ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರವನ್ನು ಕಿತ್ತೊಗೆದಾಗಲೇ ಜನರಿಗೆ ಸಂತಸವಾಗುವುದು: ಅಖಿಲೇಶ್ ಯಾದವ್

Published 16 ಡಿಸೆಂಬರ್ 2023, 3:00 IST
Last Updated 16 ಡಿಸೆಂಬರ್ 2023, 3:00 IST
ಅಕ್ಷರ ಗಾತ್ರ

ಕನೌಜ್‌ (ಉತ್ತರ ಪ್ರದೇಶ): ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದಾಗ ಮಾತ್ರವೇ ಜನರಿಗೆ ಸಂತಸವಾಗುತ್ತದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಪಂಚ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದ ಒಗ್ಗಟ್ಟು ಬಲಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ರಾಜಸ್ಥಾನ, ಛತ್ತೀಸಗಢ, ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಿದೆ. ಇನ್ನೊಂದು ರಾಜ್ಯ ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷ ಝೋರಂ ಪೀಪಲ್ಸ್ ಮೂವ್‌ಮೆಂಟ್‌ (ಝೆಡ್‌ಪಿಎಂ) ಬಹುಮತ ಪಡೆದು ಸರ್ಕಾರ ರಚಿಸಿದೆ.

ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಖಿಲೇಶ್‌, ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಪ್ರಸ್ತಾಪಿಸಿದ್ದಾರೆ.

'ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಂದಾಗುವಂತೆ ಎಲ್ಲ ಪಕ್ಷಗಳನ್ನು ಕೇಳುತ್ತೇನೆ. ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿಯೂ ಬಿಜೆಪಿಯನ್ನು ಸೋಲಿಸಲು ಪ್ರಯತ್ನಿಸಲಾಗುವುದು. ಬಿಜೆಪಿಯನ್ನು ಅಧಿಕಾರದಿಂದ ಕಿತ್ತು ಹಾಕಿದಾಗಲೇ ಜನರು ಸಂತಸಗೊಳ್ಳುವುದು' ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಟೀಕೆ
ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗಾಗಿ ಜಾರಿಗೆ ತಂದ 'ಲಾಡ್ಲಿ ಯೋಜನೆ' ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೇರಲು ಬಿಜೆಪಿಗೆ ನೆರವಾಯಿತು. ಆದರೆ, ಆ ಪಕ್ಷ ಚೌಹಾಣ್‌ ಅವರನ್ನೇ ಮೂಲೆಗುಂಪು ಮಾಡಿತು ಎಂದು ಯಾದವ್‌ ಟೀಕಿಸಿದ್ದಾರೆ.

ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಬಿಜೆಪಿ ನೀಡಿರುವ ಆಶ್ವಾಸನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್‌ಪಿ ನಾಯಕ, 'ಬಿಜೆಪಿಯ ದೋಷಪೂರಿತ ಯೋಜನೆಗಳಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ' ಎಂದು ಆರೋಪಿಸಿದ್ದಾರೆ.

'ಬೆಳೆಗಾಗಿ ಮಾಡಿರುವ ವೆಚ್ಚವೇ ರೈತರಿಗೆ ವಾಪಸ್‌ ಆಗುತ್ತಿಲ್ಲ. ಇದು, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ಬಗ್ಗೆ ಬಿಜೆಪಿಗೆ ಬದ್ಧತೆ ಇಲ್ಲ ಎಂಬುದನ್ನು ಸಾಬೀತುಮಾಡಿದೆ. ಸರ್ಕಾರ ರೈತರನ್ನು ವಂಚಿಸಿದೆ' ಎಂದೂ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT