ಜಮ್ಮು/ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಖಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಗಸ್ಟ್ 21 ಮತ್ತು 22ರಂದು ಜಮ್ಮು ಮತ್ತು ಶ್ರೀನಗರಕ್ಕೆ ಭೇಟಿ ನೀಡಿ, ವಿಧಾನಸಭೆ ಚುನಾವಣೆಯ ಸಿದ್ಧತೆ ಕುರಿತು ಪರಿಶೀಲನೆ ನಡೆಸಲಿದ್ದಾರೆ.
ಭೇಟಿ ಸಂದರ್ಭದಲ್ಲಿ ಖರ್ಗೆ ಮತ್ತು ರಾಹುಲ್ ಅವರು ಜಮ್ಮು ಮತ್ತು ಶ್ರೀನಗರದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗುಲಾಂ ಅಹ್ಮದ್ ಮಿರ್ ತಿಳಿಸಿದ್ದಾರೆ.
ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಚುನಾವಣೆ ನಡೆಯಲಿರುವ ರಾಜ್ಯಗಳ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಮತ್ತು ಪರಿಶೀಲನಾ ಸಮಿತಿ ಸದಸ್ಯರನ್ನು ಸೋಮವಾರ ಭೇಟಿ ಮಾಡಿದ್ದರು.
ಶ್ರೀನಗರ ವರದಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 24 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಸೆಪ್ಟೆಂಬರ್ 18ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗವು ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಗಸ್ಟ್ 27 ಕಡೆಯ ದಿನ. ನಾಮಪತ್ರಗಳ ಪರಿಶೀಲನೆ ಆಗಸ್ಟ್ 28ರಂದು ನಡೆಯಲಿದ್ದು, ವಾಪಸ್ ಪಡೆಯಲು ಆಗಸ್ಟ್ 30ರಂದು ಕೊನೆಯ ದಿನ.
ಮೊದಲ ಹಂತದಲ್ಲಿ ದಕ್ಷಿಣ ಕಾಶ್ಮೀರದ 16 ಕ್ಷೇತ್ರಗಳು ಮತ್ತು ಜಮ್ಮುವಿನ 8 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.