ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

NEET EXAM | ‘ನೀಟ್‌’ ಮರು ಪರೀಕ್ಷೆ ಫಲಿತಾಂಶ ಪ್ರಕಟ

ಪರಿಷ್ಕೃತ ರ್‍ಯಾಂಕಿಂಗ್‌ ಪಟ್ಟಿ ಪ್ರಕಟಿಸಿದ ಎನ್‌ಟಿಎ
Published 1 ಜುಲೈ 2024, 15:21 IST
Last Updated 1 ಜುಲೈ 2024, 15:21 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ‘ನೀಟ್‌– ಯುಜಿ’ ಮರು ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಅದರ ಜತೆಯಲ್ಲಿಯೇ ಪರಿಷ್ಕೃತ ರ್‍ಯಾಂಕಿಂಗ್‌ ಪಟ್ಟಿಯನ್ನೂ ಪ್ರಕಟಿಸಿದೆ.

ದೇಶದ ಏಳು ಪರೀಕ್ಷಾ ಕೇಂದ್ರಗಳಲ್ಲಿ ಜೂನ್‌ 23ರಂದು ಮರು ಪರೀಕ್ಷೆ ನಡೆಸಲಾಗಿತ್ತು. ಒಟ್ಟು 1,563 ಅಭ್ಯರ್ಥಿಗಳ ಪೈಕಿ 813 (ಶೇ 52) ಅಭ್ಯರ್ಥಿಗಳು ಮಾತ್ರ ಮರು ಪರೀಕ್ಷೆಗೆ ಹಾಜರಾಗಿದ್ದರು.

ಚಂಡೀಗಢ ಕೇಂದ್ರದಲ್ಲಿ ಮರು ಪರೀಕ್ಷೆಗೆ ಯಾವುದೇ ಅಭ್ಯರ್ಥಿ ಹಾಜರಾಗಿರಲಿಲ್ಲ. ಛತ್ತೀಸಗಢದಲ್ಲಿ 291, ಗುಜರಾತ್‌ನಲ್ಲಿ 287, ಹರಿಯಾಣದಲ್ಲಿ 287 ಮತ್ತು ಮೇಘಾಲಯದಲ್ಲಿ 234 ಅಭ್ಯರ್ಥಿಗಳು ಮರು ಪರೀಕ್ಷೆ ಬರೆದಿದ್ದರು. ಉಳಿದ ಅಭ್ಯರ್ಥಿಗಳು ಕೃಪಾಂಕ ಬಿಟ್ಟು ತಮಗೆ ಬಂದಿರುವ ನೈಜ ಅಂಕಗಳನ್ನು ಆರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಜೂನ್‌ 4ರಂದು ಪ್ರಕಟವಾಗಿದ್ದ ಫಲಿತಾಂಶದಲ್ಲಿ 67 ಅಭ್ಯರ್ಥಿಗಳು 720ಕ್ಕೆ 720 ಅಂಕಗಳನ್ನು ಗಳಿಸಿ ಅಗ್ರ ಸ್ಥಾನ ಹಂಚಿಕೊಂಡಿದ್ದರು. ಅದರಲ್ಲಿ ಹರಿಯಾಣ ಕೇಂದ್ರವೊಂದರ ಆರು ಅಭ್ಯರ್ಥಿಗಳೂ ಸೇರಿದ್ದರು. ಪರೀಕ್ಷಾ ಸಮಯ ನಷ್ಟ ಪರಿಹಾರಕ್ಕಾಗಿ ನೀಡಲಾಗಿದ್ದ ಕೃಪಾಂಕದಿಂದಾಗಿ ಈ ಆರು ಅಭ್ಯರ್ಥಿಗಳಿಗೆ ಗರಿಷ್ಠ ಅಂಕಗಳು ಬಂದಿದ್ದವು. ಹೀಗೆ ಕೃಪಾಂಕ ನೀಡಿದ ವಿಧಾನವು ವ್ಯಾಪಕ ಟೀಕೆಗೆ ಗುರಿಯಾಗಿ, ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. 

ಕೆಲ ಅಭ್ಯರ್ಥಿಗಳು ನ್ಯಾಯ ಕೇಳಿ ಸುಪ್ರೀಂ ಕೋರ್ಟ್‌ ಮೊರೆ ಹೋದರು. ಆಗ ಕೇಂದ್ರ ಸರ್ಕಾರವು ಪರೀಕ್ಷಾ ಸಮಯ ನಷ್ಟ ಸರಿದೂಗಿಸಲು ನೀಡಲಾಗಿದ್ದ ಕೃಪಾಂಕವನ್ನು ರದ್ದುಗೊಳಿಸಿ, ಮರು ಪರೀಕ್ಷೆಯ ಆಯ್ಕೆಯನ್ನು ಅಭ್ಯರ್ಥಿಗಳಿಗೆ ನೀಡಿತು. ಈ ಕುರಿತ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ ಗಮನಕ್ಕೂ ತಂದಿತ್ತು. ಅದಕ್ಕೆ ನ್ಯಾಯಾಲಯ ಸಮ್ಮತಿಸಿತ್ತು.

ಸಂಸತ್ತಿನೆಡೆಗೆ ವಿದ್ಯಾರ್ಥಿಗಳ ನಡಿಗೆ

‘ನೀಟ್‌–ಯುಜಿ’, ‘ಯುಜಿಸಿ–ನೆಟ್‌’ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಇಲ್ಲಿನ ಜಂತರ್‌ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳು, ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ಸಂಸತ್ತಿನತ್ತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದ್ದಾರೆ. 

‘ಎನ್‌ಟಿಎ ವಿರುದ್ಧ ಭಾರತ’ ಎಂಬ ಬ್ಯಾನರ್‌ ಅಡಿ ವಿದ್ಯಾರ್ಥಿಗಳು ಕಳೆದ ಬುಧವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಎನ್‌ಟಿಎ ನಿಷೇಧ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿದ್ದ ವಿದ್ಯಾರ್ಥಿಗಳು, ನೀಟ್‌ ಮರು ಪರೀಕ್ಷೆಗೆ ಒತ್ತಾಯಿಸಿದ್ದಾರೆ.

ವಿದ್ಯಾರ್ಥಿ ಸಂಘಟನೆಗಳಾದ ಎಐಎಸ್‌ಎ, ದೆಹಲಿ ವಿಶ್ವವಿದ್ಯಾಲಯದ ಕೆವೈಎಸ್‌ ಸಂಘಟನೆಯ ಸದಸ್ಯರು ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಕೈಜೋಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT