ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಖಾರಿಂದ ₹1.64 ಕೋಟಿ ಬಾಕಿ: ಸುಪ್ರೀಂ ಕೋರ್ಟ್‌ಗೆ ಎನ್‌ಐಎ ಮಾಹಿತಿ

ಗೃಹಬಂಧನ ವೇಳೆ ಒದಗಿಸಿದ್ದ ಭದ್ರತೆಗೆ ಸಂಬಂಧಿಸಿದ ವೆಚ್ಚ
Published 7 ಮಾರ್ಚ್ 2024, 15:47 IST
Last Updated 7 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ನವದೆಹಲಿ: ಗೃಹಬಂಧನದಲ್ಲಿರುವ, ಮಾನವ ಹಕ್ಕುಗಳ ಹೋರಾಟಗಾರ ಗೌತಮ್‌ ನವಲಖಾ ಭದ್ರತೆಗೆ ಪೊಲೀಸ್ ಸಿಬ್ಬಂದಿಯನ್ನು ಒದಗಿಸಲು ತಗುಲಿರುವ ವೆಚ್ಚಕ್ಕೆ ಸಂಬಂಧಿಸಿ ಅವರು ₹ 1.64 ಕೋಟಿ ಪಾವತಿಸಬೇಕಿದೆ ಎಂದು ರಾಷ್ಡ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

ಎನ್‌ಐಎಯ ಈ ವಾದವನ್ನು ತಳ್ಳಿಹಾಕಿರುವ ನವಲಖಾ ಪರ ವಕೀಲರು,‘ಈ ವಿಚಾರವಾಗಿ ಎನ್‌ಐಎ ಸುಲಿಗೆ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್‌ ಹಾಗೂ ಎಸ್‌.ವಿ.ಎನ್‌.ಭಟ್ಟಿ ಅವರಿದ್ದ ನ್ಯಾಯಪೀಠ, ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

ಎನ್‌ಐಎ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್‌.ವಿ.ರಾಜು, ‘ಗೃಹಬಂಧನಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ನವಲಖಾ ಅವರಿಗೆ ನಿರಂತರವಾಗಿ ಭದ್ರತೆ ಒದಗಿಸಲಾಗಿತ್ತು. ಇದಕ್ಕೆ ತಗುಲಿರುವ ವೆಚ್ಚಕ್ಕೆ ಸಂಬಂಧಿಸಿ ಈ ವರೆಗೆ ನವಲಖಾ ₹10 ಲಕ್ಷ ಮಾತ್ರ ಪಾವತಿಸಿದ್ದಾರೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ನವಲಖಾ ಪರ ವಕೀಲೆ ನಿತ್ಯಾ ರಾಮಕೃಷ್ಣನ್‌ ಇದಕ್ಕೆ ಆಕ್ಷೇಪಿಸಿದರು. ‘₹1.64 ಕೋಟಿ ಬಾಕಿ ಇದೆ ಎಂಬ ಎನ್‌ಐಎ ಲೆಕ್ಕಾಚಾರವೇ ತಪ್ಪು. ಇದು, ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಿಗೆ ವಿರುದ್ಧವಾದುದಾಗಿದೆ’ ಎಂದರು.

‘ಈ ವಿಷಯದ ಪರಿಶೀಲನೆ ಅಗತ್ಯವಿದೆ. ನಾಗರಿಕರೊಬ್ಬರನ್ನು ಕಸ್ಟಡಿಯಲ್ಲಿರಿಸಿ, ಅವರಿಂದ  ಎನ್‌ಐಎ ಕೋಟಿಗಟ್ಟಲೆ ಹಣ ಪಡೆಯುವಂತಿಲ್ಲ. ಅದರಲ್ಲೂ, ನಾಗರಿಕರನ್ನು ಗೃಹಬಂಧನಕ್ಕೆ ಒಳಪಡಿಸುವಂತಿಲ್ಲ. ನಿಯಮಗಳ ಪ್ರಕಾರ ಈ ರೀತಿ ಸುಲಿಗೆಗೂ ಅವಕಾಶ ಇಲ್ಲ’ ಎಂದೂ  ವಾದಿಸಿದರು.

ನಿತ್ಯಾ ರಾಮಕೃಷ್ಣನ್‌ ಅವರು ಸುಲಿಗೆ ಎಂಬ ಪದ ಬಳಸಿದ್ದಕ್ಕೆ ಹೆಚ್ಚುವರಿ ಸಾಲಿಸಿಟರ್‌ ಜನರಲ್ ರಾಜು ಆಕ್ಷೇಪ ವ್ಯಕ್ತಪಡಿಸಿದರು.

ವಾದ–ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಈ ವಿಷಯ ಕುರಿತು ವಿಸ್ತೃತವಾದ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿತು.

ಎಲ್ಗಾರ್‌ ಪರಿಷತ್‌–ನಕ್ಸಲರ ನಂಟಿನ ಪ್ರಕರಣದಲ್ಲಿ 70 ವರ್ಷದ ನವಲಖಾ ಆರೋಪಿಯಾಗಿದ್ದಾರೆ.

2022ರ ನವೆಂಬರ್‌ನಿಂದ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಗೃಹಬಂಧನದ ವೇಳೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಮಾಡುವ ವೆಚ್ಚಕ್ಕೆ ಸಂಬಂಧಿಸಿ, ₹2.4 ಲಕ್ಷ ಠೇವಣಿ ಇಡುವಂತೆ ನ್ಯಾಯಾಲಯ 2022ರ ನವೆಂಬರ್‌ 10ರಂದು ಆದೇಶಿಸಿತ್ತು.

ನಂತರ, ಮತ್ತೆ ₹ 8 ಲಕ್ಷ ಠೇವಣಿ ಇಡುವಂತೆ ಸೂಚಿಸಿತ್ತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT