ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಪ್ರಧಾನಿ ಮೋದಿ ‘ಬಾಬ್ರಿ ಲಾಕ್’ ಹೇಳಿಕೆ ಸುಳ್ಳು: ಪ್ರಿಯಾಂಕಾ ಗಾಂಧಿ

Published 9 ಮೇ 2024, 13:37 IST
Last Updated 9 ಮೇ 2024, 13:37 IST
ಅಕ್ಷರ ಗಾತ್ರ

ರಾಯ್‌ಬರೇಲಿ (ಉತ್ತರ ಪ್ರದೇಶ): ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಯೋಧ್ಯೆ ರಾಮಮಂದಿರಕ್ಕೆ ‘ಬಾಬ್ರಿ ಲಾಕ್’ ಹಾಕಲಿದೆ ಎಂಬ ಪ್ರಧಾನಿ ಹೇಳಿಕೆ ‘ಸಂಪೂರ್ಣ ಸುಳ್ಳು’ ಎಂದು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷವು ಕಾಶ್ಮೀರದಲ್ಲಿ 370ನೇ ವಿಧಿ ಮತ್ತೆ ಜಾರಿಗೆ ತರದಿರಲು ಹಾಗೂ ಅಯೋಧ್ಯೆ ರಾಮಮಂದಿರಕ್ಕೆ ‘ಬಾಬ್ರಿ ಬೀಗ’ ಹಾಕದಿರಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ 400 ಸ್ಥಾನಗಳು ಬೇಕು’ ಎಂದು ಮೋದಿ ಅವರು ಮಧ್ಯಪ್ರದೇಶದ ಧಾರ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಈಚೆಗೆ ಹೇಳಿದ್ದರು. 

‘ಇದು ಸಂಪೂರ್ಣ ಸುಳ್ಳು. ರಾಮಮಂದಿರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪನ್ನು ಗೌರವಿಸುವುದಾಗಿ ಕಾಂಗ್ರೆಸ್‌ ಪಕ್ಷವು ಹಲವು ಸಲ ಹೇಳಿದೆ. ನ್ಯಾಯಾಲಯದ ತೀರ್ಪನ್ನು ಈ ಹಿಂದೆಯೂ ಗೌರವಿಸಿದ್ದೆವು, ಮುಂದೆಯೂ ಗೌರವಿಸುವೆವು’ ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ರಾಹುಲ್‌ ಗಾಂಧಿ ಅವರು ತಮ್ಮ ಪ್ರತಿ ಭಾಷಣದಲ್ಲೂ ಅದಾನಿ ಮತ್ತು ಅಂಬಾನಿ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಮೋದಿ ಅವರು ಒತ್ತಡಕ್ಕೆ ಒಳಗಾಗಿ ಅದಾನಿ, ಅಂಬಾನಿ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ’ ಎಂದು ತಿರುಗೇಟು ನೀಡಿದರು.

ಪ್ರಣಾಳಿಕೆ ಓದಲಿ: ‘ಪ್ರಧಾನಿ ಮೋದಿ ಅವರು ನನಗಿಂತ ಹಿರಿಯರಾಗಿದ್ದರೂ, ಕಾಂಗ್ರೆಸ್‌ ಪ್ರಣಾಳಿಕೆ ಓದುವಂತೆ ಅವರಿಗೆ ಸಲಹೆ ನೀಡುತ್ತೇನೆ. ಆ ಬಳಿಕ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಲಿ. ಆದರೆ ಅವರು ಪ್ರಣಾಳಿಕೆ ಓದಿಲ್ಲ. ಅವರ ಮನಸ್ಸಿಗೆ ಬಂದದ್ದೆಲ್ಲಾ ಪ್ರಣಾಳಿಕೆಯಲ್ಲಿ ಇದೆ ಎನ್ನುತ್ತಿದ್ದಾರೆ. ಅವರು ಪ್ರಣಾಳಿಕೆಯಲ್ಲಿ ಇದೆ ಎಂದು ಹೇಳುತ್ತಿರುವ ಎಲ್ಲವೂ ವಾಸ್ತವವಾಗಿ ಪ್ರಣಾಳಿಕೆಯಲ್ಲಿ ಇಲ್ಲ’ ಎಂದರು.

‘ಮೋದಿ ಸರ್ಕಾರದ ಎಲ್ಲ ನೀತಿಗಳು ಶ್ರೀಮಂತರಿಗೆ ನೆರವಾಗಲು ರೂಪಿಸಲಾಗಿದೆ. ಬಡವರ ಬದುಕಿನ ಸಂಕಷ್ಟವನ್ನರಿತು ರೂಪಿಸಿರುವ ಒಂದೇ ಒಂದು ನೀತಿ ಇಂದು ದೇಶದಲ್ಲಿಲ್ಲ’ ಎಂದು ಟೀಕಿಸಿದರು.

‘10 ವರ್ಷಗಳಲ್ಲಿ ಹಲವು ಯೋಜನೆಗಳು ಅದಾನಿಗೆ’

ಹೈದರಾಬಾದ್: ಮೋದಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ಬಂದರು ವಿಮಾನ ನಿಲ್ದಾಣ ಮತ್ತು ರಕ್ಷಣಾ ಒಪ್ಪಂದಗಳಂತಹ ಹಲವಾರು ಯೋಜನೆಗಳನ್ನು ‘ಅದಾನಿಗೆ ನೀಡಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.

ರಾಹುಲ್‌ ಅವರು ಅದಾನಿ ಮತ್ತು ಅಂಬಾನಿ ಬಗ್ಗೆ ಈಗ ಮಾತನಾಡುತ್ತಿಲ್ಲ ಎಂಬ ಪ್ರಧಾನಿ ಹೇಳಿಕೆಗೆ ತೆಲಂಗಾಣದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಅವರು ತಿರುಗೇಟು ನೀಡಿದರು. ‘ಪ್ರಧಾನಿ ಮೋದಿ ಅವರು ಇಡೀ ದೇಶದಲ್ಲಿ 20 ರಿಂದ 22 ಶ್ರೀಮಂತರ ಪರವಾಗಿ ಕೆಲಸ ಮಾಡಿ ಅವರನ್ನು ಶತಕೋಟ್ಯಧಿಪತಿಗಳನ್ನಾಗಿ ಮಾಡಿದ್ದಾರೆ. ಮೀಸಲಾತಿ ರದ್ದುಗೊಳಿಸಲು ಹಲವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದರು’ ಎಂದು ದೂರಿದರು. ‘ಬಿಜೆಪಿಯು ಮೀಸಲಾತಿ ರದ್ದುಗೊಳಿಸಲು ಪ್ರಯತ್ನಿಸುತ್ತಿದ್ದರೆ ಕಾಂಗ್ರೆಸ್‌ ಪಕ್ಷವು ಎಸ್‌ಸಿ ಎಸ್‌ಟಿ ಹಿಂದುಳಿದ ವರ್ಗಗಳ ಮೀಸಲಾತಿಯ ಶೇ 50ರ ಮಿತಿಯನ್ನು ಹೆಚ್ಚಿಸಲು ಬಯಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT