ಇಂಫಾಲ್: ಮೈತೇಯಿ ಮತ್ತು ಕುಕಿ ಜನರ ನಡುವೆ ಅಪನಂಬಿಕೆ ಬಲಗೊಂಡಿದೆ. ಎರಡೂ ಸಮುದಾಯಗಳ ನಡುವೆ ಮಾತುಕತೆ ಮೂಲಕ ಇದರ ಪರಿಹಾರಕ್ಕಾಗಿ ಸರ್ವಪಕ್ಷಗಳ ನಿಯೋಗವು ಕಣಿವೆ ರಾಜ್ಯಕ್ಕೆ ಭೇಟಿ ನೀಡಬೇಕಿದೆ ಎಂದು ಮಣಿಪುರದ ರಾಜ್ಯಪಾಲರಾದ ಅನುಸೂಯಾ ಉಯಿಕೆ ಸಲಹೆ ನೀಡಿದ್ದಾರೆ.
ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, ‘ರಾಜ್ಯಪಾಲರ ಸಲಹೆಯು ನ್ಯಾಯಯೋಚಿತವಾಗಿದ್ದು, ಇದಕ್ಕೆ ನಾವು ಒಪ್ಪಿಗೆ ಸೂಚಿಸಿದ್ದೇವೆ’ ಎಂದು ತಿಳಿಸಿದರು.
ಮಣಿಪುರದಲ್ಲಿ ಹಿಂಸಾಚಾರವನ್ನು ಶೀಘ್ರವೇ ನಿಯಂತ್ರಣಕ್ಕೆ ತರದಿದ್ದರೆ ದೇಶದಲ್ಲಿ ಭದ್ರತೆಯ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
‘ಸಂಘರ್ಷಕ್ಕೆ ಸಂಬಂಧಿಸಿದಂತೆ ನಿಯೋಗ ಮಂಡಿಸಿದ ವಿಷಯಗಳನ್ನು ರಾಜ್ಯಪಾಲರು ಆಲಿಸಿದರು. ಜನರ ಸಂಕಷ್ಟದ ಕಥೆಗಳನ್ನು ಕೇಳಿ ತೀವ್ರ ನೋವು ವ್ಯಕ್ತಪಡಿಸಿದರು’ ಎಂದರು.
ನಿಯೋಗದ ಸದಸ್ಯರು ಸಂತ್ರಸ್ತರ ಅಹವಾಲು ಕೇಳಿದ್ದಾರೆ. ಸಂಸತ್‌ನಲ್ಲಿ ಅವಕಾಶ ಲಭಿಸಿದರೆ ಕೇಂದ್ರ ಸರ್ಕಾರದ ಮೇಲೆ ಸಮಸ್ಯೆ ಬಗೆಹರಿಸಲು ಒತ್ತಡ ಹೇರಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯ ಕುರಿತು ಗಮನ ಸೆಳೆಯಲಾಗುವುದು. ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಕೋರುತ್ತೇವೆ ಎಂದು ತಿಳಿಸಿದರು.