ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಅಪರಾಧದ ಆರೋಪ ಇದ್ದಮಾತ್ರಕ್ಕೆ ರಕ್ಷಣಾತ್ಮಕ ಬಂಧನ ಸರಿಯಲ್ಲ: ಸುಪ್ರೀಂ

Published 29 ಮಾರ್ಚ್ 2024, 15:25 IST
Last Updated 29 ಮಾರ್ಚ್ 2024, 15:25 IST
ಅಕ್ಷರ ಗಾತ್ರ

ನವದೆಹಲಿ: ‘ಅತ್ಯಾಚಾರಕ್ಕೆ ಸಂಬಂಧಿಸಿದ್ದೂ ಸೇರಿದಂತೆ ಲೈಂಗಿಕ ಅಪರಾಧದ ಆರೋಪ ಎದುರಿಸುತ್ತಿದ್ದಾನೆ ಎಂಬ ಏಕೈಕ ಕಾರಣಕ್ಕೆ ವ್ಯಕ್ತಿಯ ವಿರುದ್ಧ ರಕ್ಷಣಾತ್ಮಕ ಬಂಧನಕ್ಕೆ ಸಂಬಂಧಿಸಿದ ಕಠಿಣ ಅವಕಾಶ ಬಳಸುವುದನ್ನು ಸಮರ್ಥಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ಐಫೋನ್‌ ಸೇರಿದಂತೆ ಆಕೆ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ದೋಚಿದ ಆರೋಪದಡಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬಂಡಿ ನಾರಾಯಣ ಎಂಬುವವರ ರಕ್ಷಣಾತ್ಮಕ ಬಂಧನ ಕುರಿತು ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಹಾಗೂ ಅರವಿಂದ ಕುಮಾರ್‌ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

‘ಹೀಗೆಯೇ ಬಿಟ್ಟರೆ ಅಪರಾಧ ಎಸಗಬಹುದು ಎಂಬ ಊಹೆಯ ಆಧಾರದಡಿ ವ್ಯಕ್ತಿಯನ್ನು ಬಂಧನಕ್ಕೆ ಒಳಪಡಿಸುವುದನ್ನು ರಕ್ಷಣಾತ್ಮಕ ಬಂಧನ ಎಂದು ಕರೆಯಲಾಗುತ್ತದೆ.’

‘ಆರೋಪಿತ ವ್ಯಕ್ತಿಯು ಇದೇ ರೀತಿಯ ಅಪರಾಧಗಳನ್ನು ಮತ್ತೆ ಎಸಗುವ ಸಾಧ್ಯತೆಗಳು ಹೆಚ್ಚು ಹಾಗೂ ಇದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯ ತಪ್ಪಿದ್ದಲ್ಲ. ಅದರಲ್ಲೂ, ಮಹಿಳೆಯರಲ್ಲಿ ಭಯ ಮತ್ತು ಅಸುರಕ್ಷತೆ ಭಾವನೆ ಮೂಡುತ್ತದೆ’ ಎಂದು ಬಂಡಿ ನಾರಾಯಣ ವಿರುದ್ಧ ಗುಂಟೂರು ಜಿಲ್ಲಾಧಿಕಾರಿ ಕಳೆದ ವರ್ಷ ಜೂನ್‌ 30ರಂದು ಹೊರಡಿಸಿದ್ದ ರಕ್ಷಣಾತ್ಮಕ ಬಂಧನ ಕುರಿತ ಆದೇಶದಲ್ಲಿ ತಿಳಿಸಿದ್ದರು.

‘ಇವು ಸುಲಿಗೆ ಮತ್ತು ಅತ್ಯಾಚಾರ ಕುರಿತ ಪ್ರತ್ಯೇಕವಾದ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಗಳಾಗಿವೆ. ಬಂಧಿತನು ಇಂಥ ಅಪರಾಧಗಳನ್ನು ಮತ್ತೆ ಎಸಗುತ್ತಾನೆ ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯಗಳು ಸಂಬಂಧಪಟ್ಟ ಅಧಿಕಾರಿಗಳ ಬಳಿ ಇಲ್ಲ. ಹೀಗಾಗಿ, ಸೂಕ್ತ ದಾಖಲೆಗಳು/ಸಾಕ್ಷ್ಯಗಳು ಇಲ್ಲದಿರುವಾಗ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶವನ್ನು ಸಮರ್ಥಿಸಲು ಸಾಧ್ಯ ಇಲ್ಲ’ ಎಂದು ಪೀಠ ಹೇಳಿದೆ.

‘ಬಂಡಿ ನಾರಾಯಣ ವಿರುದ್ಧ 2023ರ ಏಪ್ರಿಲ್‌ 27ರಂದು ಸುಲಿಗೆ ಮಾಡಿದ ಆರೋಪ ಇತ್ತು. ಇದರ ಜೊತೆಗೆ, ಅವರ ವಿರುದ್ಧ ಕಳೆದ ಮೇ 1ರಂದು ಅತ್ಯಾಚಾರ ಎಸಗಿದ ಆರೋಪ ಹೊರಿಸಲಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT