ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ–20 | ಕಾಶ್ಮೀರ, ಅರುಣಾಚಲ ಪ್ರದೇಶದಲ್ಲಿ ಸಭೆ ಸಹಜ ಪ್ರಕ್ರಿಯೆ: ಪ್ರಧಾನಿ ಮೋದಿ

ಪಾಕ್‌, ಚೀನಾ ಆಕ್ಷೇಪಗಳನ್ನು ತಳ್ಳಿಹಾಕಿದ ಮೋದಿ
Published 4 ಸೆಪ್ಟೆಂಬರ್ 2023, 0:30 IST
Last Updated 4 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ನವದೆಹಲಿ: ಅರುಣಾಲಪ್ರದೇಶ, ಜಮ್ಮು–ಕಾಶ್ಮೀರದಲ್ಲಿ ಜಿ–20ಗೆ ಸಂಬಂಧಿಸಿದ ಸಭೆಗಳನ್ನು ಆಯೋಜಿಸಿದ ಭಾರತದ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

‘ತನ್ನ ಭಾಗವಾಗಿರುವ ಪ್ರತಿಯೊಂದು ಪ್ರದೇಶದಲ್ಲಿ ಭಾರತವು ಜಿ–20 ಸಭೆಗಳನ್ನು ನಡೆಸುವುದು ಸಹಜ’ ಎಂದೂ ಹೇಳಿದ್ದಾರೆ.

ಭಾರತವು ಅಧ್ಯಕ್ಷ ಸ್ಥಾನದಲ್ಲಿರುವ ಜಿ–20 ಸಂಘಟನೆಯ ಶೃಂಗಸಭೆಯು ಸೆ. 9 ಹಾಗೂ 10ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಲೋಕ ಕಲ್ಯಾಣ ಮಾರ್ಗದಲ್ಲಿನ ತಮ್ಮ ನಿವಾಸದಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ಮೋದಿ ಅವರು ಸಂದರ್ಶನ ನೀಡಿದ್ದಾರೆ.

ಜಿ–20 ಅಧ್ಯಕ್ಷ ಸ್ಥಾನದ ಮಹತ್ವ ಸೇರಿದಂತೆ ಹಲವಾರು ಪ್ರಚಲಿತ ವಿದ್ಯಮಾನಗಳ ಕುರಿತು ಈ ಸಂದರ್ಭದಲ್ಲಿ ಮಾತನಾಡಿದ್ದಾರೆ.

‘ಪಾಕಿಸ್ತಾನ, ಚೀನಾದ ಆಕ್ಷೇಪದ ಹೊರತಾಗಿಯೂ ಜಮ್ಮು–ಕಾಶ್ಮೀರ, ಅರುಣಾಚಲ ಪ್ರದೇಶದಲ್ಲಿ ಜಿ–20 ಸಭೆಗಳನ್ನು ನಡೆಸಲಾಯಿತು. ಇದರಿಂದ, ಸಭೆಯಲ್ಲಿ ಪಾಲ್ಗೊಂಡಿದ್ದ ವಿಶ್ವ ನಾಯಕರಿಗೆ ಯಾವ ಸಂದೇಶವನ್ನು ನಾವು ರವಾನಿಸಿದಂತಾಗಿದೆ’ ಎಂಬ ಪಿಟಿಐ ಪ್ರಧಾನ ಸಂಪಾದಕ ವಿಜಯ ಜೋಶಿ ಅವರ ಪ್ರಶ್ನೆಗೆ ಮೋದಿ ಮೇಲಿನಂತೆ ಉತ್ತರ ನೀಡಿದ್ದಾರೆ.

‘ನೀವು ಇಂತಹ ಪ್ರಶ್ನೆ ಕೇಳಿದ್ದು ನನಗೆ ಅಚ್ಚರಿ ಮೂಡಿಸಿದೆ. ನೀವು ಪ್ರಸ್ತಾಪಿಸಿದ ಸ್ಥಳಗಳಲ್ಲಿ ನಾವು ಸಭೆಗಳನ್ನು ನಡೆಸಿರದಿದ್ದಲ್ಲಿ ಈ ಪ್ರಶ್ನೆಗೆ ಮಹತ್ವವಿರುತ್ತಿತ್ತು. ವಿಶಾಲವಾದ, ಸುಂದರ ಮತ್ತು ವೈವಿಧ್ಯದಿಂದ ಕೂಡಿದ ದೇಶ ನಮ್ಮದು. ಜಿ–20 ಶೃಂಗಸಭೆ ಅಂಗವಾಗಿ ದೇಶದ ಪ್ರತಿಯೊಂದು ಭಾಗದಲ್ಲಿ ಸಭೆಗಳನ್ನು ಆಯೋಜಿಸುವುದು ಸಹಜವಲ್ಲವೇ?’ ಎಂದು ಮೋದಿ ಮರುಪ್ರಶ್ನೆ ಹಾಕಿದ್ದಾರೆ.

ಅರುಣಾಚಲ ಪ್ರದೇಶ, ಅಕ್ಸಾಯ್‌ ಚಿನ್‌ ಪ್ರದೇಶವನ್ನು ಒಳಗೊಂಡ ನೂತನ ಭೂಪಟವನ್ನು ಇತ್ತೀಚೆಗೆ ಚೀನಾ ಬಿಡುಗಡೆ ಮಾಡಿತ್ತು. ಪಾಕಿಸ್ತಾನವು ಜಿ–20 ಸದಸ್ಯ ರಾಷ್ಟ್ರವಾಗಿರದಿದ್ದರೂ, ಜಮ್ಮು–ಕಾಶ್ಮೀರದಲ್ಲಿ ಸಭೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಚೀನಾ ಇದಕ್ಕೆ ದನಿಗೂಡಿಸಿತ್ತು. ಈ ಎಲ್ಲ ಕಾರಣಗಳಿಂದಾಗಿ ಮೋದಿ ಅವರ ಹೇಳಿಕೆಗೆ ಮಹತ್ವ ಬಂದಿದೆ. ಜಿ–20ಗೆ ಸಂಬಂಧಿಸಿದ ಸಭೆಯೊಂದು ಮಾರ್ಚ್‌ನಲ್ಲಿ ಅರುಣಾಚಲ ಪ್ರದೇಶ, ಮೇ ನಲ್ಲಿ ಜಮ್ಮುವಿನಲ್ಲಿ ನಡೆದಿತ್ತು.

‘ಹಲವಾರು ಸಣ್ಣ ರಾಷ್ಟ್ರಗಳು ಜಾಗತಿಕ ಮಟ್ಟದ ಸಭೆಗಳನ್ನು ಆಯೋಜಿಸಿ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ಸಾರಿರುವ ನಿದರ್ಶನಗಳಿವೆ. ಅನೇಕ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿರುವ ಭಾರತ ಕೂಡ ಇಂಥ ಸಭೆಗಳ ಆತಿಥ್ಯ ವಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ’.

‘ಹಿಂದೆಲ್ಲಾ ಎಲ್ಲ ಸಭೆ–ಸಮಾರಂಭಗಳು ದೆಹಲಿಗೆ ಸೀಮಿತವಾಗಿರುತ್ತಿದ್ದವು. ಈ ಹಿಂದಿನ ಸರ್ಕಾರಗಳು ಇಂಥ ವಿಚಾರದಲ್ಲಿ ದೇಶದ ಇತರ ಭಾಗಗಳ ಜನರಲ್ಲಿ ವಿಶ್ವಾಸ ಹೊಂದಿರಲಿಲ್ಲ ಅನಿಸುತ್ತದೆ’ ಎಂದೂ ಹೇಳಿದ್ದಾರೆ.

‘ಇದು ಯುದ್ಧದ ಯುಗವಲ್ಲ’ ಎಂಬುದಾಗಿ ಸಮರ್ಕಂಡದ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ನೀವು ಹೇಳಿದ್ದ ಮಾತನ್ನು ಜಗತ್ತೇ ಒಪ್ಪಿತ್ತು. ನಿಮ್ಮ ಈ ಸಂದೇಶವನ್ನು ಅಳವಡಿಸಿಕೊಳ್ಳಲು ಜಿ–20ಗೆ ಕಷ್ಟವಾಗಲಿದೆ. ಅಧ್ಯಕ್ಷ ಸ್ಥಾನದಲ್ಲಿರುವ ಭಾರತವು ಈ ವಿಚಾರವಾಗಿ ಸದಸ್ಯ ರಾಷ್ಟ್ರಗಳಲ್ಲಿ ಒಮ್ಮತ ಮೂಡಿಸಲು ಏನು ಮಾಡಬಹುದು’ ಎಂದು ಜೋಶಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ‘ವಿಶ್ವದ ಅನೇಕ ಪ್ರದೇಶಗಳಲ್ಲಿ ವಿಭಿನ್ನ ನೆಲೆಗಳಲ್ಲಿ ಸಂಘರ್ಷಗಳಿವೆ. ಯಾವುದೇ ಭಾಗದಲ್ಲಿ, ಯಾವುದೇ ರೀತಿಯ ಸಂಘರ್ಷವಿರಲಿ, ಅವುಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕವೇ ಬಗೆಹರಿಸಿಕೊಳ್ಳಬೇಕು. ಜಿ–20 ಅಧ್ಯಕ್ಷ ಸ್ಥಾನದಲ್ಲಿರಲಿ ಅಥವಾ ಇಲ್ಲದಿರಲಿ ಇದೇ ಭಾರತದ ದೃಢ ನಿಲುವು’ ಎಂದಿದ್ದಾರೆ.

‘ಭಾರತ: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ’

‘2047ರ ಹೊತ್ತಿಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪೈಕಿ ಒಂದಾಗಲಿದೆ. ಉಳಿದ ದೇಶಗಳಿಗೆ ಹೋಲಿಸಿದರೆ ನಮ್ಮ ಆರ್ಥ ವ್ಯವಸ್ಥೆಯು ಹೆಚ್ಚು ಒಳಗೊಳ್ಳುವಿಕೆ ಹಾಗೂ ನಾವೀನ್ಯದಿಂದ ಕೂಡಿರಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕತೆ ಶಿಕ್ಷಣ ಬ್ಯಾಂಕಿಂಗ್‌ ಮತ್ತು ಹಣಕಾಸು ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ತರಲಾಗಿದೆ. ದೇಶದ ಈ ಪ್ರಗತಿಯು ರಾಜಕೀಯ ಸ್ಥಿರತೆ ಹಾಗೂ ಸುಧಾರಣೆಗಳ ಉಪ ಉತ್ಪನ್ನವೇ ಆಗಿದೆ’ ಎಂದು ಪ್ರತಿಪಾದಿಸಿದರು.

ಸಂದರ್ಶನದಲ್ಲಿ ಪ್ರಸ್ತಾಪಗೊಂಡ ಪ್ರಮುಖ ಅಂಶಗಳು

* 2014ರ ನಂತರ ಸ್ಥಿರ ಸರ್ಕಾರವಿದ್ದ ಕಾರಣ ನೀತಿ–ನಿರೂಪಣೆ ಅನುಷ್ಠಾನದಲ್ಲಿ ಹೆಚ್ಚು ಸ್ಪಷ್ಟತೆ ಸಾಧ್ಯವಾಗಿದೆ

* ವಿಶ್ವಸಂಸ್ಥೆಯಲ್ಲಿ ಕಾಲಕ್ಕೆ ತಕ್ಕಂತೆ ಸುಧಾರಣೆ ಅಗತ್ಯವಿದೆ. ಎಲ್ಲ ದೇಶಗಳ ಧ್ವನಿಯಾಗಿ ವಿಶ್ವಸಂಸ್ಥೆ ಕಾರ್ಯನಿರ್ವಹಿಸಬೇಕು

* ಅಭಿವೃದ್ಧಿ ಹೊಂದುತ್ತಿರುವ ಅನೇಕ ರಾಷ್ಟ್ರಗಳು ಸಾಲದ ಸುಳಿಗೆ ಸಿಲುಕಿರುವುದು ಕಳವಳಕಾರಿ ವಿಷಯ. ಇಂತಹ ದೇಶಗಳು ಈಗ ವಿತ್ತೀಯ ಶಿಸ್ತಿಗೆ ಮಹತ್ವ ನೀಡುತ್ತಿವೆ

* ಬೇಜವಾಬ್ದಾರಿಯ ಹಣಕಾಸು ನೀತಿ ಹಾಗೂ ಜನಪ್ರಿಯ ಯೋಜನೆಗಳು ಅಲ್ಪಾವಧಿಯಲ್ಲಿ ರಾಜಕೀಯವಾಗಿ ಫಲ ನೀಡಬಹುದು. ಆದರೆ ದೀರ್ಘಾವಧಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಬಹು ದೊಡ್ಡ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ರಾಜ್ಯಗಳು ಹಣಕಾಸು ಶಿಸ್ತು ಕುರಿತು ಹೆಚ್ಚು ಎಚ್ಚರವಹಿಸಬೇಕು

* ಆಫ್ರಿಕಾ ಒಕ್ಕೂಟಕ್ಕೆ ಜಿ–20ಯ ಪೂರ್ಣಪ್ರಮಾಣದ ಸದಸ್ಯತ್ವ ನೀಡಬೇಕು ಎಂಬುದು ಭಾರತದ ಒತ್ತಾಸೆ. ಪ್ರತಿಯೊಂದು ದೇಶಕ್ಕೆ ಪ್ರತಿಯೊಬ್ಬರ ಧ್ವನಿಗೆ ಪ್ರಾತಿನಿಧ್ಯ ಸಿಗದ ಹೊರತು ಮನುಕುಲದ ಭವಿಷ್ಯಕ್ಕಾಗಿ ರೂಪಿಸುವ ಯಾವುದೇ ಯೋಜನೆ ಯಶಸ್ಸು ಕಾಣುವುದಿಲ್ಲ ಎಂಬುದು ಭಾರತದ ದೃಢ ನಂಬಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT