ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವಿವಿಧ ಪಕ್ಷಗಳ ದುಂಬಾಲು: ಪ್ರಕಾಶ್‌ ರಾಜ್‌

Published 14 ಜನವರಿ 2024, 13:48 IST
Last Updated 14 ಜನವರಿ 2024, 13:48 IST
ಅಕ್ಷರ ಗಾತ್ರ

ಕೋಯಿಕ್ಕೋಡ್‌(ಕೇರಳ): ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ತಮಗೆ ಮೂರುಪಕ್ಷಗಳು ಬೆನ್ನುಬಿದ್ದಿವೆ’ ಎಂದು ಬಹುಭಾಷಾ ನಟ ಪ್ರಕಾಶ್‌ ರಾಜ್‌ ತಿಳಿಸಿದ್ದಾರೆ. 

ಇಲ್ಲಿ ಶನಿವಾರ ಕೇರಳ ಸಾಹಿತ್ಯೋತ್ಸವದಲ್ಲಿ (ಕೆಎಲ್‌ಎಫ್‌) ‘ತಾರಾ ಶಕ್ತಿ ಮತ್ತು ರಾಜಕೀಯ ನಾಯಕ: ಸಾರ್ವಜನಿಕ ವ್ಯಕ್ತಿ ಮತ್ತು ಚುನಾವಣಾ ರಾಜಕೀಯ’ ವಿಷಯ ಕುರಿತ ಅಧಿವೇಶನದಲ್ಲಿ ಮಾತನಾಡಿದ ಅವರು ‘ಮೂರು ಪಕ್ಷಗಳು ನನ್ನ ಸಿದ್ಧಾಂತ ನೋಡಿ ಬೆನ್ನುಬಿದ್ದಿಲ್ಲ, ನಾನು ಮೋದಿ ಟೀಕಾಕಾರ ಎನ್ನುವ ಕಾರಣಕ್ಕೆ ಮಾತ್ರ ನನ್ನನ್ನು ಅಭ್ಯರ್ಥಿಯಾಗಿಸಲು ಬಯಸಿವೆ. ಆದರೆ, ನಾನು ಅವರ ಬಲೆಯಲ್ಲಿ ಬೀಳುವುದಿಲ್ಲ’ ಎಂದು ಹೇಳಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟರಾದ ಪ್ರಕಾಶ್‌ ರಾಜ್‌, 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

‘ಈಗ ಚುನಾವಣೆ ಬರುತ್ತಿದೆ. ಮೂರು ರಾಜಕೀಯ ಪಕ್ಷಗಳು ನನ್ನ ಬೆನ್ನುಬಿದ್ದಿವೆ. ನನ್ನ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದೇನೆ. ಅವರ‍್ಯಾರು ಜನರಿಗಾಗಿ, ನನ್ನ ಸಿದ್ಧಾಂತ ನೋಡಿ ನನ್ನನ್ನು ಹುಡುಕಿ ಬರುತ್ತಿಲ್ಲ. ನಾನೊಬ್ಬ ಮೋದಿಯವರ ಕಟು ಟೀಕಾಕಾರ ಎನ್ನುವ ಕಾರಣಕ್ಕೆ ಒಳ್ಳೆಯ ಅಭ್ಯರ್ಥಿ ಎನ್ನುವ ಮಾತನ್ನು ಅವರು ಹೇಳುತ್ತಾರೆ’ ಎಂದು ಪ್ರಕಾಶ್‌ ರಾಜ್‌ ಹೇಳಿದರು.

‘ರಾಜಕೀಯ ಪಕ್ಷಗಳು ಇಂದು ತಮ್ಮ ಧ್ವನಿಯನ್ನು ಕಳೆದುಕೊಂಡಿವೆ. ಅವು ಸತ್ಯದಿಂದ ವಿಮುಖವಾಗಿವೆ. ಇದೇ ಕಾರಣದಿಂದಾಗಿ ಹಲವು ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಹರಸಾಹಸಪಡುತ್ತಿವೆ’ ಎಂದು ಹೇಳಿದರು.

‘ಈ ದೇಶದಲ್ಲಿ ಅಭ್ಯರ್ಥಿಗಳೇ ಇಲ್ಲ. ಒಂದು ಕ್ಷೇತ್ರದ ಪ್ರತಿನಿಧಿಯನ್ನು ಹುಡುಕಲು ರಾಜಕೀಯ ಪಕ್ಷಗಳು ಹೆಣಗಾಡುತ್ತಿವೆ. ನಾವು ಎಷ್ಟೊಂದು ಬಡವರು ಅಲ್ಲವೇ’ ಎಂಬ ಪ್ರಶ್ನೆಯನ್ನು ಪ್ರಕಾಶ್‌ ರಾಜ್‌, ಸಭಾಂಗಣದಲ್ಲಿ ಕಿಕ್ಕಿರಿದಿದ್ದ ಸಭಿಕರ ಮುಂದಿಟ್ಟರು.

ಪ್ರಧಾನಿ ನರೇಂದ್ರ ಮೋದಿಯವರನ್ನೇಕೆ ದ್ವೇಷಿಸುತ್ತೀರಿ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಪ್ರಕಾಶ್‌ ರಾಜ್‌, ‘ನಾನು ಮೋದಿಯನ್ನು ದ್ವೇಷಿಸುವುದಿಲ್ಲ. ಅವರು ನನ್ನ ಮಾವನಾ ಅಥವಾ ಅವರೊಂದಿಗೆ ನನಗೆ ಯಾವುದಾದರೂ ಆಸ್ತಿ ವ್ಯಾಜ್ಯ ಇದೆಯಾ? ನಾನು ತೆರಿಗೆದಾರ ಎಂದು ಅವರಿಗೆ ಹೇಳುತ್ತಿದ್ದೇನೆ. ನಾನು ನಿಮ್ಮ ವೇತನ ಪಾವತಿಸಿದ್ದೇನೆ ಮತ್ತು ನೀವು ನನ್ನನ್ನು ಸೇವಕನಂತೆ ನಡೆಸಿಕೊಳ್ಳುತ್ತಿದ್ದೀರಿ. ನೀವು ನಿಮ್ಮ ಕೆಲಸ ಮಾಡುತ್ತಿಲ್ಲ, ನಿಮ್ಮ ಕೆಲಸ ಸರಿಯಾಗಿ ಮಾಡಿ ಎಂದಷ್ಟೇ ಹೇಳುತ್ತಿದ್ದೀನಿ’ ಎಂದು ರಾಜ್‌ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT