ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಗೆ ಭದ್ರತೆ ವೈಫಲ್ಯ ವಿವಾದ: ಅಮರಿಂದರ್ ಸಿಂಗ್‌ ಕೇಂದ್ರದ ಗಿಳಿ ಎಂದ ಸಿಧು

Last Updated 7 ಜನವರಿ 2022, 14:01 IST
ಅಕ್ಷರ ಗಾತ್ರ

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಕೇಂದ್ರ ಸರ್ಕಾರ ಹೇಳಿದಂತೆ ಮಾತನಾಡುವ ಗಿಳಿ ಎಂದು ಶುಕ್ರವಾರ ಟೀಕಿಸಿದ್ದಾರೆ. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸದಿದ್ದರೆ, ಬಿಜೆಪಿಯು ತಕ್ಕ ಉತ್ತರ ಪಡೆಯಲಿದೆ ಎಂದು ಎಚ್ಚರಿಸಿದ್ದಾರೆ.

ಚರಣ್‌ಜಿತ್‌ ಸಿಂಗ್‌ ಚನ್ನಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಂಜಾಬ್‌ನಲ್ಲಿ ಪ್ರಧಾನಿಗೆ ಭದ್ರತೆ ಕಲ್ಪಿಸುವಲ್ಲಿ ವಿಫಲವಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಸಿಧು, ಕಳೆದೆರಡು ದಿನಗಳಿಂದ ಭದ್ರತೆಯ ಬಗ್ಗೆ ಚರ್ಚೆಯಾಗುತ್ತಿದೆ. ಕೆಲವು ಬುದ್ದಿಗೇಡಿ ಗಿಳಿಗಳು ಭದ್ರತೆ, ಭದ್ರತೆ, ಭದ್ರತೆ ಎಂದು ಪದೇಪದೆ ಹೇಳುತ್ತಿವೆ. ಆ ಗಿಳಿಗಳಲ್ಲಿ ಅಗ್ರಗಣ್ಯರು ನಮ್ಮ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ʼ ಎಂದು ಹೇಳಿದ್ದಾರೆ.

ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಧು, ‘ಅವರು (ಬಿಜೆಪಿ) ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಖಂಡಿತಾ ತಕ್ಕ ಉತ್ತರ ಪಡೆಯಲಿದ್ದಾರೆ. ಇಲ್ಲಿ (ಪಂಜಾಬ್‌ನಲ್ಲಿ) ರಾಷ್ಟ್ರಪತಿ ಆಳ್ವಿಕೆ‌ ಹೇರಬೇಕೆಂದು ಹೇಳುತ್ತಿರುವವರು, ನಿಮ್ಮ (ಬಿಜೆಪಿಯ) ಗಿಳಿಗಳುʼಎಂದು ಕುಟುಕಿದ್ದಾರೆ.

ಮುಂದುವರಿದು, ರಾಜ್ಯದಲ್ಲಿ ಬಿಜೆಪಿಗೆ ಮತವೂ ಇಲ್ಲ. ಬೆಂಬಲವೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಅವರು ಭಾಗವಹಿಸಬೇಕಿದ್ದ ರ್‍ಯಾಲಿಯಲ್ಲಿ ಬಿಜೆಪಿ ನಿರೀಕ್ಷಿಸಿದ್ದಷ್ಟು ಜನರೇ ಸೇರಿರಲಿಲ್ಲ ಎಂದು ಆರೋಪಿಸಿರುವ ಸಿಧು, ‘ರ್‍ಯಾಲಿಯಲ್ಲಿ ಕೇವಲ 500 ಜನರಷ್ಟೇ ಭಾಗವಹಿಸಿರುದ್ದಾಗ, ಪ್ರಧಾನಿ ಅವರು 7 ಸಾವಿರ ಕುರ್ಚಿಗಳನ್ನುದ್ದೇಶಿಸಿ ಮಾತನಾಡಲು ಹೇಗೆ ಸಾಧ್ಯ?’ ಎಂದು ತಿವಿದಿದ್ದಾರೆ.

ಮುಂದುವರಿದು, ಪ್ರಧಾನಮಂತ್ರಿ ಸ್ಥಾನದ ರಕ್ಷಣೆಗಾಗಿ ಲಕ್ಷಾಂತರ ಪಂಜಾಬಿಗಳು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಪ್ರತಿಯೊಬ್ಬ ಪಂಜಾಬಿ ಮತ್ತು ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತ, ತನ್ನ ಕೊನೆಯ ಉಸಿರು ಇರುವವರೆಗೂ ದೇಶದ ರಕ್ಷಣೆಗಾಗಿ ಹೋರಾಡಲಿದ್ದಾರೆ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿ ಅವರೇ ನಿಮ್ಮ ಪಕ್ಷ ಮತ್ತು ಸಂಘ ಪರಿವಾರದವರು ಜೀವನದಲ್ಲಿ ಸಾಕಷ್ಟು ಬಾರಿಯೇನೂ ತ್ರಿವರ್ಣ ಧ್ವಜವನ್ನು ಹಾರಿಸಿಲ್ಲ. ಆದರೆ, ಪಂಜಾಬ್‌ ಮಕ್ಕಳ ದೇಹದ ಮೇಲೆ ಲೆಕ್ಕವಿಲ್ಲದಷ್ಟು ಬಾರಿ ತ್ರಿವರ್ಣ ಧ್ವಜವನ್ನು ಹೊದಿಸಲಾಗಿದೆ. ಹಾಗಾಗಿ ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರ ಜೀವಕ್ಕೆ ಅಪಾಯವಿತ್ತು ಎಂಬುದು ಪಂಜಾಬಿಗಳಿಗೆ ಮಾಡಿದ ಅವಮಾನ ಎಂದು ಒತ್ತಿ ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ಪಂಜಾಬ್‌ ಸರ್ಕಾರ ವಿಫಲವಾಗಿದೆ ಎಂದು ಗುರುವಾರ ಕಿಡಿಕಾರಿದ್ದ ಅಮರಿಂದರ್ ಸಿಂಗ್‌, ಸರ್ಕಾರವನ್ನು ವಜಾ ಮಾಡಬೇಕು. ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಒತ್ತಾಯಿಸಿದ್ದರು.

ಪ್ರಧಾನಿ ಮೋದಿ ಅವರು ಪಂಜಾಬ್‌ನಲ್ಲಿ ₹ 42,750 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಬುಧವಾರ ಸಮಯ ನಿಗದಿಯಾಗಿತ್ತು. ಆದರೆ, ಫಿರೋಜ್‌ಪುರದಲ್ಲಿ ಭದ್ರತಾ ಲೋಪ ಉಂಟಾದ ಕಾರಣ ರ್‍ಯಾಲಿ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗದೆ ಪ್ರಧಾನಿ ಪಂಜಾಬ್‌ನಿಂದ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT