ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಕೋವಿಶೀಲ್ಡ್‌ ಲಸಿಕೆಯಿಂದ ಗಂಭೀರ ಅಡ್ಡಪರಿಣಾಮ
ಆಳ–ಅಗಲ: ಕೋವಿಶೀಲ್ಡ್‌ ಲಸಿಕೆಯಿಂದ ಗಂಭೀರ ಅಡ್ಡಪರಿಣಾಮ
ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸಿದ ಕಂಪನಿಯಿಂದಲೇ ಮಾಹಿತಿ
Published 30 ಏಪ್ರಿಲ್ 2024, 22:40 IST
Last Updated 30 ಏಪ್ರಿಲ್ 2024, 22:40 IST
ಅಕ್ಷರ ಗಾತ್ರ
ಭಾರತದಲ್ಲಿ ಕೋವಿಡ್‌ ಲಸಿಕಾ ಕಾರ್ಯಕ್ರಮದ ನಂತರ ಯುವಕರು, ಮಧ್ಯವಯಸ್ಕರು ಕುಸಿದುಬಿದ್ದು ಮೃತಪಡುವ ಘಟನೆಗಳು ಹೆಚ್ಚಾದವು. ಲಸಿಕೆಯ ಅಡ್ಡಪರಿಣಾಮದಿಂದಲೇ ಹೀಗಾಗುತ್ತಿದೆ ಎಂದು ಹಲವು ತಜ್ಞರು ಹೇಳಿದ್ದರು. ಆದರೆ ಕೇಂದ್ರ ಸರ್ಕಾರವು ಇದನ್ನು ನಿರಾಕರಿಸುತ್ತಲೇ ಇತ್ತು. ಆದರೆ ಈಗ ಕೋವಿಡ್‌ ಲಸಿಕೆ–ಕೋವಿಶೀಲ್ಡ್‌ ಅನ್ನು ಅಭಿವೃದ್ಧಿ‍ಪಡಿಸಿದ್ದ ಕಂಪನಿಯೇ, ಆ ಲಸಿಕೆಯಿಂದ ಮಾರಣಾಂತಿಕ ಅಡ್ಡಪರಿಣಾಮ ಉಂಟಾಗುತ್ತದೆ ಎಂದು ಲಂಡನ್‌ನ ನ್ಯಾಯಾಲಯದ ಎದುರು ಒಪ್ಪಿಕೊಂಡಿದೆ. ಭಾರತದಲ್ಲಿ ಸುಮಾರು 80 ಕೋಟಿ ಜನರಿಗೆ ಈ ಕೋವಿಶೀಲ್ಡ್‌ ಲಸಿಕೆ ನೀಡಲಾಗಿದೆ

ಕೋವಿಡ್‌ ನಿಯಂತ್ರಣಕ್ಕಾಗಿ ತಾನು ಅಭಿವೃದ್ಧಿಪಡಿಸಿದ್ದ ‘ಕೋವಿಶೀಲ್ಡ್‌’ ಲಸಿಕೆಯಿಂದ ಮಾರಣಾಂತಿಕ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂದು ಆಸ್ಟ್ರಾಜೆನೆಕಾ ಕಂಪನಿ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಈ ಲಸಿಕೆಯ ಅಡ್ಡಪರಿಣಾಮಕ್ಕೆ ಒಳಗಾದವರು ಹೂಡಿದ್ದ ಮೊಕದ್ದಮೆಯ ವಿಚಾರಣೆಯ ಭಾಗವಾಗಿ ಕಂಪನಿಯು ಲಂಡನ್‌ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಮಾಹಿತಿ ಇದೆ ಎಂದು ‘ದಿ ಡೈಲಿ ಟೆಲಿಗ್ರಾಫ್‌’ ವರದಿ ಮಾಡಿದೆ. ಕೋವಿಶೀಲ್ಡ್‌ ಪಡೆದುಕೊಂಡವರಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ರಕ್ತಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ ಸಂಖ್ಯೆ ಇಳಿಕೆ (ಟಿಟಿಎಸ್‌) ಸಮಸ್ಯೆ ತಲೆದೋರುತ್ತದೆ ಎಂದು ಕಂಪನಿ ಪ್ರಮಾಣಪತ್ರದಲ್ಲಿ ವಿವರಿಸಿದೆ. ಆದರೆ ಇದು ಅಪರೂಪದ ಅಡ್ಡಪರಿಣಾಮ
ವಾದರೂ ಮಾರಣಾಂತಿಕ ಸಮಸ್ಯೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.

ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಕಂಪನಿ ಜಂಟಿಯಾಗಿ ಕೋವಿಶೀಲ್ಡ್‌ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದವು. ಭಾರತದ ‘ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ’ (ಎಸ್‌ಐಐ) ಕಂಪನಿಯು ಈ ಲಸಿಕೆಗಳನ್ನು ತಯಾರಿಸುವ ಗುತ್ತಿಗೆ ಪಡೆದುಕೊಂಡಿತ್ತು. ಬ್ರಿಟನ್‌, ಐರೋಪ್ಯ ದೇಶಗಳು, ದಕ್ಷಿಣ ಏಷ್ಯಾ ದೇಶಗಳು ಮತ್ತು ಕೆರೀಬಿಯನ್‌ನ ಕೆಲವು ದೇಶಗಳಲ್ಲಿ ಈ ಲಸಿಕೆಯ ಬಳಕೆಯನ್ನು ಜಾರಿಗೆ ತರಲಾಗಿತ್ತು. ಆದರೆ ಆಸ್ಟ್ರಿಯಾದಲ್ಲಿ, ಈ ಲಸಿಕೆ ಪಡೆದುಕೊಂಡವರಲ್ಲಿ ಇಬ್ಬರು ರಕ್ತಹೆಪ್ಪುಗಟ್ಟುವಿಕೆಯಿಂದ ಮೃತಪಟ್ಟಿದ್ದರು. ಹೀಗಾಗಿ 2021ರ ಮಾರ್ಚ್‌ನಲ್ಲಿ ಆಸ್ಟ್ರಿಯಾ ಸರ್ಕಾರವು ಈ ಲಸಿಕೆಯ ಬಳಕೆಯನ್ನು ನಿಷೇಧಿಸಿತು. ನಂತರದ ದಿನಗಳಲ್ಲಿ ಐರೋಪ್ಯ ಒಕ್ಕೂಟದ 19 ದೇಶಗಳು ಈ ಲಸಿಕೆಯನ್ನು ನಿಷೇಧಿಸಿದವು. ಅಮೆರಿಕವೂ ಈ ಲಸಿಕೆ ಬಳಸದಂತೆ ಎಚ್ಚರಿಕೆ ನೀಡಿತ್ತು. ಆದರೆ ಈ ಎಲ್ಲವನ್ನೂ ನಿರಾಕರಿಸಿದ್ದ ಆಸ್ಟ್ರಾಜೆನೆಕಾ, ಕೋವಿಶೀಲ್ಡ್‌ ಸಂಪೂರ್ಣ ಸುರಕ್ಷಿತ ಎಂದು ಹೇಳಿತ್ತು.

ಆಸ್ಟ್ರಿಯಾ, ಬ್ರಿಟನ್‌ ಮತ್ತು ಆಸ್ಟ್ರೇಲಿಯಾದ ಆರೋಗ್ಯ ಸಚಿವಾಲಯದ ಸಂಶೋಧನಾ ಸಂಸ್ಥೆಗಳೂ ಅಡ್ಡಪರಿಣಾಮವನ್ನು ದೃಢಪಡಿಸಿದ್ದವು. ಈ ಮೂರೂ ದೇಶಗಳ ಸಂಸ್ಥೆಗಳು ನೀಡಿದ್ದ ವರದಿಯ ಪ್ರಕಾರ ಕೋವಿಶೀಲ್ಡ್‌ ಪಡೆದುಕೊಂಡ ಪ್ರತಿ 50,000 ಮಂದಿಯಲ್ಲಿ ಒಬ್ಬರಲ್ಲಿ ಟಿಟಿಎಸ್‌ನಂತಹ ಮಾರಣಾಂತಿಕ ಅಡ್ಡಪರಿಣಾಮ ಉಂಟಾಗುತ್ತದೆ ಎಂದು ಹೇಳಿದ್ದವು. 2020ರ ಡಿಸೆಂಬರ್‌ನಲ್ಲಿ ತುರ್ತುಸಮಯದಲ್ಲಷ್ಟೇ ಕೋವಿಶೀಲ್ಡ್‌ ಬಳಕೆಗೆ ಅನುಮತಿ ದೊರೆತಿತ್ತು. ಆಗ ಬ್ರಿಟನ್‌ ಸರ್ಕಾರವು ಸುಮಾರು 5 ಕೋಟಿ ಡೋಸ್‌ಗಳನ್ನು ತನ್ನ ನಾಗರಿಕರಿಗೆ ನೀಡಿತ್ತು. ಆ ಸಂದರ್ಭದಲ್ಲಿ ಸಂಭವಿಸಿದ ಕೋವಿಡ್‌ ಸಾವುಗಳಲ್ಲಿ, 81 ಮಂದಿ ರಕ್ತಹೆಪ್ಪುಗಟ್ಟುವಿಕೆಯ ಸಮಸ್ಯೆಯಿಂದ ಮೃತಪಟ್ಟಿದ್ದರು ಮತ್ತು ಅಷ್ಟೂ ಮಂದಿ ಕೋವಿಶೀಲ್ಡ್‌ ಲಸಿಕೆ ಪಡೆದುಕೊಂಡಿದ್ದರು ಎಂದು ಬ್ರಿಟನ್‌ನ ‘ಮೆಡಿಸನ್‌ ಆ್ಯಂಡ್‌ ಹೆಲ್ತ್‌ಕೇರ್ ಪ್ರಾಡಕ್ಟ್ಸ್‌ ರೆಗ್ಯುಲೇಟರಿ ಏಜೆನ್ಸಿ’ ವರದಿ ನೀಡಿತ್ತು. ಟಿಟಿಎಸ್‌ನಿಂದ ಮೃತಪಟ್ಟವರು ಒಂದೆಡೆಯಾದರೆ, ಲಸಿಕೆ ಪಡೆದುಕೊಂಡವರಲ್ಲಿ ಸುಮಾರು 50,000 ಮಂದಿಯಲ್ಲಿ ಟಿಟಿಎಸ್‌ ಸಮಸ್ಯೆ ತಲೆದೋರಿತ್ತು ಎಂದೂ ಆ ಏಜೆನ್ಸಿ ಮಾಹಿತಿ ನೀಡಿತ್ತು.

ವಿಶ್ವದಾದ್ಯಂತ ಹಲವು ದೇಶಗಳು ಕೋವಿಡ್‌ ಲಸಿಕೆಯ ಬಳಕೆಯನ್ನು ತಡೆಗಟ್ಟಿದ್ದವು. ಆದರೆ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಈ ಲಸಿಕೆಯನ್ನೇ ಪ್ರಧಾನವಾಗಿ ಬಳಸಲಾಯಿತು. ಈ ಅಡ್ಡಪರಿಣಾಮಗಳ ಬಗ್ಗೆ ಆಕ್ಷೇಪಗಳು ಬಂದರೂ, ಲಸಿಕೆ ನೀಡಿಕೆ ಕಾರ್ಯಕ್ರಮ ಮುಂದುವರಿಯಿತು. ಆದರೆ ಬ್ರಿಟನ್‌ನಲ್ಲಿ ಕೋವಿಶೀಲ್ಡ್‌ ಲಸಿಕೆ ಪಡೆದುಕೊಂಡು ಮೃತಪಟ್ಟ ಮತ್ತು ಶಾಶ್ವತ ಅನಾರೋಗ್ಯಕ್ಕೆ ತುತ್ತಾದ 51 ಮಂದಿಯ ಕುಟುಂಬದವರು 2023ರಲ್ಲಿ ಆಸ್ಟ್ರಾಜೆನೆಕಾ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಈ 51ರಲ್ಲಿ 39 ಮಂದಿ ತಮಗೆ ಉಂಟಾಗಿರುವ ಆರೋಗ್ಯದ ಸಮಸ್ಯೆಗಳಿಗೆ ಕಂಪನಿಯಿಂದ ಪರಿಹಾರ ಕೇಳಿದ್ದರೆ, 12 ಮಂದಿ ಕೋವಿಶೀಲ್ಡ್‌ ಪಡೆದುಕೊಂಡ ನಂತರ ಮೃತಪಟ್ಟ ತಮ್ಮ ಕುಟುಂಬದ ಸದಸ್ಯರ ಪರವಾಗಿ ಪರಿಹಾರ ಕೇಳಿದ್ದರು. ಆರಂಭದ ವಿಚಾರಣೆ ವೇಳೆ ಅರ್ಜಿದಾರರ ವಾದವನ್ನು ಕಂಪನಿ ನಿರಾಕರಿಸಿತ್ತು. ಆದರೆ ವೈಜ್ಞಾನಿಕ ಪರಿಶೀಲನಾ ವರದಿಗಳು ಮತ್ತು ಕೋವಿಶೀಲ್ಡ್‌ನಿಂದಲೇ ಟಿಟಿಎಸ್‌ ಸಮಸ್ಯೆ ತಲೆದೋರಿತು ಎಂಬುದನ್ನು ಸಾಬೀತುಮಾಡುವ ವೈದ್ಯಕೀಯ ದಾಖಲಾತಿಗಳನ್ನು ಅರ್ಜಿದಾರರು ಒದಗಿಸಿದ್ದರು. 

ಕೋವಿಡ್‌ ಹರಡುವುದನ್ನು ತಡೆಯುವಲ್ಲಿ ಮತ್ತು ಅದರ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಕೋವಿಶೀಲ್ಡ್‌ ಲಸಿಕೆಯು ಶೇ 65ರಷ್ಟು ಪರಿಣಾಮಕಾರಿ. ಆದರೆ ಈ ಲಸಿಕೆ ಪಡೆದುಕೊಂಡವರಲ್ಲಿ ಟಿಟಿಎಸ್‌ ಸಮಸ್ಯೆ ತಲೆದೋರುತ್ತದೆ. ಅದರ ಪರಿಣಾಮವಾಗಿ ಸಾವೂ ಸಂಭವಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ 2023ರಲ್ಲಿ ವರದಿ ಬಿಡುಗಡೆ ಮಾಡಿತ್ತು.

ಇಷ್ಟೆಲ್ಲಾ ಬೆಳವಣಿಗೆಯ ನಂತರ ಆಸ್ಟ್ರಾಜೆನೆಕಾ ಕಂಪನಿಯು, ಕೋವಿಶೀಲ್ಡ್‌ನಿಂದ ಅಪರೂಪಕ್ಕೆ ಟಿಟಿಎಸ್‌ ಅಡ್ಡಪರಿಣಾಮ ಉಂಟಾಗುತ್ತದೆ ಎಂದು ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಆದರೆ 51 ಅರ್ಜಿದಾರರಲ್ಲಿ
ಎಲ್ಲರಿಗೂ ಲಸಿಕೆಯ ಕಾರಣದಿಂದಲೇ ಟಿಟಿಎಸ್‌ ತಲೆದೋರಿದೆ ಎಂದು ಹೇಳಲಾಗದು. ಅದನ್ನು ಪರಿಶೀಲಿಸಿ ಪರಿಹಾರ ಒದಗಿಸಬಹುದು ಎಂದು ಕಂಪನಿಯ ವಕೀಲರು ಹೇಳಿದ್ದಾರೆ. ಈಗ ಪ್ರಕರಣವು ಲಂಡನ್‌ ಹೈಕೋರ್ಟ್‌ಗೆ ಹೋಗಿದೆ. ಕಾನೂನು ಪ್ರಕ್ರಿಯೆ ಏನೇ ಇರಲಿ, ಕೋವಿಶೀಲ್ಡ್‌ ಲಸಿಕೆ ಪಡೆದುಕೊಂಡವರಲ್ಲಿ ರಕ್ತಹೆಪ್ಪುಗಟ್ಟುವಿಕೆಯಂತಹ ಮಾರಣಾಂತಿಕ ಅಡ್ಡಪರಿಣಾಮ ಉಂಟಾಗುತ್ತದೆ ಎಂಬುದಂತೂ ಸಾಬೀತಾಗಿದೆ.

ಕೋವಿಡ್‌ ತೀವ್ರವಾಗಿದ್ದ ಸಂದರ್ಭದಲ್ಲಿ ಕೋಟ್ಯಂತರ ಭಾರತೀಯರಿಗೆ ಕೊವಿಶೀಲ್ಡ್‌ ನೀಡಲಾಗಿದೆ. ಕೋವಿಶೀಲ್ಡ್‌ನ ಈ ಅಡ್ಡಪರಿಣಾಮಗಳಿಂದ ಜನರನ್ನು ರಕ್ಷಿಸುವ ಸಂಬಂಧ ಕೇಂದ್ರ ಸರ್ಕಾರವು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು
ಸೌರವ್ ಭಾರದ್ವಾಜ್‌, ದೆಹಲಿ ಆರೋಗ್ಯ ಸಚಿವ
ಕೇಂದ್ರ ಸರ್ಕಾರವು ಕೋವಿಶೀಲ್ಡ್‌ ತಯಾರಕರಿಂದ ಕಮಿಷನ್‌ ಪಡೆದುಕೊಂಡಿತ್ತು. ಹೀಗಾಗಿಯೇ ಅಪಾಯಕಾರಿ ಎಂದು ಗೊತ್ತಿದ್ದರೂ ದೇಶದ ಜನರಿಗೆ ಬಲವಂತವಾಗಿ ಲಸಿಕೆ ನೀಡಿತು. ಈ ಕಾರಣದಿಂದಲೇ ಜನರು ಸಾಯುತ್ತಿದ್ದಾರೆ
ಡಿಂಪಲ್‌ ಯಾದವ್, ಮೈನ್‌ಪುರಿ ಲೋಕಸಭಾ ಕ್ಷೇತ್ರದ ಎಸ್‌ಪಿ ಅಭ್ಯರ್ಥಿ

ಹಠಾತ್ ಕುಸಿದುಬಿದ್ದು ಸಾವು...

ಹಠಾತ್ ಕುಸಿದುಬಿದ್ದು ಮೃತಪಡುವವರ ಸಂಖ್ಯೆ ಕೋವಿಡ್‌ ಸಾಂಂಕ್ರಾಮಿಕದ ನಂತರ ಭಾರತದಲ್ಲಿ ಬಹಳ ಏರಿಕೆಯಾಗಿದೆ. ಕಾಲೇಜು ವಿದ್ಯಾರ್ಥಿಗಳು, ಯುವಕರು, ಮಧ್ಯವಯಸ್ಕರಲ್ಲಿ ಇಂತಹ ಸಾವು ಹೆಚ್ಚು ಸಂಭವಿಸಿವೆ. ಕೋವಿಡ್‌ ಲಸಿಕೆಯ ಕಾರಣದಿಂದಲೇ ಇಂತಹ ಸಾವುಗಳು ಹೆಚ್ಚಾಗುತ್ತಿವೆ ಎಂದು ದೇಶದ ಹಲವು ವೈದ್ಯರು, ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು.

ಕೋವಿಡ್‌ ಲಸಿಕೆಗಳ ಅಡ್ಡಪರಿಣಾಮಗಳನ್ನು ಪರಿಶೀಲಿಸದೆಯೇ ಲಸಿಕೆಗಳನ್ನು ಜನರಿಗೆ ನೀಡಲಾಗುತ್ತಿದೆ. ಇದರಿಂದಲೇ ಹಲವರು ಮೃತಪಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳೂ ಆರೋಪಿಸಿದ್ದವು. ಕೋವಿಶೀಲ್ಡ್‌ ಲಸಿಕೆ ಪಡೆದುಕೊಂಡ ತಮಿಳುನಾಡಿನ ವ್ಯಕ್ತಿಯೊಬ್ಬರ ಮಿದುಳಿನಲ್ಲಿ ರಕ್ತಹೆಪ್ಪುಗಟ್ಟಿ, ಶಾಶ್ವತ ಆರೋಗ್ಯದ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆ ಕುಟುಂಬದ ವಿರುದ್ಧ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ–ಎಸ್‌ಐಐ ಕಂಪನಿಯು ಮಾನಹಾನಿ ಪ್ರಕರಣ ದಾಖಲಿಸಿತ್ತು. 

ಕೇಂದ್ರ ಸರ್ಕಾರವೂ ಇಂತಹ ಅಡ್ಡಪರಿಣಾಮದ ಸಾಧ್ಯತೆಯನ್ನು ನಿರಾಕರಿಸಿತ್ತು. ಕೋವಿಡ್‌ ಲಸಿಕೆ
ಕಾರ್ಯಕ್ರಮವನ್ನು ವಿಫಲಗೊಳಿಸಲು ವಿರೋಧ ‍ಪಕ್ಷಗಳು ಸಂಚುಹೂಡುತ್ತಿವೆ ಎಂದು ಆರೋಪಿಸಿತ್ತು. ಆದರೆ ಆ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಕಂಪನಿಯೇ ಅಂತಹ ಅಡ್ಡಪರಿಣಾಮ ನಿಜ ಎಂದು ಒಪ್ಪಿಕೊಂಡಿದೆ. ಲಸಿಕೆಯಅಡ್ಡಪರಿಣಾಮಗಳಿಗೆ ಒಳಗಾದವರನ್ನು ಸರ್ಕಾರ ಹೇಗೆ ರಕ್ಷಿಸುತ್ತದೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.

ಕೋಟ್ಯಂತರ ಭಾರತೀಯರಿಗೆ ಕೋವಿಶೀಲ್ಡ್‌

ಆಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಯನ್ನು ತಯಾರಿಸಿ, ವಿತರಿಸುವ ಪ್ರಧಾನ ಗುತ್ತಿಗೆ ಪಡೆದುಕೊಂಡಿದ್ದದ್ದು ಪುಣೆಯ ಎಸ್ಐಐ. ಭಾರತದಲ್ಲಿ ಈವರೆಗೆ ಒಟ್ಟು 200 ಕೋಟಿ ಡೋಸ್‌ಗಳಷ್ಟು ಕೋವಿಡ್‌ ಲಸಿಕೆಗಳನ್ನು ನೀಡಲಾಗಿದೆ. ಅದರಲ್ಲಿ 176 ಕೋಟಿ ಡೋಸ್‌ಗಳು ಕೋವಿಶೀಲ್ಡ್‌ನದ್ದು.

ಟಿಟಿಎಸ್‌ ಎಂದರೆ...

ತ್ರಾಂಬೋಸಿನ್‌ ವಿತ್‌ ತ್ರಾಂಬೋಸೈಟೊಪೀನಿಯಾ ಸಿಂಡ್ರೋಮ್ ಎನ್ನುವುದು ಟಿಟಿಎಸ್‌ನ ವಿಸ್ತೃತ ರೂಪ. ತ್ರಾಂಬೋಸಿನ್‌ ಎಂದರೆ, ರಕ್ತ ಹೆಪ್ಪುಗಟ್ಟುವಿಕೆ ಎಂದರ್ಥ. ತ್ರಾಂಬೋಸೈಟೊಪೀನಿಯಾ ಎಂದರೆ, ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆಯು ಕಡಿಮೆಯಾಗುವುದು ಎಂದರ್ಥ. ಹೀಗೆ ರಕ್ತವು ಹೆಪ್ಪುಗಟ್ಟುವ ಜೊತೆಗೆ ಪ್ಲೇಟ್‌ಲೆಟ್‌ ಸಂಖ್ಯೆಯೂ ಕಡಿಮೆಯಾಗುವುದೇ ಟಿಟಿಎಸ್‌. ಲಸಿಕೆ ತೆಗೆದುಕೊಳ್ಳದಿದ್ದರೂ ಮನುಷ್ಯನಲ್ಲಿ ಈ ಸ್ಥಿತಿ ತಲೆದೋರುತ್ತದೆ. ಆದರೆ, ಲಸಿಕೆ ಪಡೆದ ನಂತರ ಲಸಿಕೆಯ ಅಡ್ಡ ಪರಿಣಾಮವಾಗಿ ಕಾಣಿಸಿಕೊಳ್ಳುವುದನ್ನು ‘ವ್ಯಾಕ್ಸಿನ್‌ ಇನ್‌ಡ್ಯೂಸ್ಡ್‌ ಪ್ರೊತ್ರೊಂಬೊಟಿಕ್‌ ಇಮ್ಯೂನ್‌ ತ್ರಾಂಬೊಸೈಟೊಪೀನಿಯಾ (ವಿಐಪಿಐಟಿ) ಅಥವಾ ‘ವ್ಯಾಕ್ಸಿನ್‌ ಇನ್‌ಡ್ಯೂಸ್ಡ್‌ ತ್ರೊಂಬೊಟಿಕ್‌ ತ್ರಾಂಬೋಸೈಟೊಪೀನಿಯಾ (ವಿಐಟಿಟಿ) ಎನ್ನುತ್ತಾರೆ. ರೋಗವು ಹೇಗೆ ಬಂತು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಈ ವರ್ಗೀಕರಣ ಮಾಡಲಾಗಿದೆಯಷ್ಟೆ. ರೋಗಲಕ್ಷಣ ಮತ್ತು ಪರಿಣಾಮಗಳು ಮೂರರದ್ದೂ ಒಂದೇ

ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟುತ್ತದೆ

 • ತೀವ್ರತರವಾದ ನೋವು ಮತ್ತು ಊತ, ಎದೆನೋವು, ದೇಹದ ಒಂದು ಪಾರ್ಶ್ವದಲ್ಲಿ ಮರಗಟ್ಟುವುದು ಮತ್ತು ಬಲಹೀನತೆಯ ಅನುಭವ, ಸ್ಥಿರವಾಗಿರದ ಮನಸ್ಸು– ಇವು ರೋಗಲಕ್ಷಣಗಳು

 • ದೇಹಚಲನೆಯು ತ್ರಾಸದಾಯಕವಾಗುವುದು, ಆನುವಂಶಿಕ ರೋಗಗಳು ಉಲ್ಬಣ, ತೂಕ ಹೆಚ್ಚುವುದು,
  ಗರ್ಭಧಾರಣೆಯಲ್ಲಿ ತೊಂದರೆ, ಕ್ಯಾನ್ಸರ್‌

 • ಹಾರ್ಮೋನ್‌ಗಳು ಉತ್ಪತ್ತಿ ಕುಂಠಿತ, ಆಗ ಬಾಹ್ಯವಾಗಿ ಹಾರ್ಮೋನ್‌ಗಳನ್ನು
  ನೀಡುವಂತಾಗಬಹುದು

 • ದೇಹದ ಪ್ರತಿಕಾಯಗಳನ್ನು ದುರ್ಬಲಗೊಳಿಸುವಂಥ ರೋಗಗಳು ಕಾಣಿಸಿಕೊಳ್ಳುತ್ತವೆ, ಉದಾ: ಸಕ್ಕರೆ ಕಾಯಿಲೆ. ಇವು ಟಿಟಿಎಸ್‌ನ ಅಪಾಯಗಳು

 • ಎಂಆರ್‌ಐ ಮತ್ತು ಸಿ.ಟಿ. ಸ್ಕ್ಯಾನ್‌ಗಳ ಮೂಲಕ ರಕ್ತಹೆಪ್ಪುಗಟ್ಟಿರುವುದನ್ನು ಪತ್ತೆ ಹಚ್ಚಬಹುದು

ಪ್ಲೇಟ್‌ಲೆಟ್‌ ಸಂಖ್ಯೆ ಕಡಿಮೆಯಾಗುವುದು

 • ಒಂದು ಮೈಕ್ರೊಲೀಟರ್‌ ನಲ್ಲಿ 1.5 ಲಕ್ಷದಿಂದ 4.5 ಲಕ್ಷದವರೆಗೂ ಪ್ಲೇಟ್‌ಲೆಟ್‌ ಸಂಖ್ಯೆ ಇರಬೇಕು

 • ಟಿಟಿಎಸ್‌ ತಲೆದೋರಿದಾಗ ಮನುಷ್ಯನೊಬ್ಬನಲ್ಲಿ 1.5 ಲಕ್ಷಕ್ಕಿಂತ ಕಡಿಮೆ ಸಂಖ್ಯೆಯ ಪ್ಲೇಟ್‌ಲೆಟ್‌ ಇರುತ್ತವೆ

 • ಒಂದು ವೇಳೆ 10 ಸಾವಿರಕ್ಕಿಂತ ಕಡಿಮೆ ಸಂಖ್ಯೆಯ ಪ್ಲೇಟ್‌ಲೆಟ್‌ ಇದ್ದರೆ, ಇದು ಅಪಾಯಕಾರಿ ಸ್ಥಿತಿ. ಆಂತರಿಕ ರಕ್ತಸ್ರಾವವಾಗುವ ಸಂಭವ ಇರುತ್ತದೆ.ವಿರಳ ಸಂದರ್ಭಗಳಲ್ಲಿ ಮಿದುಳಿನಲ್ಲಿಯೂ
  ರಕ್ತಸ್ರಾವವಾಗಬಹುದು

 • ಪಿಎಫ್‌4 ಎಲಿಸಾ ಪರೀಕ್ಷೆಯು ಪೇಟ್‌ಲೆಟ್ಸ್‌ ಸಂಖ್ಯೆಯನ್ನು ಪತ್ತೆಹಚ್ಚುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT