ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Delhi Pollution | ಮಾಲಿನ್ಯದ ಪರದೆ ಸರಿಸಿದ ತುಂತುರು ಮಳೆ; ಸಮ–ಬೆಸ ಮುಂದಕ್ಕೆ

Published 11 ನವೆಂಬರ್ 2023, 2:40 IST
Last Updated 11 ನವೆಂಬರ್ 2023, 2:40 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಕಾಲಿಕ ಮಳೆಯ ಸಿಂಚನದಿಂದಾಗಿ ದಟ್ಟವಾಗಿ ಕವಿದಿದ್ದ ಮಾಲಿನ್ಯದ ಪರದೆ ಸರಿದು ಜನರು ನೆಮ್ಮದಿಯಿಂದ ಉಸಿರಾಡುವಂತಾಗಿದೆ. ಇದರಿಂದಾಗಿ ನ. 13ರಿಂದ ಜಾರಿಗೆ ಬರಬೇಕಿದ್ದ ಸಮ–ಬೆಸ ವಾಹನ ಸಂಚಾರವನ್ನು ಸರ್ಕಾರ ಮುಂದೂಡಿದೆ.

ಕಳೆದ ಎರಡು ವಾರಗಳಿಂದ ದೆಹಲಿ ವಾಯು ಮಾಲಿನ್ಯ ಪ್ರಮಾಣ ಕಳವಳಕಾರಿ ಮಟ್ಟಕ್ಕೆ ಏರಿಕೆಯಾಗಿತ್ತು. ಶುಕ್ರವಾರ ಸುರಿದ ಮಳೆಯಿಂದಾಗಿ ನಗರದಲ್ಲಿನ ತಾಪಮಾನ ತಗ್ಗಿದೆ. ಗರಿಷ್ಠ ತಾಪಮಾನ 22.7 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದೆ. ಬುಧವಾರ ಹಾಗೂ ಗುರುವಾರ ಮಾಲಿನ್ಯ ಕಣಗಳ ಪ್ರಮಾಣ ಪ್ರತಿ ಘನ ಮೀಟರ್‌ಗೆ ಕ್ರಮವಾಗಿ 436 ಹಾಗೂ 437 ಇತ್ತು. ಶುಕ್ರವಾರ ಸುರಿದ ಮಳೆಯಿಂದಾಗಿ ಮಾಲಿನ್ಯ ಪ್ರಮಾಣ 279ಕ್ಕೆ ತಗ್ಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದೆಹಲಿ ವಾಯು ಮಾಲಿನ್ಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌, ದೆಹಲಿ ಮತ್ತು ಎನ್‌ಆರ್‌ಸಿಯಲ್ಲಿ ವಾಯು ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರವು ಸೂಕ್ತ ಹಾಗೂ ಪರಿಣಾಮಕಾರಿ ಕ್ರಮ ಕೈಗೊಂಡು ನ್ಯಾಯಾಲಯದ ಮೇಲಿನ ಹೊರೆಯನ್ನು ತಗ್ಗಿಸಬೇಕು ಎಂದಿತ್ತು.

ದೆಹಲಿ ವಾಯು ಮಾಲಿನ್ಯ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಪರಿಸರ ಸಚಿವ ಗೋಪಾಲ ರಾಯ್, ‘ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟ ಕುರಿತು ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ನಂತರ ಸಮ–ಬೆಸ ಸಂಖ್ಯೆಯ ನೋಂದಣಿ ಇರುವ ವಾಹನಗಳಿಗೆ ಒಂದೊಂದು ದಿನ ನಿರ್ಬಂಧ ಹೇರುವ ವ್ಯವಸ್ಥೆ ಜಾರಿ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಕುಲದೀಪ್ ಶ್ರೀವಾಸ್ತವ ಅವರು ಪ್ರತಿಕ್ರಿಯಿಸಿ, ‘ಪಂಜಾಬ್, ಹರಿಯಾಣ ಹಾಗೂ ಪಶ್ಚಿಮ ಉತ್ತರ ಪ್ರದೇಶ ಸೇರಿದಂತೆ ಆಗ್ನೇಯ ಭಾರತದಲ್ಲಿ ಮಳೆ ದಾಖಲಾಗಿದೆ. ನ. 11ರ ನಂತರ ಗಾಳಿಯ ವೇಗವು ಪ್ರತಿ ಗಂಟೆಗೆ 15 ಕಿ.ಮೀ.ಗೆ ಹೆಚ್ಚಲಿದೆ. ಇದು ಮಾಲಿನ್ಯ ಪ್ರಮಾಣ ತಗ್ಗಿಸಲು ನೆರವಾಗಲಿದೆ’ ಎಂದಿದ್ದಾರೆ.

ದೆಹಲಿ ಮಾಲಿನ್ಯ ವಿಷಯವಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠವು, ‘ಸಮ–ಬೆಸ ವ್ಯವಸ್ಥೆಯು ಮಾಲಿನ್ಯ ನಿವಾರಣೆಯಲ್ಲಿ ಯಾವುದೇ ಪ್ರಮುಖ ಪಾತ್ರ ವಹಿಸದು. ಆದರೆ ಪಕ್ಕದ ರಾಜ್ಯಗಳಿಂದ ದೆಹಲಿ ಪ್ರವೇಶಿಸುವ ಟ್ಯಾಕ್ಸಿಗಳಿಗೆ ಈ ನಿಯಮ ಅನ್ವಯಿಸುತ್ತಿಲ್ಲ’ ಎಂದಿತ್ತು.

ಇದಕ್ಕೆ ಉತ್ತರಿಸಿದ್ದ ದೆಹಲಿ ಪರಿಸರ ಸಚಿವ, ‘ಸುಪ್ರೀಂ ಕೋರ್ಟ್‌ ಆದೇಶದ ನಂತರವೇ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು’ ಎಂದಿದ್ದರು.

ದೆಹಲಿ ಸರ್ಕಾರ ಪರ ವಕೀಲರು ವಾದ ಮಂಡಿಸಿ, ‘ಪಕ್ಕದ ರಾಜ್ಯಗಳಿಂದ ದೆಹಲಿ ಪ್ರವೇಶಿಸುವ ಟ್ಯಾಕ್ಸಿಗಳಿಗೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ದೆಹಲಿಯಲ್ಲಿ ಸಂಚಾರದ ದೊಡ್ಡ ಸಮಸ್ಯೆ ಉಂಟಾಗಲಿದೆ. ಪಕ್ಕದ ರಾಜ್ಯಗಳ ನೊಯಿಡಾ, ಗುರುಗ್ರಾಮ ಸೇರಿದಂತೆ ಹಲವು ನಗರಗಳಿಂದ ನಿತ್ಯ ಲಕ್ಷಗಟ್ಟಲೆ ಜನ ದುಡಿಮೆಗಾಗಿ ದೆಹಲಿಗೆ ಪ್ರಯಾಣಿಸುತ್ತಾರೆ’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿದ್ದ ನ್ಯಾಯಮೂರ್ತಿ, ‘ನಿಮ್ಮ ಸಮಸ್ಯೆ ಅರ್ಥವಾಗುತ್ತದೆ. ಆದರೆ ಪರಿಣಾಮ ಬೀರದ ಪ್ರಯೋಗಗಳನ್ನು ಮಾಡಿ, ಅದರ ಒತ್ತಡವನ್ನು ನ್ಯಾಯಾಲಯದ ಮೇಲೆ ಹೇರಬೇಡಿ’ ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT