ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾತ್ರಿ ಪಾಳಿಯಲ್ಲಿ ಮಹಿಳಾ ವೈದ್ಯರಿಗೆ ಕಾಡುತ್ತಿದೆ ಅಭದ್ರತೆ: ಐಎಂಎ ವರದಿ

Published : 30 ಆಗಸ್ಟ್ 2024, 2:41 IST
Last Updated : 30 ಆಗಸ್ಟ್ 2024, 2:41 IST
ಫಾಲೋ ಮಾಡಿ
Comments

ನವದೆಹಲಿ: ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿರುವ ವೈದ್ಯರಿಗೆ, ಅದರಲ್ಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಯನ ವರದಿ ಬಹಿರಂಗಪಡಿಸಿದೆ.

ಕೋಲ್ಕತ್ತದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ಐಎಂಎ ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ ಈ ವಿವರ ಬಹಿರಂಗವಾಗಿದೆ.

ಈ ವಿಷಯಗಳ ಕುರಿತು ಐಎಂಎ ದೇಶದಲ್ಲಿ ನಡೆಸಿದ ಅತಿ ದೊಡ್ಡ ಅಧ್ಯಯನ ವರದಿ ಇದಾಗಿದೆ. ಒಟ್ಟು 3,885 ವೈದ್ಯರ ಪ್ರತಿಕ್ರಿಯೆ ಪಡೆಯಲಾಗಿದೆ. ಈ ಪೈಕಿ ಶೇ 35ಕ್ಕೂ ಅಧಿಕ ಮಂದಿ ರಾತ್ರಿ ಪಾಳಿಯಲ್ಲಿ ಅಭದ್ರತೆ ಕಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇರಳದ ಐಎಂಎ ಸಂಶೋಧನಾ ಕೋಶದ ಮುಖ್ಯಸ್ಥರಾದ ಡಾ.ರಾಜೀವ್ ಜಯದೇವನ್ ನೇತೃತ್ವದಲ್ಲಿ ಅಧ್ಯಯನ ವರದಿ ಬಿಡುಗಡೆ ಮಾಡಲಾಗಿದೆ. ಐಎಂಎ ಕೇರಳ ಮೆಡಿಕಲ್ ಜರ್ನಲ್ ಅಕ್ಟೋಬರ್‌ ಸಂಚಿಕೆಯಲ್ಲಿ ಇದು ಪ್ರಕಟಗೊಳ್ಳಲಿದೆ.

22 ರಾಜ್ಯಗಳ ವೈದ್ಯರಿಂದ ಪ್ರತಿಕ್ರಿಯೆ ಪಡೆಯಲಾಗಿದೆ. ಶೇ 24.1 ಮಂದಿ 'ಅಸುರಕ್ಷಿತ' ಮತ್ತು ಶೇ 11.4 ಮಂದಿ 'ತುಂಬಾನೇ ಅಸುರಕ್ಷಿತ' ಎಂದು ಪ್ರತಿಕ್ರಿಯಿಸಿದ್ದಾರೆ. ಮೂರನೇ ಒಂದರಷ್ಟು ವೈದ್ಯರು ಅಸುರಕ್ಷಿತರಾಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮಹಿಳೆಯರಲ್ಲಿ ಅಭದ್ರತೆ ಭಾವನೆ ಪ್ರಮಾಣವು ಹೆಚ್ಚಿದೆ ಎಂದು ವರದಿ ತಿಳಿಸಿದೆ.

ರಾತ್ರಿ ಪಾಳಿಯಲ್ಲಿ 'ಡ್ಯೂಟಿ ರೂಮ್' ಸೌಲಭ್ಯ ಕೂಡ ಇರುವುದಿಲ್ಲ ಎಂದು ಶೇ 45ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಡ್ಯೂಟಿ ರೂಮ್ ಇದ್ದಲ್ಲಿ ಹೆಚ್ಚು ಸುರಕ್ಷತೆ ಇರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶೇ 53 ಮಂದಿ ವಾರ್ಡ್‌ನಿಂದ ಡ್ಯೂಟಿ ರೂಮ್ ತುಂಬಾ ದೂರ ಇರುವುದಾಗಿ ದೂರಿದ್ದಾರೆ. ಅದಕ್ಕೆ ಹೊಂದಿಕೊಂಡು ಶೌಚಾಲಯ ಸೌಲಭ್ಯ ಇರುವುದಿಲ್ಲ ಎಂದು ಸಹ ಹೇಳಿದ್ದಾರೆ.

ಕೆಲವು ವೈದ್ಯರು ಆತ್ಮರಕ್ಷಣೆಗಾಗಿ ಆಯುಧಗಳನ್ನು ಕೊಂಡೊಯ್ಯುವ ಸನ್ನಿವೇಶದ ಕುರಿತು ಪ್ರಸ್ತಾಪಿಸಿದ್ದಾರೆ. 'ತನ್ನ ಕೈಚೀಲದಲ್ಲಿ ಸದಾ ಚಾಕು ಹಾಗೂ ಪೆಪ್ಪರ್ ಸ್ಪ್ರೇ ಇರುತ್ತದೆ' ಎಂದು ವೈದ್ಯೆಯೊಬ್ಬರು ಮಾಹಿತಿ ನೀಡಿದ್ದಾರೆ.

ವೈದ್ಯರಿಗೆ ಭದ್ರತೆಯನ್ನು ಹೆಚ್ಚಿಸಲು ಭದ್ರತಾ ಸಿಬ್ಬಂದಿಗಳ ಹೆಚ್ಚಳ, ಸಿಸಿಟಿವಿ ಕ್ಯಾಮೆರಾ ಆಳವಡಿಕೆ, ಸರಿಯಾದ ಬೆಳಕಿನ ವ್ಯವಸ್ಥೆ, ಕೇಂದ್ರೀಯ ರಕ್ಷಣಾ ಕಾಯ್ದೆಯ (ಸಿಪಿಎ) ಜಾರಿ, ಅಲರಾಂ ಸ್ಥಾಪಿಸುವುದು, ಸುರಕ್ಷಿತ ಡ್ಯೂಟಿ ರೂಮ್, ಹೊರಗಿನವರ ಭೇಟಿಗೆ ನಿರ್ಬಂಧ ಮತ್ತು ಮೂಲಭೂತ ಸೌಕರ್ಯಗಳನ್ನು ಆಳವಡಿಸಲು ವರದಿಯಲ್ಲಿ ಸಲಹೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT