ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಕ್ಕಿಂನಲ್ಲಿ ಭಾರಿ ಮಳೆ | ಭೂಕುಸಿತ : ದಾರಿ ಮಧ್ಯೆ ಸಿಲುಕಿದ 1,200 ಪ್ರವಾಸಿಗರು

Published 14 ಜೂನ್ 2024, 13:56 IST
Last Updated 14 ಜೂನ್ 2024, 13:56 IST
ಅಕ್ಷರ ಗಾತ್ರ

ಗ್ಯಾಂಗ್ಟಕ್: ಸಿಕ್ಕಿಂ ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಉತ್ತರ ಸಿಕ್ಕಿಂನಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದ 1,200 ಪ್ರವಾಸಿಗರು ದಾರಿ ಮಧ್ಯೆ ಸಿಲುಕಿಕೊಂಡಿದ್ದಾರೆ. ಇದರಲ್ಲಿ 15 ಮಂದಿ ವಿದೇಶಿ ಪ್ರವಾಸಿಗರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಉನ್ನತ ಮಟ್ಟದ ಸಭೆ ನಡೆಸಿದರು.

ಪ್ರವಾಸಿಗರನ್ನು ಏರ್‌ಲಿಫ್ಟ್ ಮಾಡಲು ಮುಖ್ಯ ಕಾರ್ಯದರ್ಶಿಗಳ ಕಚೇರಿ ಕೇಂದ್ರದ ಜೊತೆ ಈಗಾಗಲೇ ಚರ್ಚೆ ನಡೆಸಿದೆ. ಹವಾಮಾನದ ಸ್ಥಿತಿ ನೋಡಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಸಿಕ್ಕಿಂ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿ.ಎಸ್. ರಾವ್ ಹೇಳಿದ್ದಾರೆ.

ಮಳೆಯಿಂದ ರಾಜ್ಯದ ಹಲವೆಡೆ ಭೂಕುಸಿತ ಸಂಭವಿಸಿದ್ದು, ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಹಲವು ರಸ್ತೆಗಳ ಸಂಚಾರ ಬಂದ್ ಆಗಿದೆ. ಹಲವೆಡೆ ವಿದ್ಯುತ್, ಆಹಾರ ಸರಬರಾಜು ಸ್ಥಗಿತಗೊಂಡಿದೆ. ಮೊಬೈಲ್ ನೆಟ್ವರ್ಕ್ ಸಹ ವ್ಯತ್ಯಯಗೊಂಡಿವೆ.

‘ಸ್ಥಳೀಯ ವರದಿ ಪ್ರಕಾರ, 15 ಮಂದಿ ವಿದೇಶಿಗರು(ಥೈಲ್ಯಾಂಡ್‌ನ ಇಬ್ಬರು, ನೇಪಾಳದ ಮೂವರು ಮತ್ತು ಬಾಂಗ್ಲಾದೇಶದ 10 ಮಂದಿ) ಸೇರಿದಂತೆ 1,200 ಮಂದಿ ಲಾಚುಂಗ್ ಮತ್ತು ಮಂಗಾನ್ ಜಿಲ್ಲೆಗಳಲ್ಲಿ ಭೂಕುಸಿತದಿಂದ ಮಾರ್ಗ ಮಧ್ಯೆ ಸಿಲುಕಿದ್ದಾರೆ’ ಎಂದೂ ರಾವ್ ಹೇಳಿದ್ದಾರೆ.

ಎಲ್ಲ ಪ್ರವಾಸಿಗರು ಸುರಕ್ಷಿತವಾಗಿದ್ದು, ಯಾವುದೇ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳದಂತೆ ಪ್ರವಾಸಿಗರಿಗೆ ಸ್ಥಳೀಯ ಆಡಳಿತ ಸೂಚಿಸಿದೆ. ಪ್ರವಾಸಿಗರಿಗೆ ಬೇಕಾದಷ್ಟು ಆಹಾರ ಸರಬರಾಜು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT