ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ನ ವಿಶೇಷ ಅಧಿವೇಶನ: ಮಹಿಳಾ ಮೀಸಲಾತಿ ಮಸೂದೆ ಮಂಡನೆ ಸಾಧ್ಯತೆ

Published 1 ಸೆಪ್ಟೆಂಬರ್ 2023, 16:19 IST
Last Updated 1 ಸೆಪ್ಟೆಂಬರ್ 2023, 16:19 IST
ಅಕ್ಷರ ಗಾತ್ರ

ನವದೆಹಲಿ: ಇದೇ 18ರಿಂದ ಐದು ದಿನಗಳ ಕಾಲ ನಡೆಯಲಿರುವ ಸಂಸತ್‌ನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ.

‘ಒಂದು ದೇಶ– ಒಂದು ಚುನಾವಣೆ’ ಅನುಷ್ಠಾನಕ್ಕೆ ಸಂಬಂಧಿಸಿದ ಸಮಾಲೋಚನೆಯು ಸಮಯ ತೆಗೆದುಕೊಳ್ಳುವ ಕಾರಣ, ಇತರ ಕೆಲ ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆಯುವ ಆಯ್ಕೆಗಳನ್ನು ಕೇಂದ್ರ ಮುಕ್ತವಾಗಿರಿಸಿಕೊಂಡಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವ ಬಗ್ಗೆ ರಾಜಕೀಯ ತೀರ್ಮಾನ ತೆಗೆದುಕೊಂಡಿದ್ದೇ ಆದಲ್ಲಿ, 2010ರಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿದ್ದ ಮಸೂದೆಯನ್ನು ಮೋದಿ ಸರ್ಕಾರ ಹಿಂಪಡೆಯಬಹುದು’ ಎಂದು ಹೇಳಿವೆ.

2010ರ ಮಾರ್ಚ್‌ನಲ್ಲಿ ಈ ಮಸೂದೆಗೆ, ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ರಾಜ್ಯಸಭೆಯಲ್ಲಿ ಅಂಗೀಕರಿಸಿತ್ತು. ಆದರೆ, 15ನೇ ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾದರೂ, ಸಮಾಜವಾದಿ ಪಾರ್ಟಿ, ಆರ್‌ಜೆಡಿಯಿಂದ ಭಾರಿ ವಿರೋಧ ವ್ಯಕ್ತವಾದ ಕಾರಣ ಅಂಗೀಕಾರವಾಗಿರಲಿಲ್ಲ.

ಈಗ, ಮತ್ತೊಮ್ಮೆ ಈ ಮಸೂದೆಯನ್ನು ಮಂಡಿಸುವ ಮೂಲಕ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ವಿರೋಧ ಪಕ್ಷಗಳ ಪಾಳೆಯದಲ್ಲಿರುವ ಭಿನ್ನಮತವನ್ನು ಬಹಿರಂಗಗೊಳಿಸುವ ಉದ್ದೇಶವನ್ನು ಮೋದಿ ಸರ್ಕಾರ ಹೊಂದಿದೆ.

ಈ ಹಿಂದೆ ಕಾಂಗ್ರೆಸ್‌ ಈ ಮಸೂದೆಯನ್ನು ಬೆಂಬಲಿಸಿತ್ತು. ಈಗ, ಮತ್ತೆ ಬೆಂಬಲಿಸಿದಲ್ಲಿ ಕಾಂಗ್ರೆಸ್‌ ತನ್ನ ಮಿತ್ರ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ವಿಧಾನಸಭೆಗಳು ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಒದಗಿಸುವ ಉದ್ದೇಶದ ಈ ಮಸೂದೆಯನ್ನು ಮೊದಲ ಬಾರಿಗೆ 1996ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT