ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟ್ರಂಪ್‌ ಪರ ಮೋದಿ ಪ್ರಚಾರ’ಕ್ಕೆ ಆಕ್ಷೇಪ

ಭಾರತದ ದೀರ್ಘ ಕಾಲದ ವಿದೇಶಾಂಗ ನೀತಿಗೆ ಅಪಚಾರ: ಕಾಂಗ್ರೆಸ್ ಆರೋಪ
Last Updated 23 ಸೆಪ್ಟೆಂಬರ್ 2019, 19:33 IST
ಅಕ್ಷರ ಗಾತ್ರ

ನವದೆಹಲಿ: ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು ಅನುಸರಿಸಿಕೊಂಡು ಬಂದಿರುವ ವಿದೇಶಾಂಗ ನೀತಿಯನ್ನು ಉಲ್ಲಂಘಿಸಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ಇನ್ನೊಂದು ರಾಷ್ಟ್ರದ ಆಂತರಿಕ ಚುನಾವಣೆಯಲ್ಲಿ ಮಧ್ಯಪ್ರವೇಶಿಸದಿರುವುದು ಭಾರತವು ಅನುಸರಿಸಿಕೊಂಡು ಬಂದಿರುವ ನೀತಿ. ಹ್ಯೂಸ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪರ ಪ್ರಚಾರ ನಡೆಸುವ ಮೂಲಕ ಭಾರತವು ದೀರ್ಘಕಾಲದಿಂದ ಅನುಸರಿಸಿಕೊಂಡು ಬಂದಿರುವ ವಿದೇಶಾಂಗ ನೀತಿಗೆ ಅಪಚಾರ ಮಾಡಿದ್ದಾರೆ. ಅಮೆರಿಕದ ಸೆನೆಟರ್‌ಗಳು ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಬಗ್ಗೆ ಏನು ಹೇಳಿದ್ದಾರೆ ಎಂಬುದರ ಬಗ್ಗೆ ಮೋದಿ ಗಮನ ಹರಿಸಬೇಕಿತ್ತು’ ಎಂದು ಕಾಂಗ್ರೆಸ್‌ ಹೇಳಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ವಕ್ತಾರ ಆನಂದ್‌ ಶರ್ಮಾ, ‘ನಾವು ಅಮೆರಿಕದ ಜೊತೆಗೆ ದ್ವಿಪಕ್ಷೀಯ ಕಾರ್ಯತಂತ್ರ ಸಹಭಾಗಿತ್ವ ಹೊಂದಿದ್ದೇವೆ. ಹೀಗಿರುವಾಗ ಅಲ್ಲಿನ ಒಂದು ಪಕ್ಷದ ಪರವಾಗಿ ನಿಲುವು ತಳೆಯುವುದನ್ನು ಮತ್ತು ಕಾರ್ಯಕ್ರಮದಲ್ಲಿ ‘ಅಬ್‌ಕಿ ಬಾರ್‌ ಟ್ರಂಪ್‌ ಸರ್ಕಾರ್‌’ ಘೋಷಣೆ ಮೊಳಗುವುದನ್ನು ತಪ್ಪಿಸಬಹುದಾಗಿತ್ತು. ಅಮೆರಿಕದಲ್ಲಿ ಯಾವುದೇ ಪಕ್ಷದ ಸರ್ಕಾರ ಇದ್ದರೂ ಭಾರತ ಆ ದೇಶದ ಜೊತೆಗೆ ಒಂದೇ ರೀತಿಯ ಬಾಂಧವ್ಯ ಇಟ್ಟುಕೊಂಡಿತ್ತು. ನಾವು ದೀರ್ಘಕಾಲದಿಂದ ಪಾಲಿಸಿಕೊಂಡು ಬಂದ ಈ ಸಂಪ್ರದಾಯವನ್ನು ಮೋದಿ ಗೌರವಿಸಬೇಕಾಗಿತ್ತು’ ಎಂದಿದ್ದಾರೆ.

‘ಮೋದಿ ಅವರು ಭಾರತದ ಪ್ರಧಾನಿಯಾಗಿ ಅಮೆರಿಕದಲ್ಲಿ ಇದ್ದಾರೆಯೇ ಹೊರತು ಅಲ್ಲಿನ ಚುನಾವಣೆಯ ಸ್ಟಾರ್‌ ಪ್ರಚಾರಕರಾಗಿ ಅಲ್ಲ. ಮೋದಿಯವರೇ ನೀವು ಅಮೆರಿಕದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಾರತದ ನೀತಿಯನ್ನು ಉಲ್ಲಂಘಿಸಿದ್ದೀರಿ’ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ.

‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’ ಎಂದು ಮೋದಿ ಅವರು ನೀಡಿದ್ದ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ, ‘ನಿರುದ್ಯೋಗ ಹೆಚ್ಚಳ, ಉದ್ಯೋಗಗಳು ಕಡಿತಗೊಳ್ಳುವುದು, ಕಡಿಮೆ ವೇತನ, ಗುಂಪು ಹಲ್ಲೆ, ಕಾಶ್ಮೀರದಲ್ಲಿ ಬಂದ್‌, ವಿರೋಧಪಕ್ಷಗಳ ನಾಯಕರನ್ನು ಜೈಲಿಗಟ್ಟುವ ಪ್ರಕರಣಗಳನ್ನು ಬಿಟ್ಟರೆ ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.

‘ಮೋದಿ ಅವರು ಅಮೆರಿಕದಲ್ಲಿ ನೆಹರೂ ಅವರನ್ನು ಸ್ಮರಿಸಬೇಕಿತ್ತು’ ಎಂದಿರುವ ಜೈರಾಮ್‌ ರಮೇಶ್‌, ‘ಎಲ್‌.ಕೆ. ಅಡ್ವಾಣಿ ಹಾಗೂ ವಾಜಪೇಯಿ ಅವರು ಅಮೆರಿಕದಲ್ಲಿ ನೆಹರೂ ಅವರನ್ನು ಸ್ಮರಿಸಿಕೊಂಡು ಮಾತನಾಡಿದ್ದನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ಆ ದಿನಗಳು ಎಲ್ಲಿಹೋದವೋ...’ ಎಂದು ಟ್ವೀಟ್‌ ಮಾಡಿದ್ದಾರೆ.

ದೊಡ್ಡ ಯೋಚನೆ, ದೂರದೃಷ್ಟಿ: ‘ಹೌಡಿ ಮೋದಿ’ ಕಾರ್ಯಕ್ರಮವು ದೊಡ್ಡ ಚಿಂತನೆ ಹಾಗೂ ದೂರದೃಷ್ಟಿಯ ಬೃಹತ್‌ ಪ್ರದರ್ಶನವಾಗಿದೆ. ಇದು ಭಾರತ–ಅಮೆರಿಕ ನಡುವಿನ ಬಾಂಧವ್ಯಕ್ಕೆ ಇನ್ನಷ್ಟು ಉತ್ತೇಜನ ನೀಡಲಿದೆ’ ಎಂದು ಅಮೆರಿಕದ ಹಿರಿಯ ರಾಜತಾಂತ್ರಿಕ ಅಲೀಸ್‌ ಜಿ. ವೆಲ್ಸ್‌ ವಿಶ್ಲೇಷಿಸಿದ್ದಾರೆ.

‘ಟ್ರಂಪ್‌ ಹಾಗೂ ಮೋದಿ ಅವರು ಭಾರತ– ಅಮೆರಿಕ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಏರಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ತೋರಿಸಿಕೊಟ್ಟಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರ ಶಕ್ತಿಯು ಸಾಟಿ ಇಲ್ಲದ್ದು. ಇಲ್ಲಿ ಎದ್ದಿರುವ ಧ್ವನಿಯು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯವರೆಗೂ ಕೇಳಿಸುತ್ತಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಹೌಡಿ ಮೋದಿ ಕಾರ್ಯಕ್ರಮದ ಬಗ್ಗೆ ಅಮೆರಿಕದ ಇನ್ನೂ ಅನೇಕ ಜನಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನನಗೆ ಆಹ್ವಾನ ಇದೆಯೇ?

‘ಮಾನ್ಯ ಪ್ರಧಾನಿಯವರೇ... ನನಗೆ ಆಹ್ವಾನ ಇದೆಯೇ...?’

ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರು ಮೋದಿ ಅವರಿಗೆ ಈ ಪ್ರಶ್ನೆ ಕೇಳುವ ಮೂಲಕ ಭಾರತಕ್ಕೆ ಬರಲು ಉತ್ಸುಕ ಎಂಬ ಸಂದೇಶವನ್ನು ನೀಡಿದರು.

ಮುಂದಿನ ತಿಂಗಳಲ್ಲಿ ಮುಂಬೈಯಲ್ಲಿ ಅಮೆರಿಕದ ಎನ್‌ಬಿಎ ಬ್ಯಾಸ್ಕೆಟ್‌ಬಾಲ್‌ ಟೂರ್ನಿ ನಡೆಯಲಿದೆ. ತಮ್ಮ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿದ ಟ್ರಂಪ್‌, ‘ಶೀಘ್ರದಲ್ಲೇ ಅಮೆರಿಕದ ಇನ್ನೊಂದು ಅತ್ಯುತ್ತಮ ಉತ್ಪನ್ನವಾದ ‘ಎನ್‌ಬಿಎ–ಬ್ಯಾಸ್ಕೆಟ್‌ಬಾಲ್‌’ ಭಾರತಕ್ಕೆ ರಫ್ತಾಗಲಿದೆ. ಸಾವಿರಾರು ಜನರು ಅದನ್ನು ವೀಕ್ಷಿಸಲಿದ್ದಾರೆ. ಜಾಗ್ರತೆಯಿಂದಿರಿ, ನಾನೂ ಬರಬಹುದು... ನನಗೂ ಆಹ್ವಾನವಿದೆಯೇ ಪ್ರಧಾನಿಯವರೇ’ ಎಂದು ಪ್ರಶ್ನಿಸಿದರು. ಮೋದಿ ಅವರು ಇದಕ್ಕೆ ನಗುವಿನ ಪ್ರತಿಕ್ರಿಯೆ ನೀಡಿದರು.

ಕ್ಷಮೆ ಯಾಚಿಸಿದ ಮೋದಿ

‘ಹೌಡಿ ಮೋದಿ’ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಅವರು ವಿಡಿಯೊ ಸಂದೇಶವೊಂದರ ಮೂಲಕ ಅಮೆರಿಕದ ಸೆನೆಟರ್‌ ಜಾನ್‌ ಕ್ರಾನಿಯೆ (69) ಅವರ ಪತ್ನಿ ಸ್ಯಾಂಡಿಯ ಕ್ಷಮೆ ಯಾಚಿಸಿದ್ದಾರೆ.

ಕಾರ್ಯಕ್ರಮ ನಡೆದ ದಿನ ಸ್ಯಾಂಡಿ ಅವರ ಜನ್ಮದಿನವಾಗಿತ್ತು. ಅವರ ಪತಿ ಅನಿವಾರ್ಯವಾಗಿ ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು. ಆದ್ದರಿಂದ ಹುಟ್ಟುಹಬ್ಬದ ದಿನ ಸ್ಯಾಂಡಿಯ ಜೊತೆ ಅವರ ಪತಿ ಇರಲಿಲ್ಲ. ಅದಕ್ಕಾಗಿ ಮೋದಿ ಕ್ಷಮೆ ಯಾಚಿಸಿದ್ದರು.

‘ಇಂದು ನಿಮ್ಮ ಜನ್ಮದಿನವಾಗಿತ್ತು. ಇಂಥ ಸಂದರ್ಭದಲ್ಲಿ ನಿಮ್ಮ ಜೊತೆಗೆ ಇರಬೇಕಾಗಿದ್ದ ನಿಮ್ಮ ಬಾಳ ಸಂಗಾತಿಯನ್ನು ದೂರ ಮಾಡಿದ್ದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ನಿಮಗೆ ನನ್ನ ಬಗ್ಗೆ ಇಂದು ಅಸೂಯೆ ಆಗಿರಬಹುದು. ಜನ್ಮದಿನದ ಶುಭಾಶಯಗಳು’ ಎಂದು ಮೋದಿ ಅವರು ಟ್ವೀಟ್‌ ಮಾಡಿರುವ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT