ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕೇಂದ್ರಗಳಲ್ಲಿ ಶೇ 96ರಷ್ಟು ಕೋವಿಡ್‌ ಲಸಿಕೆ ವಿತರಣೆ: ಕೇಂದ್ರ

Last Updated 10 ಡಿಸೆಂಬರ್ 2021, 13:59 IST
ಅಕ್ಷರ ಗಾತ್ರ

ನವದೆಹಲಿ: ಮೇ 1 ರಿಂದ ದೇಶದಲ್ಲಿ ನೀಡಲಾಗಿರುವ ಒಟ್ಟು ಕೋವಿಡ್ ಲಸಿಕೆ ಡೋಸ್‌ಗಳಲ್ಲಿ ಶೇ 96 ರಷ್ಟು (108.55 ಕೋಟಿ) ಸರ್ಕಾರಿ ಕೇಂದ್ರಗಳಲ್ಲಿ ನೀಡಲಾಗಿದ್ದು, ಶೇ 3.7 (4.12 ಕೋಟಿ) ಖಾಸಗಿಯಾಗಿ ನೀಡಲಾಗಿದೆ ಎಂದು ಸರ್ಕಾರ ಲೋಕಸಭೆಗೆ ಶುಕ್ರವಾರ ತಿಳಿಸಿದೆ.

'ಡಿಸೆಂಬರ್ 7ರವರೆಗೆ ಲಭ್ಯವಾದ ಮಾಹಿತಿ ಪ್ರಕಾರ ಒಟ್ಟಾರೆ 4.61 ಕೋಟಿ ಡೋಸ್‌ ಕೋವಿಡ್‌–19 ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ನೀಡಿವೆ ಮತ್ತು 49 ಲಕ್ಷ ಡೋಸ್‌ಗಳು ಅವುಗಳ ಬಳಿ ಉಳಿದಿವೆ' ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದರು.

ಜೂನ್ 21ರಿಂದ ಜಾರಿಗೆ ಬಂದ ರಾಷ್ಟ್ರೀಯ ಕೋವಿಡ್ ಲಸಿಕಾ ಅಭಿಯಾನದ ಬದಲಾದ ನಿಯಮಾವಳಿಗಳ ಅಡಿಯಲ್ಲಿ, ದೇಶೀಯ ಲಸಿಕೆ ತಯಾರಕರು ತಾವು ಉತ್ಪಾದಿಸಿದ ಲಸಿಕೆಯ ಶೇ 25ರಷ್ಟನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ನೀಡಬಹುದು ಮತ್ತು ಇನ್ನುಳಿದ ಶೇ 75ರಷ್ಟು ಲಸಿಕೆಯನ್ನು ಸರ್ಕಾರಕ್ಕೆ ನೀಡಲಾಗುತ್ತಿದೆ' ಎಂದು ಪವಾರ್ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ನಕಲಿ ಕೋವಿಡ್ ಲಸಿಕಾ ಕೇಂದ್ರ ಅಥವಾ ನಕಲಿ ಲಸಿಕೆಯ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಿರುವಂತೆ ನೋಡಿಕೊಳ್ಳಬೇಕು. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ' ಎಂದು ತಿಳಿಸಿದರು.

'ಇಂತಹ ಚಟುವಟಿಕೆಗಳಿಂದ ದೂರವಿರಲು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕಾ ಪೂರೈಕೆ ಸರಪಳಿಯ ಮೇಲೆ ಕಣ್ಗಾವಲನ್ನು ಹೆಚ್ಚಿಸುವಂತೆ ಮತ್ತು ಉತ್ಪನ್ನದ ಭೌತಿಕ ಸ್ಥಿತಿಯನ್ನು ಅದರ ಬಳಕೆಗೂ ಮುನ್ನವೇ ಎಚ್ಚರಿಕೆಯಿಂದ ಖಾತರಿಪಡಿಸಿಕೊಳ್ಳಲು ಸೂಚಿಸಲಾಗಿದೆ' ಎಂದು ಪವಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT