ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಗೆ ಅರ್ಜುನ್ ಯುದ್ಧ ಟ್ಯಾಂಕ್ ಹಸ್ತಾಂತರಿಸಿದ ಪ್ರಧಾನಿ ಮೋದಿ

Last Updated 14 ಫೆಬ್ರುವರಿ 2021, 18:16 IST
ಅಕ್ಷರ ಗಾತ್ರ

ಚೆನ್ನೈ: ದೇಶಿಯವಾಗಿ ನಿರ್ಮಿಸಲಾದ ಅರ್ಜುನ್‌ ಯುದ್ಧ ಟ್ಯಾಂಕ್‌ (ಎಂಕೆ–1ಎ) ಅನ್ನು ಸೇನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಹಸ್ತಾಂತರಿಸಿದರು.

ಚೆನ್ನೈಗೆ ಬಳಿಯ ಅವದಿಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಯುದ್ಧ ವಾಹನ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯು ವಿನ್ಯಾಸಗೊಳಿಸಿ ಈ ಟ್ಯಾಂಕ್‌ ಅನ್ನು ಅಭಿವೃದ್ಧಿಪಡಿಸಿದೆ.

ಅರ್ಜುನ್‌ ಟ್ಯಾಂಕ್‌ ಪ್ರತಿರೂಪದ ಮಾದರಿಯನ್ನು ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಪ್ರಧಾನಿ, ‘ಜಗತ್ತಿನಲ್ಲೇ ಅತ್ಯಾಧುನಿಕ ಪಡೆಯನ್ನಾಗಿ ನಮ್ಮ ಸೇನಾಪಡೆಗಳನ್ನು ಸಜ್ಜುಗೊಳಿಸಲಾಗುವುದು’ ಎಂದು ಹೇಳಿದರು.

ಯೋಜನೆಗಳಿಗೆ ಚಾಲನೆ:ತಮಿಳುನಾಡಿನಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ವಿವಿಧ ಯೋಜನೆಗಳಿಗೂ ಚಾಲನೆ ನೀಡಿದರು. ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

₹ 3,370 ಕೋಟಿ ವೆಚ್ಚದಲ್ಲಿ ಮುಕ್ತಾಯಗೊಳಿಸಲಾದ ಚೆನ್ನೈ ಮೆಟ್ರೊ ರೈಲಿನ ಮೊದಲನೇ ಹಂತದ ವಿಸ್ತರಣೆ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು. ಜತೆಗೆ, ಚೆನ್ನೈ ಬೀಚ್‌–ಅತ್ತಿಪಟ್ಟು ನಡುವಣ ನಾಲ್ಕನೇ ಮಾರ್ಗ ಹಾಗೂ ತಂಜಾವೂರು–ಮಾಯಿಲದುತುರೈ–ತಿರುವರ ನಡುವಣ ರೈಲ್ವೆ ವಿದ್ಯುದ್ದೀಕರಣ ಯೋಜನೆಯನ್ನು ಅವರು ಸಮರ್ಪಿಸಿದರು.

‘ದೇಶದಲ್ಲಿನ ಎರಡು ರಕ್ಷಣಾ ಕಾರಿಡಾರ್‌ಗಳಲ್ಲಿ ತಮಿಳುನಾಡಿಗೆ ಈಗಾಗಲೇ ₹ 8100 ಕೋಟಿ ಮೊತ್ತ ನೀಡಲಾಗಿದೆ’ ಎಂದರು.

ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ತಮಿಳುನಾಡಿಗೆ ಪ್ರಧಾನಿ ಭೇಟಿಯು ಮಹತ್ವ ಪಡೆದಿತ್ತು. ತಮಿಳು ಸಂಸ್ಕೃತಿ ಮತ್ತು ಶ್ರೀಲಂಕಾ ತಮಿಳರ ಆಶೋತ್ತರಗಳ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದರು. ತಮಿಳು
ನಾಡಿನ ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ಕೈಗೊಳ್ಳುವುದು ಗೌರವದ ವಿಷಯವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ. ಪನ್ನೀರಸೇಲ್ವಂ ಅವರ ಕೈಗಳನ್ನು ಪ್ರಧಾನಿ ನರೇಂದ್ರ ಮೋದಿ ಎತ್ತುವ ಮೂಲಕ ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಮತ್ತು ಅವರ ಸಂಬಂಧಿ ಟಿ.ಟಿ.ವಿ ದಿನಕರನ್ ಅವರ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಸಂದೇಶವನ್ನು ನೀಡಿದರು.

ಕೊಚ್ಚಿ ವರದಿ: ಇಲ್ಲಿನ ಭಾರತ ಪೆಟ್ರೊಲಿಯಂನ ಪೆಟ್ರೊ–ಕೆಮಿಕಲ್‌ ಕಾಂಪ್ಲೆಕ್ಸ್‌ ಅನ್ನು ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದರು. ಎರಡು ‘ರೋಲ್‌–ಆನ್/ರೋಲ್‌ ಆಫ್‌’ ಹಡಗುಗಳಿಗೂ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT