ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತಾಧಿಕಾರ ಸಮಿತಿ ವಿಸರ್ಜಿಸಲು ಖರ್ಗೆ ಆಗ್ರಹ

ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಪರಿಶೀಲನೆಗೆ ರಚಿಸಿರುವ ಸಮಿತಿ
Published 19 ಜನವರಿ 2024, 15:42 IST
Last Updated 19 ಜನವರಿ 2024, 15:42 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಆಲೋಚನೆಯು ‘ಪ್ರಜಾತಂತ್ರ ವಿರೋಧಿ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನದ ಮೂಲ ಸ್ವರೂಪಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಏಕಕಾಲಕ್ಕೆ ಚುನಾವಣೆ ನಡೆಸುವ ಆಲೋಚನೆಯನ್ನು ಕೈಬಿಡಬೇಕು, ಇದರ ಬಗ್ಗೆ ಅಧ್ಯಯನ ನಡೆಸಲು ರಚಿಸಿರುವ ಉನ್ನತಾಧಿಕಾರ ಸಮಿತಿಯನ್ನು ವಿಸರ್ಜಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ‘ಒಂದು ದೇಶ, ಒಂದು ಚುನಾವಣೆ’ಗೆ ಸಂಬಂಧಿಸಿದ ಸಮಿತಿಯ ಕಾರ್ಯದರ್ಶಿ ನಿತಿನ್ ಚಂದ್ರ ಅವರಿಗೆ ಖರ್ಗೆ ಅವರು ಈ ಪತ್ರ ಬರೆದಿದ್ದಾರೆ. 

ಚಂದ್ರ ಅವರು ಅಕ್ಟೋಬರ್ 18ರಂದು ಬರೆದ ಪತ್ರದಲ್ಲಿ, ಸಮಿತಿಯ ಪರಿಶೀಲನೆಗೆ ಸಲಹೆಗಳನ್ನು ಕಳುಹಿಸಬೇಕು ಎಂದು ಕೇಳಿದ್ದರು. ಇದಕ್ಕೆ ಪ್ರತಿಯಾಗಿ ಖರ್ಗೆ ಅವರು ಪತ್ರ ಬರೆದಿದ್ದಾರೆ. ಸಮಿತಿಯು ತನ್ನ ನಿಲುವು ಏನಿರಬೇಕು ಎಂಬುದನ್ನು ಈಗಾಗಲೇ ತೀರ್ಮಾನಿಸಿರುವಂತಿದೆ, ಸಮಾಲೋಚನೆಗೆ ಮುಂದಾಗುತ್ತಿರುವುದು ಕಣ್ಣೊರೆಸುವ ತಂತ್ರವೆಂಬಂತೆ ಕಾಣುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.

ಸಮಿತಿಯ ಸಂರಚನೆಯು ಪಕ್ಷಪಾತಿಯಾಗಿದೆ. ಸಮಿತಿಯ ಶಿಫಾರಸುಗಳು ರಾಜ್ಯ ಸರ್ಕಾರಗಳ ಮೇಲೆಯೂ ಪರಿಣಾಮ ಬೀರುತ್ತದೆ. ಆದರೆ, ಬೇರೆ ಬೇರೆ ರಾಜ್ಯಗಳಲ್ಲಿ ಸರ್ಕಾರದ ನೇತೃತ್ವ ವಹಿಸಿರುವ ವಿರೋಧ ಪಕ್ಷಗಳಿಗೆ ಈ ಸಮಿತಿಯಲ್ಲಿ ಗಮನಾರ್ಹವಾದ ಪ್ರಾತಿನಿಧ್ಯವೇ ಇಲ್ಲ ಎಂದು ಖರ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ದೇಶದ ಮಾಜಿ ರಾಷ್ಟ್ರಪತಿಯೇ ಈ ಸಮಿತಿಯ ನೇತೃತ್ವ ವಹಿಸಿದ್ದಾರೆ. ಆದರೆ, ಸಮಿತಿ ನಡೆಸುವ ಸಮಾಲೋಚನೆಯು ತೋರಿಕೆಯದ್ದು ಮಾತ್ರ ಎಂದು ಸಾಮಾನ್ಯ ಮತದಾರರಿಗೆ ಕೂಡ ಅನಿಸುತ್ತಿರುವುದು ನೋವು ತರುವಂಥದ್ದು. ಪ್ರಸ್ತಾವದ ಪರವಾಗಿ ಪ್ರಬಲವಾಗಿ ಅನಿಸಿಕೆಗಳನ್ನು ಈಗಾಗಲೇ ಸಾರ್ವಜನಿಕವಾಗಿ ಹೇಳಿಯಾಗಿದೆ. ಪ್ರಸ್ತಾವದ ಸಾಧಕ, ಬಾಧಕಗಳ ಬಗ್ಗೆ ರಾಗದ್ವೇಷಗಳು ಇಲ್ಲದೆ ವಿಶ್ಲೇಷಣೆ ನಡೆಸುವ ಗಂಭೀರ ಹಾಗೂ ವ್ಯವಸ್ಥಿತ ಯತ್ನವು ಆಗುತ್ತಿಲ್ಲ’ ಎಂದು ಖರ್ಗೆ ಅವರು ಪತ್ರದಲ್ಲಿ ಬರೆದಿದ್ದಾರೆ.

ತಾವು ಜಾರಿಗೆ ತರಲು ಯತ್ನಿಸುತ್ತಿರುವ ಆಲೋಚನೆಯು ಸಂವಿಧಾನದ ಮೂಲಸ್ವರೂಪಕ್ಕೆ ವಿರುದ್ಧವಾಗಿದೆ ಹಾಗೂ ಆಲೋಚನೆಯನ್ನು ಅನುಷ್ಠಾನಕ್ಕೆ ತರಬೇಕು ಎಂದಾದರೆ ಮೂಲಸ್ವರೂಪದಲ್ಲಿ ಗಣನೀಯವಾದ ಬದಲಾವಣೆಯನ್ನು ತರಬೇಕಾಗುತ್ತದೆ ಎಂಬುದನ್ನು ಸರ್ಕಾರ ಹಾಗೂ ಸಮಿತಿಯು ಆರಂಭದಲ್ಲಿಯೇ ಪ್ರಾಮಾಣಿಕವಾಗಿ ಹೇಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT