ಮಂಡಳಿಗಳು ಶೈಕ್ಷಣಿಕ ವರ್ಷವನ್ನು ಎರಡು ಕಾಲಾವಧಿಗಳಲ್ಲಿ ವಿಭಜಿಸಬೇಕು. 9ನೇ ತರಗತಿಯಿಂದ 12ನೇ ತರಗತಿವರೆಗೆ ಹಂತ ಹಂತವಾಗಿ ಅಂಕಗಳನ್ನು ಸರಿಹೊಂದಿಸಿ, ಸಂಕಲನಾತ್ಮಕ ಮೌಲ್ಯಮಾಪನಕ್ಕೆ ಒತ್ತು ನೀಡಬೇಕು

* 9ರಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳು ಪಡೆದಿರುವ ಅಂಕಗಳನ್ನು ಶೇಕಡಾವಾರು ಪ್ರಮಾಣದಲ್ಲಿ ಮೌಲ್ಯ (ವೆಟೇಜ್‌) ನಿಗದಿಪಡಿಸಬೇಕು

* ಅಂದರೆ, 9ನೇ ತರಗತಿಗೆ ಶೇ 15ರಷ್ಟು, 10ನೇ ತರಗತಿಗೆ ಶೇ 20ರಷ್ಟು, 11ನೇ ತರಗತಿಗೆ ಶೇ 25ರಷ್ಟು ಮತ್ತು 12ನೇ ತರಗತಿಗೆ ಶೇ 40ರಷ್ಟು ಮೌಲ್ಯ ನೀಡುವ ಮೂಲಕ 12ನೇ ತರಗತಿಯ ಒಟ್ಟಾರೆ ಮೌಲ್ಯಮಾಪನ ಮಾಡಬೇಕು 

* ದೇಶದಾದ್ಯಂತ ವಿವಿಧ ರಾಜ್ಯ ಮಂಡಳಿಗಳಲ್ಲಿನ ವಿದ್ಯಾರ್ಥಿಗಳಲ್ಲಿಯಷ್ಟೇ ಅಲ್ಲದೇ, ಪ್ರತಿ ಮಂಡಳಿಗಳ ವ್ಯಾಪ್ತಿಯ ವಿದ್ಯಾರ್ಥಿಗಳ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸ ಇದೆ ಎಂಬುದನ್ನು ವರದಿ ಉಲ್ಲೇಖಿಸಿದೆ. ದೇಶದಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಸೇರಿ ಮೂರು ರಾಷ್ಟ್ರಮಟ್ಟದ ಮಂಡಳಿಗಳು ಒಳಗೊಂಡಂತೆ ಒಟ್ಟು 59 ಶಾಲಾ ಮಂಡಳಿಗಳು ಕಾರ್ಯ ನಿರ್ವಹಿಸುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT