ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: BJD ಜೊತೆ ಮಾತುಕತೆ ಅಪೂರ್ಣ, ಏಕಾಂಗಿ ಸ್ಪರ್ಧೆ ಸುಳಿವು ನೀಡಿದ BJP

Published 9 ಮಾರ್ಚ್ 2024, 5:02 IST
Last Updated 9 ಮಾರ್ಚ್ 2024, 5:02 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದಲ್ಲಿ ಬಿಜೆಪಿ ಮತ್ತು ಬಿಜೆಡಿ ನಡುವಿನ ಸೀಟು ಹಂಚಿಕೆ ಮಾತುಕತೆಯು ಯಾವುದೇ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿದ್ದು, ಅಲ್ಲಿ ಬಿಜೆಪಿಯು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

ಒಡಿಶಾದಲ್ಲಿ 147 ವಿಧಾನಸಭಾ ಕ್ಷೇತ್ರಗಳು, 21 ಲೋಕಸಭಾ ಕ್ಷೇತ್ರಗಳು ಇವೆ. ಬಿಜೆಪಿ ಮತ್ತು ಬಿಜೆಡಿ ನಡುವೆ ದೆಹಲಿಯಲ್ಲಿ ಸೀಟು ಹಂಚಿಕೆ ಮಾತುಕತೆ ನಡೆದಿತ್ತು.

‘ಮೈತ್ರಿ ಬಗ್ಗೆ ಮಾತುಕತೆ ಆಗಿಲ್ಲ. ನಾವು (ಬಿಜೆಪಿ) ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ’ ಎಂದು ಒಡಿಶಾ ಬಿಜೆಪಿ ಘಟಕದ ಅಧ್ಯಕ್ಷ ಮನಮೋಹನ್ ಸಾಮಲ್ ಅವರು ದೆಹಲಿಯಿಂದ ವಾಪಸ್ಸಾದ ನಂತರ ತಿಳಿಸಿದ್ದಾರೆ. ಒಡಿಶಾದಲ್ಲಿ ಬಿಜೆಪಿಯು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಜೊತೆ ಮೈತ್ರಿ ಬಗ್ಗೆ ಮಾತುಕತೆ ನಡೆಸಲು ಚಾರ್ಟರ್ಡ್‌ ವಿಮಾನದಲ್ಲಿ ದೆಹಲಿಗೆ ದೌಡಾಯಿಸಿದ್ದ ಬಿಜೆಡಿ ನಾಯಕರಾದ ವಿ.ಕೆ. ಪಾಂಡಿಯನ್ ಮತ್ತು ಪ್ರಣಬ್ ಪ್ರಕಾಶ್ ದಾಸ್ ಅವರು ಕೂಡ ಭುವನೇಶ್ವರಕ್ಕೆ ವಾಪಸ್ಸಾಗಿದ್ದಾರೆ. ಸಭೆಯ ತೀರ್ಮಾನದ ಬಗ್ಗೆ ಅವರು ಮೌನತಾಳಿದ್ದಾರೆ.

ಬಿಜೆಪಿ ಮತ್ತು ಬಿಜೆಡಿ ನಡುವಿನ ಮೈತ್ರಿ ಮಾತುಕತೆಗೆ ಸೀಟು ಹಂಚಿಕೆಯು ಅಡ್ಡಿಯಾಗಿ ಪರಿಣಮಿಸಿದೆ ಎಂದು ಮೂಲಗಳು ಹೇಳಿವೆ. ಚುನಾವಣೆಗೂ ಮೊದಲು ಮೈತ್ರಿ ಮಾಡಿಕೊಳ್ಳಲು ಎರಡೂ ಪಕ್ಷಗಳು ಒಪ್ಪಿದ್ದವು. ಆದರೆ ಸೀಟು ಹಂಚಿಕೆಯ ವಿಚಾರವಾಗಿ ಒಮ್ಮತ ಮೂಡಿಲ್ಲ. 100ಕ್ಕೂ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕು ಎಂದು ಬಿಜೆಡಿ ಕೇಳಿತು. ಇದು ಬಿಜೆಪಿಗೆ ಒಪ್ಪಿಗೆಯಾಗಲಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

ಹಾಲಿ ವಿಧಾನಸಭೆಯಲ್ಲಿ ಬಿಜೆಡಿ 114 ಸದಸ್ಯರನ್ನು ಹೊಂದಿದೆ. ‘ಬಿಜೆಡಿಯು ವಿಧಾನಸಭೆಯ ಒಟ್ಟು ಸಂಖ್ಯಾಬಲದ ಶೇಕಡ 75ರಷ್ಟು ಸ್ಥಾನಗಳನ್ನು ಕೇಳುತ್ತಿದೆ. ಇದನ್ನು ಒಪ್ಪಿಕೊಳ್ಳಲು ನಮ್ಮಿಂದ ಆಗದು’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು. ಬಿಜೆಪಿಯು ಒಡಿಶಾದ 21 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕು ಎಂದು ಕೇಳಿತು. ಇದನ್ನು ಬಿಜೆಡಿ ಒಪ್ಪಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ 12 ಸ್ಥಾನಗಳಲ್ಲಿ, ಬಿಜೆಪಿ ಎಂಟು ಸ್ಥಾನಗಳಲ್ಲಿ ಗೆಲುವು ಕಂಡಿದ್ದವು.

‘ಹತ್ತಕ್ಕಿಂತ ಕಡಿಮೆ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವದು ನಮ್ಮ ಪಾಲಿಗೆ ಆತ್ಮಘಾತುಕ ನಡೆಯಾಗುತ್ತದೆ’ ಎಂದು ಬಿಜೆಡಿ ನಾಯಕರೊಬ್ಬರು ಹೇಳಿದರು.

ಬಿಜೆಪಿ ಮತ್ತು ಬಿಜೆಡಿ ಒಡಿಶಾದಲ್ಲಿ 1998ರಿಂದ 2009ರವರೆಗೆ ಮೈತ್ರಿ ಮಾಡಿಕೊಂಡಿದ್ದವು. ಮೂರು ಲೋಕಸಭಾ ಚುನಾವಣೆಗಳನ್ನು ಹಾಗೂ ಎರಡು ವಿಧಾನಸಭಾ ಚುನಾವಣೆಗಳನ್ನು ಒಟ್ಟಾಗಿ ಎದುರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT