ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯ ಅನ್ಯಾಯವನ್ನು ಸರಿಪಡಿಸಲು ನ್ಯಾಯ್‌ 

Last Updated 28 ಮಾರ್ಚ್ 2019, 19:40 IST
ಅಕ್ಷರ ಗಾತ್ರ

ನವದೆಹಲಿ:ನೋಟುರದ್ದತಿಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಧ್ವಂಸಗೊಳಿಸಿದ ಆರ್ಥಿಕತೆಯನ್ನು ‘ನ್ಯಾಯ್’ ಕಾರ್ಯಕ್ರಮ ಮರುರೂಪಿಸಲಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ನೋಟುರದ್ದತಿ ಮತ್ತು ಗಬ್ಬರ್‌ ಸಿಂಗ್ ಟ್ಯಾಕ್ಸ್‌ನಂತಹ (ಜಿಎಸ್‌ಟಿ) ವಿಫಲ ನೀತಿಗಳ ಮೂಲಕ ದೇಶದ ಆರ್ಥಿಕತೆಯಲ್ಲಿ ಚಲಾವಣೆಯಲ್ಲಿದ್ದ ಹಣವನ್ನು ಕಿತ್ತುಕೊಂಡಿದ್ದನ್ನು ಬಿಟ್ಟು ಐದು ವರ್ಷಗಳಲ್ಲಿ ಮೋದಿ ಬೇರೇನೂ ಮಾಡಿಲ್ಲ.

‘ನ್ಯಾಯ್‌ ಕಾರ್ಯಕ್ರಮ ಎರಡು ಉದ್ದೇಶಗಳನ್ನು ಹೊಂದಿದೆ. ದೇಶದ ಜನಸಂಖ್ಯೆಯಲ್ಲಿ ಶೇ 20ರಷ್ಟಿರುವ ಬಡವರಿಗೆ ಕನಿಷ್ಠ ಆದಾಯ ಖಾತರಿಯನ್ನು ನೀಡುವುದು ಮೊದಲ ಉದ್ದೇಶ. ನೋಟುರದ್ದತಿ ಮೂಲಕ ಸ್ಥಗಿತವಾಗಿರುವ ಆರ್ಥಿಕತೆಗೆ ಮರುಚಾಲನೆ ನೀಡುವುದು ಎರಡನೇ ಉದ್ದೇಶ. ಈ ಕಾರ್ಯಕ್ರಮಕ್ಕೆ ನ್ಯಾಯ್‌ ಎಂದು ಹೆಸರು ಇಡಲೂ ಒಂದು ಕಾರಣವಿದೆ. ಮೋದಿ ಸರ್ಕಾರ ಐದು ವರ್ಷಗಳಲ್ಲಿ ಬಡವರಿಂದ ಎಲ್ಲವನ್ನೂ ಕಸಿಯುವ ಕೆಲಸ ಮಾಡಿದೆ. ಅದರ ಬದಲಿಗೆ ಏನನ್ನೂ ವಾಪಸ್ ನೀಡಿಲ್ಲ. ಮೋದಿ ಕಸಿದುಕೊಂಡದ್ದನ್ನು ಆ ಜನರಿಗೆ ವಾಪಸ್ ನೀಡಿ ನ್ಯಾಯ ಒದಗಿಸಲಾಗುತ್ತದೆ. ಹೀಗಾಗಿಯೇ ಇದಕ್ಕೆ ನ್ಯಾಯ್ ಎಂದು ಹೆಸರಿಡಲಾಗಿದೆ.

‘ಮೋದಿ ಯಾರೊಂದಿಗೂ ಸಮಾಲೋಚಿಸದೇ ನೋಟುರದ್ದತಿ ಮತ್ತು ಜಿಎಸ್‌ಟಿ ಜಾರಿಗೆ ತಂದಿದ್ದರು. ನಾವು ಆ ರೀತಿ ಮಾಡುವುದಿಲ್ಲ. ಮೊದಲು ದೇಶದ ಕೆಲವೆಡೆ ಮಾತ್ರ ಪ್ರಾಯೋಗಿಕವಾಗಿ ಜಾರಿಗೆ ತರುತ್ತೇವೆ. ಅನುಷ್ಠಾನದಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ದೇಶದಾದ್ಯಂತ ಜಾರಿಗೆ ತರುವ ಯೋಚನೆ ಇದೆ. ಅರ್ಹರನ್ನು ಆಯ್ಕೆ ಮಾಡಲು ಸೂಕ್ತ ಪದ್ಧತಿ ಅಳವಡಿಸಿಕೊಳ್ಳಲಾಗುತ್ತದೆ. ಯುಪಿಎ ಆಡಳಿತದಲ್ಲಿ 14 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲಕ್ಕೆ ಎತ್ತಿದ್ದೇವೆ. ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುತ್ತೇವೆ’ ಎಂದರು.

* ನರೇಂದ್ರ ಮೋದಿ ಅವರು ಕೇವಲ 15 ಉದ್ಯಮಿಗಳಿಗೆ ₹ 3.5 ಲಕ್ಷ ನೀಡಿದ್ದು ಜನಪ್ರಿಯ ಯೋಜನೆ ಅಲ್ಲದಿದ್ದ ಮೇಲೆ, ಕಡುಬಡವರಿಗೆ ಜೀವನ ಭದ್ರತೆ ಒದಗಿಸುವ ‘ನ್ಯಾಯ್‌’ ಹೇಗೆ ಜನಪ್ರಿಯತೆಯ ಸರಕಾಗುತ್ತದೆ?

– ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

* ದೇಶದ ಜನರಿಗೆ ಬ್ಯಾಂಕ್‌ ಖಾತೆ ಮಾಡಿಕೊಡಿಸಲು ಸಾಧ್ಯವಿಲ್ಲದಿದ್ದವರು ಇಂದು, ‘ಕನಿಷ್ಠ ಆದಾಯವನ್ನು ಬಡವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತೇವೆ’ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

– ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT