ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದೇಶ ಒಂದು ಚುನಾವಣೆ: 32 ಪಕ್ಷಗಳ ಬೆಂಬಲ, 15 ಪಕ್ಷಗಳಿಂದ ವಿರೋಧ

Published 14 ಮಾರ್ಚ್ 2024, 9:49 IST
Last Updated 14 ಮಾರ್ಚ್ 2024, 9:49 IST
ಅಕ್ಷರ ಗಾತ್ರ

ನವದೆಹಲಿ: ಒಂದು ದೇಶ ಒಂದು ಚುನಾವಣೆಗಾಗಿ’ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು 62 ರಾಜಕೀಯ ಪಕ್ಷಗಳ ಬಳಿ ಅಭಿಪ್ರಾಯ ಕೇಳಿದ್ದು, ಇದರಲ್ಲಿ 47 ಪಕ್ಷಗಳು ಪ್ರತಿಕ್ರಿಯಿಸಿವೆ.

ಈ ಪೈಕಿ 32 ಪಕ್ಷಗಳು ಒಂದು ದೇಶ ಒಂದು ಚುನಾವಣೆ ಪರ ಅಭಿಪ್ರಾಯ ತಿಳಿಸಿದ್ದು, 15 ‍ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. 15 ಪಕ್ಷಗಳು ಪ್ರತಿಕ್ರಿಯೆ ನೀಡಿಲ್ಲ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಲಾದ ವರದಿಯಲ್ಲಿ ಹೇಳಲಾಗಿದೆ.

ಕಾಂಗ್ರೆಸ್‌, ಆಮ್ ಆದ್ಮಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಹಾಗೂ ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸ್‌ವಾದ) ಮುಂತಾದ ರಾಷ್ಟ್ರೀಯ ಪಕ್ಷಗಳು ಈ ಪ್ರಸ್ತಾವನೆಯನ್ನು ವಿರೋಧಿಸಿದ್ದು, ಭಾರತೀಯ ಜನತಾ ಪಕ್ಷ ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ ಇದಕ್ಕೆ ಸಹಮತ ವ್ಯಕ್ತಪಡಿಸಿದೆ.

‘ಇದು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸಲಿದೆ. ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವಿರೋಧಿ. ಪ್ರಾದೇಶಿಕ ಪಕ್ಷಗಳ ಅಳಿವಿನಂಚಿಗೆ ನೂಕಬಹುದು. ರಾಷ್ಟ್ರೀಯ ಪಕ್ಷಗಳ ಬಲವರ್ಧನೆಗೆ ಇಂಬು ನೀಡಬಹುದು. ಅಧ್ಯಕ್ಷೀಯ ಮಾದರಿಯ ಸರ್ಕಾರ ರಚನೆಗೆ ಕಾರಣವಾಗಬಹುದು ಎಂದು ಪ್ರಸ್ತಾವದ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಪಕ್ಷಗಳು ಅಭಿಪ್ರಾಯಪಟ್ಟಿವೆ’ ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.

ಎಎಪಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ರಚನೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿರುವುದಾಗಿ ವರದಿಯಲ್ಲಿ ದಾಖಲಿಸಿಲಾಗಿದೆ.

ಬಿಎಸ್‌ಪಿ ಇದನ್ನು ಸ್ಪಷ್ಟವಾಗಿ ವಿರೋಧಿಸದಿದ್ದರೂ, ಅನುಷ್ಠಾನ ದೊಡ್ಡ ಸವಾಲು ಎಂದು ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಏಕಕಾಲದಲ್ಲಿ ಚುನಾವಣೆಗಳು ನಡೆದರೆ, ರಾಜ್ಯ ಮಟ್ಟದ ಪಕ್ಷಗಳು ಚುನಾವಣಾ ತಂತ್ರಗಾರಿಕೆ ಮತ್ತು ವೆಚ್ಚದಲ್ಲಿ ರಾಷ್ಟ್ರೀಯ ಪಕ್ಷಗಳೊಂದಿಗೆ ಸ್ಪರ್ಧಿಸಲು ಅಸಾಧ್ಯ’ ಎಂದು ಬಿಎಸ್‌ಪಿ ಅಭಿಪ್ರಾಯ‍ಪಟ್ಟಿದೆ.

ರಾಜ್ಯ ಪಕ್ಷಗಳ ಪೈಕಿ ಎಐಯುಡಿಎಫ್, ತೃಣಮೂಲ ಕಾಂಗ್ರೆಸ್, ಎಐಎಂಐಎಂ, ಸಿಪಿಐ, ಡಿಎಂಕೆ, ನಾಗಾ ಪೀಪಲ್ಸ್ ಫ್ರಂಟ್ ಮತ್ತು ಸಮಾಜವಾದಿ ಪಕ್ಷಗಳು ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾಪವನ್ನು ವಿರೋಧಿಸಿವೆ.

ಎಐಎಡಿಎಂಕೆ, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್, ಅಪ್ನಾ ದಳ (ಸೋನಿ ಲಾಲ್), ಅಸೊಮ್ ಗಣ ಪರಿಷತ್, ಬಿಜು ಜನತಾ ದಳ, ಲೋಕ ಜನಶಕ್ತಿ ಪಕ್ಷ (ಆರ್), ಮಿಜೋ ನ್ಯಾಷನಲ್ ಫ್ರಂಟ್, ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ, ಶಿವಸೇನಾ, ಜನತಾ ದಳ (ಸಂಯುಕ್ತ), ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಶಿರೋಮಣಿ ಅಕಾಲಿದಳ ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಈ ಪ್ರಸ್ತಾಪವನ್ನು ಬೆಂಬಲಿಸಿವೆ.

ಭಾರತ ರಾಷ್ಟ್ರ ಸಮಿತಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಜನತಾ ದಳ (ಜಾತ್ಯತೀತ), ಜಾರ್ಖಂಡ್ ಮುಕ್ತಿ ಮೋರ್ಚಾ, ಕೇರಳ ಕಾಂಗ್ರೆಸ್ (ಎಂ), ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ರಾಷ್ಟ್ರೀಯ ಜನತಾ ದಳ, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ತೆಲುಗು ದೇಶಂ ಪಕ್ಷ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT