ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಹಳೆ: ಪ್ರತಿ ಬೂತ್‌ನಲ್ಲಿ ಹೆಚ್ಚುವರಿಯಾಗಿ 370 ಮತಗಳನ್ನು ತನ್ನಿ- ಮೋದಿ

Published 17 ಫೆಬ್ರುವರಿ 2024, 15:58 IST
Last Updated 17 ಫೆಬ್ರುವರಿ 2024, 15:58 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಬೂತ್‌ನಲ್ಲಿ 2019ಕ್ಕಿಂತ ಹೆಚ್ಚುವರಿಯಾಗಿ 370 ಮತಗಳನ್ನು ತರಲು ಪಕ್ಷದ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದರು. 543 ಲೋಕಸಭಾ ಕ್ಷೇತ್ರಗಳಲ್ಲಿ ಕಮಲ ಚಿಹ್ನೆಯೇ ಪಕ್ಷದ ಅಭ್ಯರ್ಥಿ ಎಂದು ಅವರು ಪ್ರತಿಪಾದಿಸಿದರು. 

ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಲುವಾಗಿ ಶನಿವಾರ ಇಲ್ಲಿ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 37 ಮತಗಳನ್ನು (303 ಕ್ಷೇತ್ರಗಳಲ್ಲಿ ಗೆಲುವು) ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಸಲ ಮತ ಗಳಿಕೆ ಪ್ರಮಾಣವನ್ನು ಶೇ 45ಕ್ಕೆ ಹೆಚ್ಚಿಸುವ ಗುರಿಯನ್ನು ಪಕ್ಷ ಇಟ್ಟುಕೊಂಡಿದೆ. 

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿರಲಿಲ್ಲ. ಕಮಲದ ಹೆಸರಿನಲ್ಲಿ ಪಕ್ಷ ಚುನಾವಣೆ ಎದುರಿಸಲಿದೆ ಎಂದು ಮೋದಿ ಅವರು ಚುನಾವಣಾ ರ‍್ಯಾಲಿಗಳಲ್ಲಿ ಹೇಳಿದ್ದರು. ಮೂರೂ ರಾಜ್ಯಗಳಲ್ಲಿ ಪಕ್ಷ ಭರ್ಜರಿ ಜಯ ಗಳಿಸಿತ್ತು. ಲೋಕಸಭಾ ಚುನಾವಣೆಯಲ್ಲೂ ಇದೇ ತಂತ್ರ ಅನುಸರಿಸಲು ಬಿಜೆಪಿ ಮುಂದಾಗಿದೆ.  

ಲೋಕಸಭಾ ಚುನಾವಣೆಯನ್ನು ಮೋದಿ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಎದುರಿಸಲು ಪಕ್ಷ ಸಜ್ಜಾಗಿದೆ. ‘ವಿಕಸಿತ ಭಾರತ, ಮೋದಿ ಗ್ಯಾರಂಟಿ, ಮತ್ತೊಮ್ಮೆ ಮೋದಿ ಸರ್ಕಾರ’ ಎಂಬ ಘೋಷಣೆ ಹೊರಡಿಸಲು ನಿರ್ಣಯವನ್ನು ಕೈಗೊಳ್ಳಲಾಗುತ್ತದೆ. ಪ್ರಧಾನಿ ಅವರ ಭಾಷಣದ ಕುರಿತು ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವಡೆ ಸುದ್ದಿಗಾರರಿಗೆ ವಿವರ ನೀಡಿದರು.

ಸಮಾವೇಶದಲ್ಲಿ 11,500 ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಮುಂಬರುವ ಚುನಾವಣೆಯಲ್ಲಿ 370 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾರ್ಯಕರ್ತರು ಪಕ್ಷದ ಸಂಸ್ಥಾಪಕ ಶ್ಯಾಮಪ್ರಸಾದ್‌ ಮುಖರ್ಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು. ಜತೆಗೆ, ಸರ್ಕಾರದ ಅಭಿವೃದ್ಧಿ ಹಾಗೂ ಬಡವರ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿಯನ್ನು ಮತದಾರರಿಗೆ ತಲುಪಿಸಬೇಕು’ ಎಂದು ಕರೆ ನೀಡಿದರು. 

‘ಫೆಬ್ರುವರಿ 25ರಿಂದ ಮಾರ್ಚ್‌ 5ರ ನಡುವೆ ಫಲಾನುಭವಿಗಳ ಸಂಪರ್ಕ ಅಭಿಯಾನ ನಡೆಸಲಾಗುತ್ತದೆ. ಮುಂದಿನ 100 ದಿನಗಳು ನಿರ್ಣಾಯಕ. ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಮಹಿಳಾ ಮತದಾರರನ್ನು ಮರೆಯಬಾರದು. 2014ಕ್ಕಿಂತ ಮೊದಲು ಭಾರತ ಹೇಗಿತ್ತು ಹಾಗೂ ಈಗ ಹೇಗೆ ಅಭಿವೃದ್ಧಿಯಾಗಿದೆ ಎಂಬುದನ್ನು ಮೊದಲ ಬಾರಿಯ ಮತದಾರರಿಗೆ ಕಾರ್ಯಕರ್ತರು ಮನದಟ್ಟು ಮಾಡಬೇಕು’ ಎಂದೂ ಮೋದಿ ಹೇಳಿದರು. 

‘ಪ್ಯಾನ್‌ ಇಂಡಿಯಾ ಪಕ್ಷ’

ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿ, ‘ಪಕ್ಷವು 370 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು. ಎನ್‌ಡಿಎ 400 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಈ ಗುರಿ ತಲುಪಲು ಕಾರ್ಯಕರ್ತರು ಶ್ರಮ ಹಾಕಬೇಕು’ ಎಂದು ಕರೆ ನೀಡಿದರು. 

‘2014ರಲ್ಲಿ ಮೋದಿ ಅಧಿಕಾರಕ್ಕೆ ಬರುವ ಮುನ್ನ ಪಕ್ಷವು 5 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಈಗ 12 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಎನ್‌ಡಿಎ ಮೈತ್ರಿಕೂಟದ ಸರ್ಕಾರವು 17 ರಾಜ್ಯಗಳಲ್ಲಿದೆ. ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಉತ್ತಮ ಸಾಧನೆ ಮಾಡಿದೆ. ತೆಲಂಗಾಣದಲ್ಲಿ ಮತ ಪ್ರಮಾಣ ದ್ವಿಗುಣವಾಗಿದೆ. ಕಮಲ ಎಲ್ಲ ಕಡೆಗಳಲ್ಲಿದೆ. ನಮ್ಮದು ಪ್ಯಾನ್‌ ಇಂಡಿಯಾ ಪಕ್ಷ’ ಎಂದು ಅವರು ಹೇಳಿದರು. 

ದಕ್ಷಿಣದ ರಾಜ್ಯಗಳಲ್ಲಿ ಪಕ್ಷ ಹೆಚ್ಚಿನ ಅಸ್ತಿತ್ವ ಹೊಂದಿಲ್ಲ ಎಂಬ ವಾದವನ್ನು ತಳ್ಳಿ ಹಾಕಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿತ್ತು ಎಂದು ವಿವರಿಸಿದರು

ಗಾಂವ್ ಚಲೋ ಅಭಿಯಾನ

‘ಪಕ್ಷದ ಕಾರ್ಯಕರ್ತರು 'ಗಾಂವ್ ಚಲೋ ಅಭಿಯಾನ'ದ ಮೂಲಕ ಸರಿಸುಮಾರು 7.5 ಲಕ್ಷ ಹಳ್ಳಿಗಳನ್ನು ಮತ್ತು 8.5 ಲಕ್ಷ ಬೂತ್‌ಗಳನ್ನು ಯಶಸ್ವಿಯಾಗಿ ತಲುಪಿದ್ದಾರೆ. 2019ರ ಸಾಧನೆಯ ಆಧಾರದಲ್ಲಿ 161 ಕ್ಷೇತ್ರಗಳನ್ನು ದುರ್ಬಲ ಕ್ಷೇತ್ರಗಳೆಂದು ಪಕ್ಷ ಗುರುತಿಸಿತ್ತು. ಈ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿತ್ತು. ಒಂದೂವರೆ ವರ್ಷಗಳಲ್ಲಿ 430 ಲೋಕಸಭಾ ಪ್ರವಾಸ ಕಾರ್ಯಕ್ರಮಗಳು ನಡೆದಿವೆ. ಇದರ ಅರ್ಥ ಪ್ರತಿ ಕ್ಷೇತ್ರಕ್ಕೆ ಸಂಸದರು ಕನಿಷ್ಠ ಮೂರು ಭೇಟಿ ನೀಡಿದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವಡೆ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT