ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ ರೈಲು ದುರಂತ: ಮೃತದೇಹಕ್ಕೆ ಕಾದಿರುವ ಸಂತ್ರಸ್ತ ಕುಟುಂಬ

Published 28 ಜೂನ್ 2023, 11:50 IST
Last Updated 28 ಜೂನ್ 2023, 11:50 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ರೈಲು ದುರಂತ ಘಟಿಸಿ ನಾಲ್ಕು ವಾರ ಕಳೆದರೂ ಸಂತ್ರಸ್ತರ ದುಃಖ ಕಡಿಮೆ ಆಗಿಲ್ಲ. ಈಗಲೂ ಅವರು ತಮ್ಮ ಕುಟುಂಬದವರ ಮತ್ತು ಪ್ರೀತಿಪಾತ್ರರ ಮೃತದೇಹಗಳಿಗಾಗಿ ಕಾಯುತ್ತಿದ್ದಾರೆ. 

ಬಿಹಾರದ ಬೇಗುಸರಾಯ್ ಜಿಲ್ಲೆಯ ಬರಿ-ಬಲ್ಲಿಯಾ ಗ್ರಾಮದ ಬಸಂತಿ ದೇವಿ ಅವರು ಕಳೆದ 10 ದಿನಗಳಿಂದ ತನ್ನ ಪತಿಯ ಮೃತದೇಹ ಪಡೆಯಲು ಏಮ್ಸ್ ಸಮೀಪದ ಅತಿಥಿಗೃಹದಲ್ಲಿ ಮೊಕ್ಕಾಂ ಹೂಡಿದ್ದಾರೆ.

‘ಗುತ್ತಿಗೆ ಕಾರ್ಮಿಕರಾಗಿದ್ದ ನನ್ನ ಪತಿ ಯೋಗೇಂದ್ರ ಪಾಸ್ವಾನ್ ರೈಲು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಶವವನ್ನು ಯಾವಾಗ ಹಸ್ತಾಂತರ ಮಾಡಲಾಗುವುದು ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಕೆಲ ಅಧಿಕಾರಿಗಳು ಇನ್ನೂ 5 ದಿನವಾಗಬಹುದು ಎಂದು ಹೇಳಿದರೆ, ಮತ್ತೆ ಕೆಲವರು ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎನ್ನುತ್ತಿದ್ದಾರೆ. ಯಾವುದೇ ಸ್ಪಷ್ಟತೆ ಇಲ್ಲ’ ಎಂದು ಅವರು ಕಣ್ಣೀರಿಟ್ಟರು.  

‘ನನಗೆ ಐದು ಜನ ಮಕ್ಕಳಿದ್ದಾರೆ. ಮೂವರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು, ಇಬ್ಬರು ಗಂಡು ಮಕ್ಕಳನ್ನು ಕರೆತಂದಿದ್ದೇನೆ. ಪತಿ ಕುಟುಂಬಕ್ಕೆ ಆಧಾರವಾಗಿದ್ದರು. ದಿಕ್ಕು ತೋಚದಂತಾಗಿದೆ’ ಎಂದು ಅಲವತ್ತುಕೊಂಡರು. 

ಮೊಮ್ಮಗ ಸೂರಜ್ ಕುಮಾರ್ ಅವರ ಶವ ಪಡೆಯಲು ಕಾಯುತ್ತಿರುವ ಪೂರ್ಣಿಯಾ ಮೂಲದ ನಾರಾಯಣ್ ರಿಷಿದೇವ್ ಅವರ ಪರಿಸ್ಥಿತಿಯೂ ಇದೇ ಆಗಿದೆ. ಸೂರಜ್ ಅವರು ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದರು.

‘ಅಧಿಕಾರಿಗಳು ಈಗಾಗಲೇ ನನ್ನ ಡಿಎನ್ಎ ಮಾದರಿ ತೆಗೆದುಕೊಂಡಿದ್ದಾರೆ. ಆದರೆ, ವರದಿ ಇನ್ನೂ ಬಂದಿಲ್ಲ’ ಎಂದರು. 

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಶಿವಕಾಂತ್ ರಾಯ್ ಅವರ ಮಗ ವಿಪುಲ್, ತಿರುಪತಿಯಿಂದ ಮನೆಗೆ ಮರಳುತ್ತಿದ್ದರು.

‘ನನ್ನ ಮಗನ ಶವವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಆದರೆ, ನಾನು ಅವನನ್ನು ಬಾಲಸೋರ್ ಆಸ್ಪತ್ರೆಯಲ್ಲಿ ಹುಡುಕುತ್ತಿದ್ದೆ. ನಂತರ ಕಿಮ್ಸ್ ಆಸ್ಪತ್ರೆಯು ಶವವನ್ನು ಬಿಹಾರದ ವ್ಯಕ್ತಿಯೊಬ್ಬರಿಗೆ ಹಸ್ತಾಂತರಿಸಿದೆ ಎಂದು ನನಗೆ ತಿಳಿಸಲಾಯಿತು. ಅವರು ಅದನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ’ ಎಂದು ಶಿವಕಾಂತ್ ರಾಯ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.  

ಬಿಹಾರದ ಮಿಜಾಫರ್ಪುರದ ರಾಜಕಾಳಿ ದೇವಿ ಅವರು ಚೆನ್ನೈಗೆ ತೆರಳುತ್ತಿದ್ದ ತನ್ನ ಪತಿಯ ಶವಕ್ಕಾಗಿ ಕಾಯುತ್ತಿದ್ದಾರೆ.

‘ನಾವು ಏಮ್ಸ್ ಮತ್ತು ರಾಜ್ಯ ಸರ್ಕಾರದ ನಡುವಿನ ಸೇತುವೆಯಷ್ಟೇ. ತಮ್ಮ ಡಿಎನ್‌ಎ ಮಾದರಿ ನೀಡುವಂತೆ ಸಂತ್ರಸ್ತ ಕುಟುಂಬದವರಿಗೆ ಮನವಿ ಮಾಡುತ್ತಿದ್ದೇವೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.  

ಅತಿಥಿ ಗೃಹದಲ್ಲಿ 35 ಜನರು ಮೊಕ್ಕಾಂ ಮಾಡಿದ್ದರೆ, ಡಿಎನ್ಎ ವರದಿ ವಿಳಂಬವಾದ ಕಾರಣ ಇತರೆ 15 ಮಂದಿ ಮನೆಗೆ ತೆರಳಿದ್ದಾರೆ. 

ಜೂನ್ 2ರ ತ್ರಿವಳಿ ರೈಲು ಅಪಘಾತದಲ್ಲಿ 290ಕ್ಕೂ ಹೆಚ್ಚು ಪ್ರಯಾಣಿಕರು ಮೃತಪ‍ಟ್ಟಿದ್ದರು. 

ಈ ನಡುವೆ ಭುವನೇಶ್ವರ ಏಮ್ಸ್‌ನ  ಮೂರು ಕಂಟೇನರ್‌ಗಳಲ್ಲಿ ಸಂರಕ್ಷಿಸಲಾದ 81 ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಈವರೆಗೆ ಒಟ್ಟು 84 ಕುಟುಂಬಗಳು ಡಿಎನ್ಎ ಮಾದರಿ ನೀಡಿವೆ.

ಏಮ್ಸ್ ನಿರ್ದೇಶಕ ಅಶುತೋಷ್ ಬಿಸ್ವಾಸ್ ಅವರಿಗೆ ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT