ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿಗೆ ಆಂಧ್ರದಲ್ಲಿ ಸ್ವಾಗತ, ತೆಲಂಗಾಣದಲ್ಲಿ ತಿರಸ್ಕಾರ

Last Updated 12 ನವೆಂಬರ್ 2022, 16:01 IST
ಅಕ್ಷರ ಗಾತ್ರ

ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಎಸ್‌ಆರ್‌ಪಿ ವಿಶಾಖಪಟ್ಟಣದಲ್ಲಿ ಶನಿವಾರ ಬೆಳಿಗ್ಗೆ ಭವ್ಯ ಸ್ವಾಗತ ಕೋರಿತ್ತು. ಅಪರಾಹ್ನ ತೆಲಂಗಾಣಕ್ಕೆ ಬಂದ ಮೋದಿ ಅವರನ್ನು ‘ತೆಲಂಗಾಣಕ್ಕೆ ಪ್ರವೇಶವಿಲ್ಲ’ ಎಂಬ ಬ್ಯಾನರ್‌ಗಳು ಎದುರಾದವು. ಹೈದರಾಬಾದ್‌ನಲ್ಲಿ ಬಿಆರ್‌ಎಸ್‌ (ಈ ಹಿಂದಿನ ಟಿಆರ್‌ಎಸ್‌) ಮೋದಿ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.

ತೆಲುಗು ಭಾಷಿಕ ಎರಡು ರಾಜ್ಯಗಳಲ್ಲಿ ದೊರೆತ ಭಿನ್ನ ಪ್ರತಿಕ್ರಿಯೆಗಳು ರಾಜಕೀಯ ಸಮೀಕರಣವನ್ನು ಬಿಂಬಿಸುತ್ತಿವೆ. ಈ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಮೋದಿ ಯಾವ ರೀತಿ ಸಂಬಂಧ ಹೊಂದಿದ್ದಾರೆ ಎಂಬುದನ್ನೂ ಹೇಳುತ್ತಿವೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರು ವಿಶಾಖಪಟ್ಟಣದ ಆಂಧ್ರ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರನ್ನು ಹಾಡಿ ಹೊಗಳಿದರು. ದಯಾಪರ, ಉದಾರಿ ಮುಂತಾದ ಪದಗಳಿಂದ ಬಣ್ಣಿಸಿದರು. ರಾಜ್ಯಕ್ಕೆ ಇನ್ನಷ್ಟು ಯೋಜನೆಗಳು ಮತ್ತು ಹೆಚ್ಚುವರಿ ಅನುದಾನ ಒದಗಿಸುವಂತೆ ಕೋರಿದರು.

ಮೋದಿ ಅವರನ್ನು ದೆಹಲಿಯಲ್ಲಿ ಆಗಾಗ ಭೇಟಿಯಾಗುತ್ತಿರುವ ಜಗನ್‌ ಅವರು, ಮೋದಿ ಜೊತೆಗಿನ ತಮ್ಮ ಸಂಬಂಧ ರಾಜಕೀಯವನ್ನು ಮೀರಿದ್ದು ಎಂದರು.

ಶುಕ್ರವಾರ ಸಂಜೆ ಬಂದ ಮೋದಿ ಅವರನ್ನು ಜಗನ್‌ ಅವರು ವಿಮಾನ ನಿಲ್ದಾಣದಲ್ಲಿಯೇ ಬರಮಾಡಿಕೊಂಡಿದ್ದರು. ಆಂಧ್ರ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ವೈಎಸ್‌ಆರ್‌‍ಪಿ ಆಯೋಜಿಸಿದೆ. ವೈಎಸ್‌ಆರ್‌ಪಿ ಸಂಸದೀಯ ಪಕ್ಷದ ನಾಯಕ ವಿಜಯಸಾಯಿ ರೆಡ್ಡಿ ಅವರೇ ಉಸ್ತುವಾರಿ ನೋಡಿಕೊಂಡಿದ್ದರು.

ಆದರೆ, ಹೈದರಾಬಾದ್‌ನಲ್ಲಿ ಎಂದಿನಂತೆ ತಿರಸ್ಕಾರವೇ ಮೋದಿ ಅವರನ್ನು ಎದುರುಗೊಂಡಿತ್ತು. ಪ್ರಧಾನಿಯನ್ನು ಬರಮಾಡಿಕೊಳ್ಳಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್‌) ಅವರು ಹೋಗಲಿಲ್ಲ. ಬದಲಿಗೆ, ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್‌ ಅವರನ್ನು ಕಳುಹಿಸಿದ್ದರು. ಪ್ರಧಾನಿಯನ್ನು ಬರಮಾಡಿಕೊಳ್ಳಲು ಕೆಸಿಆರ್‌ ಹೋಗದೇ ಇರುವುದು ಈ ವರ್ಷದಲ್ಲಿ ಇದು ನಾಲ್ಕನೇ ಬಾರಿ.

‘ಬೈ ಬೈ ಮೋದಿ’ ಎಂಬ ಫ್ಲೆಕ್ಸ್‌ಗಳೂ ಹೈದರಾಬಾದ್‌ನ ಬೀದಿಗಳಲ್ಲಿ ಕಾಣಿಸಿವೆ. ‘ನನಗೆ 50 ದಿನಗಳನ್ನು ಕೊಡಿ. ನಾನು ಹೇಳಿದ್ದು ತಪ್ಪಾದರೆ ನನ್ನನ್ನು ಜೀವಂತ ಸುಟ್ಟುಬಿಡಿ’ ಎಂದು 2016ರ ನವೆಂಬರ್‌ನಲ್ಲಿ ಮೋದಿ ಹೇಳಿದ್ದನ್ನು ನೆನಪಿಸುವ ಫ್ಲೆಕ್ಸ್‌ಗಳೂ ಇದ್ದವು.

‘ಈಗ 2,195 ದಿನಗಳಾಗಿವೆ. ಹಾಗಿದ್ದರೂ ಯಾವ ಸುಧಾರಣೆಯೂ ಆಗಿಲ್ಲ ಮೋದಿಯವರೇ’ ಎಂದು ಒಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ. ಮೋದಿ, ಅಮಾನ್ಯ ಮಾಡಲಾದ ₹1,000 ಮುಖಬೆಲೆಯ ನೋಟು, ಪೆಟ್ರೋಲ್‌ ಕ್ಯಾನ್‌ ಮತ್ತು ಉರಿಯುತ್ತಿರುವ ಬೆಂಕಿ ಕಡ್ಡಿಯ ಚಿತ್ರವೂ ಈ ಬ್ಯಾನರ್‌ನಲ್ಲಿ ಇದೆ.

‘ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ತೆಲಂಗಾಣಕ್ಕೆ ಬಂದ ಪ್ರಧಾನಿಯನ್ನು ಈ ರೀತಿ ಹೀಯಾಳಿಸಿದ್ದರ ಹಿಂದೆ ಕೆಸಿಆರ್‌ ಅವರ ಕೈವಾಡ ಇದೆ’ ಎಂದು ತೆಲಂಗಾಣ ಬಿಜೆಪಿ ಆರೋಪಿಸಿದೆ.

ಬೇಗಂಪೇಟೆಯಲ್ಲಿ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ ಅವರು ‘ಸಾರ್ವಜನಿಕರಿಗೆ ಕೊಡಲು ಏನೂ ಇಲ್ಲದವರು ನನ್ನನ್ನು ಮೂದಲಿಸುತ್ತಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಇಲ್ಲಿ ಬೇಗದಲ್ಲಿಯೇ ಕಮಲ ಅರಳಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT