ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಚಿತ್ರ ಮಾಯ: ಕಾರಣವೇನು?

Published 2 ಮೇ 2024, 7:21 IST
Last Updated 2 ಮೇ 2024, 7:21 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿತರಿಸುವ ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ತೆಗೆದುಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

ಹೊಸದಾಗಿ ಡೌನ್‌ಲೋಡ್‌ ಮಾಡಿಕೊಂಡ ಪ್ರಮಾಣ ಪತ್ರದಲ್ಲಿ ‘ಒಗ್ಗಟ್ಟಾಗಿ ಭಾರತ ಕೋವಿಡ್ –19 ಅನ್ನು ಸೋಲಿಸಲಿದೆ’ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಮಾತ್ರ ಇದೆ. ಚಿತ್ರ ತೆಗೆದುಹಾಕಲಾಗಿದೆ.

ಪ್ರಧಾನಿ ಮೋದಿಯವರ ಭಾವಚಿತ್ರ ಇದ್ದ ಕೋವಿಡ್ ಲಸಿಕೆ ಪ್ರಮಾಣ ಪತ್ರ

ಪ್ರಧಾನಿ ಮೋದಿಯವರ ಭಾವಚಿತ್ರ ಇದ್ದ ಕೋವಿಡ್ ಲಸಿಕೆ ಪ್ರಮಾಣ ಪತ್ರ

ಹೊಸ ಪ್ರಮಾಣ ಪತ್ರದಲ್ಲಿ ಪ್ರಧಾನಿ ಚಿತ್ರ ಇಲ್ಲ

ಹೊಸ ಪ್ರಮಾಣ ಪತ್ರದಲ್ಲಿ ಪ್ರಧಾನಿ ಚಿತ್ರ ಇಲ್ಲ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಥರಹೇವಾರಿ ಚರ್ಚೆಗಳು ನಡೆಯುತ್ತಿವೆ. ಕೋವಿಶೀಲ್ಡ್ ಲಸಿಕೆಯಲ್ಲಿ ಅಡ್ಡಪರಿಣಾಮ ಇದೆ ಎಂದು ಅದರ ತಯಾರಕ ಕಂಪನಿ ಆಸ್ಟ್ರೆಜೆನೆಕಾ ಹೇಳಿಕೆ ನೀಡಿದ ಬಳಿಕ ಮೋದಿಯವರ ಚಿತ್ರ ತೆಗೆದುಹಾಕಲಾಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂದೀಪ್ ಮನುಧಾನೆ ಎನ್ನುವವರು ಲಸಿಕೆಯ ಪ್ರಮಾಣ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿಜಿ ಕಾಣಿಸುತ್ತಿಲ್ಲ. ಪರಿಶೀಲನೆ ಮಾಡಲು ಡೌನ್ಲೋಡ್‌ ಮಾಡಿದೆ. ಹೌದು ಅವರ ಚಿತ್ರ ಹೋಗಿದೆ’ ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ಸಂದೀಪ್ ಅವರ ಪೋಸ್ಟ್‌ಗೆ ಸಂತೋಷ್ ಅಯ್ಯರ್ ಎಂಬುವವರು ಪ್ರತಿಕ್ರಿಯಿಸಿದ್ದು, ‘ಹೌದು, ನೀವು ಸರಿಯಾಗಿ ಹೇಳಿದ್ದೀರಿ. ನಾನು ಪರಿಶೀಲನೆ ನಡೆಸಿದೆ. ಕೋವಿಡ್ ಲಸಿಕೆಯ ಪ್ರಮಾಣ ಪತ್ರದಲ್ಲಿ ಮೋದಿಯವರ ಚಿತ್ರ ಇಲ್ಲ’ ಎಂದು ಬರೆದುಕೊಂಡಿದ್ದಾರೆ.

‘ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಹೀಗಾಗಿದೆ. ಒಂದು ವೇಳೆ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಚಿತ್ರ ಪುನಃ ಕಾಣಿಸಿಕೊಳ್ಳುತ್ತದೆ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಈ ಹಿಂದೆ ಏನಾಗಿತ್ತು?

ಅಂದಹಾಗೆ ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಮೋದಿಯವರ ಚಿತ್ರ ತೆಗೆಯುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ 2022ರಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ, ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್ ಹಾಗೂ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ವೇಳೆಯೂ ಲಸಿಕೆ ಪ್ರಮಾಣಪತ್ರದಿಂದ ಚಿತ್ರವನ್ನು ತೆಗೆದುಹಾಕಲಾಗಿತ್ತು.

ಲಸಿಕೆ ಪಡೆಯುವ ವೇಳೆ ಪಾಸ್‌ಪೋರ್ಟ್‌ ಅನ್ನು ಗುರುತಿನ ಚೀಟಿಯಾಗಿ ನೀಡಿದವರ ಪ್ರಮಾಣ ಪತ್ರದಲ್ಲೂ ಪ್ರಧಾನಿ ಮೋದಿಯವರ ಚಿತ್ರ ತೆಗೆದುಹಾಕಲಾಗಿತ್ತು. ಹಲವು ಎಮಿಗ್ರೇಶನ್ ಕೇಂದ್ರಗಳಲ್ಲಿ ಅಧಿಕಾರಿಗಳು ಪ್ರಯಾಣಿಕರ ಚಿತ್ರ ಎಂದು ಬಗೆದು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ್ದ ಘಟನೆಗಳೂ ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT