ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೈಲಿನಲ್ಲಿ ಅಮೃತ್‌ಪಾಲ್‌ ಭೇಟಿ ಮಾಡಿದ ತಂದೆ–ತಾಯಿ

Published 8 ಜೂನ್ 2024, 9:36 IST
Last Updated 8 ಜೂನ್ 2024, 9:36 IST
ಅಕ್ಷರ ಗಾತ್ರ

ದಿಬ್ರೂಗಢ(ಅಸ್ಸಾಂ): ಜೈಲಿನಲ್ಲಿರುವ ‘ವಾರಿಸ್ ಪಂಜಾಬ್ ದೆ’ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಅವರನ್ನು ಅವರ ತಂದೆ–ತಾಯಿ ಶನಿವಾರ ಭೇಟಿ ಮಾಡಿದರು. 

ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಖದೂರ್ ಸಾಹಿಬ್ ಕ್ಷೇತ್ರದಲ್ಲಿ ಅಮೃತ್‌ಪಾಲ್ ಗೆದ್ದಿದ್ದಾರೆ. ಅವರು 1,97,120 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕುಲಬೀರ್ ಸಿಂಗ್ ಝಿರಾ ಅವರನ್ನು ಪರಾಭವಗೊಳಿಸಿದ್ದಾರೆ. 

ಅಮೃತ್‌ಪಾಲ್ ಅವರ ತಂದೆ ತರಸೆಮ್ ಸಿಂಗ್ ಹಾಗೂ ತಾಯಿ ಬಲವಿಂದರ್ ಕೌರ್ ಅವರು ವಿಮಾನನಿಲ್ದಾಣಕ್ಕೆ ಶನಿವಾರ ಬಂದಿಳಿದರು. ಅಮೃತಪಾಲ್‌ ಪತ್ನಿ ಕಿರಣ್‌ದೀಪ್ ಕೌರ್ ಅವರನ್ನು ಬರಮಾಡಿಕೊಂಡರು. 

ಮಾರ್ಚ್ 23ರಿಂದ ಅಮೃತ್‌ಪಾಲ್‌ ಜೈಲಿನಲ್ಲಿ ಇದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಕಿರಣ್‌ದೀಪ್ ದಿಬ್ರೂಗಢದಲ್ಲಿ ನೆಲಸಿದ್ದಾರೆ. 

‘ನನ್ನ ಮಗ ಚುನಾವಣೆಯಲ್ಲಿ ಗೆದ್ದಿದ್ದು ಖುಷಿಯಾಗಿದೆ. ಜನರು ಅವನನ್ನು ಪ್ರೀತಿಸುತ್ತಾರೆ ಎನ್ನುವುದನ್ನು ಖುದ್ದು ಅವನಿಗೆ ಹೇಳಿ, ಅವನನ್ನೂ ಖುಷಿಪಡಿಸುವುದು ನಮ್ಮ ಭೇಟಿಯ ಉದ್ದೇಶ. ಜನರಿಗೆ ಅವನು ಏನು ಸಂದೇಶ ಕೊಡುತ್ತಾನೆ ಎಂದೂ ಕೇಳುತ್ತೇವೆ’ ಎಂದು ತರಸೆಮ್ ಸಿಂಗ್ ಜೈಲಿನ ಒಳಗೆ ಹೋಗುವ ಮುನ್ನ ಪ್ರತಿಕ್ರಿಯಿಸಿದರು. 

ಬಲವಿಂದರ್ ಕೌರ್ ಅವರು ಜೈಲಿನಲ್ಲಿದ್ದ ಕೈದಿಗಳಿಗೆ ಸಿಹಿ ಹಂಚಿದ್ದಾಗಿ ಅಧಿಕಾರಿಗಳು ತಿಳಿಸಿದರು. ಮಗನಿಗಾಗಿ ಹೊಸ ಬಟ್ಟೆ ಹಾಗೂ ಶೂಗಳನ್ನು ಅವರು ತಂದಿದ್ದರು. ‘ಪ್ರಮಾಣವಚನ ಸ್ವೀಕರಿಸಲು ಹೋಗುವಾಗ ಇವು ಅವನಿಗೆ ಬೇಕಾಗುತ್ತವೆ’ ಎಂದು ಬಲವಿಂದರ್ ಕೌರ್ ಹೇಳಿದರು. 

ಕಿರಣ್‌ದೀಪ್ ಅವರ ಜತೆಯಲ್ಲಿ ವಕೀಲ ಹಾಗೂ ಮಾಜಿ ಸಂಸದ ರಾಜದೇವ್ ಸಿಂಗ್ ಖಾಲ್ಸಾ ಅವರೂ ಇದ್ದರು. ಅಮೃತ್‌ಪಾಲ್ ಬಿಡುಗಡೆಗೆ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು. 

ಸಿಖ್ ಸಮುದಾಯದವರಿಗೆ ಅಮೃತ್‌ಪಾಲ್‌ ಅವರಲ್ಲಿ ಜನನಾಯಕ ಕಂಡಿರುವುದರಿಂದ ಹೆಚ್ಚಿನ ಮತಗಳನ್ನು ನೀಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. 

ಖಾಲಿಸ್ತಾನಿ ಪ್ರತ್ಯೇಕತಾವಾದಿ ಚಳವಳಿಯಲ್ಲಿ ತೊಡಗಿದ್ದ ಕಾರಣಕ್ಕೆ ಅಮೃತ್‌ಪಾಲ್ ಸಿಂಗ್ ಹಾಗೂ ಅವರ ಸಂಬಂಧಿ ಸೇರಿದಂತೆ ಹತ್ತು ಜನರು ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT