ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗದ ಮೇಲಿನ ಹಿಡಿತ ಖಚಿತಪಡಿಸಿಕೊಳ್ಳಲು ಮೋದಿ ಸರ್ಕಾರ ಯತ್ನ: ಕಾಂಗ್ರೆಸ್

Published 11 ಆಗಸ್ಟ್ 2023, 6:27 IST
Last Updated 11 ಆಗಸ್ಟ್ 2023, 6:27 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಲೋಕಸಭೆ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮೇಲಿನ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದೆ.

ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರನ್ನು (ಸಿಜೆಐ) ಹೊರಗೆ ಇರಿಸುವ ಉದ್ದೇಶದ ಮಸೂದೆಯನ್ನು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಗುರುವಾರ ಮಂಡಿಸಿದೆ. ಸಿಜೆಐ ಬದಲಿಗೆ ಸಂಪುಟ ದರ್ಜೆಯ ಸಚಿವರೊಬ್ಬರು ಸಮಿತಿಯ ಸದಸ್ಯರಾಗಲಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ನೇಮಕಾತಿಯಲ್ಲಿ ಹೆಚ್ಚಿನ ಅಧಿಕಾರ ದೊರೆಯುತ್ತದೆ ಎನ್ನಲಾಗಿದೆ.

ಈ ವಿಚಾರವಾಗಿ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಪಕ್ಷಪಾತ ನಿಲುವುಗಳನ್ನು ತಪ್ಪಿಸುವ ದೃಷ್ಟಿಯಿಂದ ಸಾಂವಿಧಾನಿಕ ಸಂಸ್ಥೆಗಳಿಗೆ ದ್ವಿಪಕ್ಷೀಯ ರೀತಿಯಲ್ಲಿ ನೇಮಕಾತಿ ನಡೆಯಬೇಕು ಎಂದು ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರು ಯುಪಿಎ ಸರ್ಕಾರವನ್ನು ಒತ್ತಾಯಿಸಿದ್ದರು. 2012ರ ಜೂನ್‌ 2ರಂದು ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಅಡ್ವಾಣಿ ಬರೆದಿದ್ದ ಪತ್ರವನ್ನು ಜೈರಾಮ್‌ ರಮೇಶ್‌ ಹಂಚಿಕೊಂಡಿದ್ದಾರೆ.

ಆಯ್ಕೆ ಸಮಿತಿಯಲ್ಲಿ ಪ್ರಧಾನ ಮಂತ್ರಿ ಮಾತ್ರವಲ್ಲದೆ ಸಿಜೆಐ ಮತ್ತು ಉಭಯ ಸದನಗಳ ವಿರೋಧ ಪಕ್ಷದ ನಾಯಕರೂ ಇರಬೇಕು ಎಂಬ ಪ್ರಸ್ತಾವನೆಯನ್ನು ಅಡ್ವಾಣಿ ಅವರು ಹಿಂದೆಯೇ ಪ್ರಸ್ತಾಪಿಸಿದ್ದರು ಎಂದು ಉಲ್ಲೇಖಿಸಿ, ಕೇಂದ್ರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಇದನ್ನೂ ಓದಿ: ಚು. ಆಯುಕ್ತರ ನೇಮಕ ಸಮಿತಿಯಿಂದ CJI ಹೊರಗಿಡುವ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

'ಎಕ್ಸ್‌'ನಲ್ಲಿ (ಟ್ವಿಟರ್‌) ಪೋಸ್ಟ್‌ ಮಾಡಿರುವ ರಮೇಶ್‌, 'ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಕೇಂದ್ರದ ಮಸೂದೆಯು, ಆಯುಕ್ತರ ಆಯ್ಕೆ ಸಮಿತಿಯಲ್ಲಿ 2:1ರ ಅನುಪಾತದೊಂದಿಗೆ ಕಾರ್ಯನಿರ್ವಾಹಕ ಹಸ್ತಕ್ಷೇಪವನ್ನು ಖಚಿತಪಡಿಸುತ್ತದೆ. ಚುನಾವಣಾ ವರ್ಷದಲ್ಲಿ ಮಂಡಿಸಿರುವ ಈ ಮಸೂದೆಯು ಚುನಾವಣಾ ಆಯೋಗದ ಮೇಲಿನ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವ ಪ್ರಧಾನಿ ಮೋದಿ ಅವರ ಬಯಕೆಯನ್ನು ದೃಢಪಡಿಸುತ್ತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ವರ್ಷ ವಿಧಾನಸಭೆ ಚುನಾವಣೆಗಳು ನಡೆಯಲಿವೆ.

ಕೇಂದ್ರ ಸರ್ಕಾರದ ಹೊಸ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT