ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಪಕ್ಷಗಳಿಗೆ ಅನಾಮಧೇಯ ಮೂಲಗಳಿಂದ ದೇಣಿಗೆ; ಚುನಾವಣಾ ಬಾಂಡ್ ಪಾಲು ಶೇ 82!

Published 8 ಮಾರ್ಚ್ 2024, 1:27 IST
Last Updated 8 ಮಾರ್ಚ್ 2024, 1:27 IST
ಅಕ್ಷರ ಗಾತ್ರ

ನವದೆಹಲಿ: ‌ರಾಜಕೀಯ ಪಕ್ಷಗಳು 2022-23ರಲ್ಲಿ ಅನಾಮಧೇಯ ಮೂಲಗಳಿಂದ ಪಡೆದ ದೇಣಿಗೆಯಲ್ಲಿ ಶೇ 82.42 ರಷ್ಟು ಕೂಡಾ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಸಂಸ್ಥೆ ತಿಳಿಸಿದೆ.

ರಾಷ್ಟ್ರೀಯ ಪಕ್ಷಗಳ ಲೆಕ್ಕಪರಿಶೋಧನೆ ವರದಿಗಳು ಮತ್ತು ದೇಣಿಗೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯನ್ನು ವಿಶ್ಲೇಷಿಸಿದಾಗ ಈ ಅಂಶ ಬಹಿರಂಗವಾಗಿದೆ ಎಂದು ಹೇಳಿದೆ.

2022–23ರಲ್ಲಿ ರಾಷ್ಟ್ರೀಯ ಪಕ್ಷಗಳು ಒಟ್ಟು ₹1,832.88 ಕೋಟಿ ದೇಣಿಗೆಯನ್ನು ಅನಾಮಧೇಯ ಮೂಲಗಳಿಂದ ಪಡೆದಿವೆ. ಅದರಲ್ಲಿ ₹1,510 ಕೋಟಿ ಆಂದರೆ ಶೇ 82.42 ರಷ್ಟು ಮೊತ್ತ, ಚುನಾವಣಾ ಬಾಂಡ್‌ಗಳಿಂದ ಬಂದಿವೆ.

ಆರು ರಾಷ್ಟ್ರೀಯ ಪಕ್ಷಗಳಾದ –ಬಿಜೆಪಿ, ಕಾಂಗ್ರೆಸ್, ಸಿಪಿಎಂ, ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ), ಎಎಪಿ ಮತ್ತು ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯನ್ನು (ಎನ್‌ಪಿಇಪಿ), ಎಡಿಆರ್‌ ಈ ಅಧ್ಯಯನಕ್ಕೆ ಬಳಸಿಕೊಂಡಿದೆ. ಈ ಆರು ಪಕ್ಷಗಳು 2022–23ರ ಹಣಕಾಸು ವರ್ಷದಲ್ಲಿ ಒಟ್ಟು ₹3,076 ಕೋಟಿ ಮೊತ್ತ ಸಂಗ್ರಹಿಸಿದೆ.  

ಕೂಪನ್‌ಗಳ ಮಾರಾಟದಿಂದ ₹136.79 ಕೋಟಿ ಮೊತ್ತ ಸಂಗ್ರಹಿಸಿರುವುದಾಗಿ ಕಾಂಗ್ರೆಸ್‌ ಮತ್ತು ಸಿಪಿಎಂ ಜಂಟಿಯಾಗಿ ಘೋಷಿಸಿವೆ. ಅನಾಮಧೇಯ ಮೂಲಗಳಿಂದ ಬಂದ ಮೊತ್ತದಲ್ಲಿ ಇದರ ಪಾಲು ಶೇ 7.46 ಆಗಿದೆ. 

ಅನಾಮಧೇಯ ಮೂಲಗಳಿಂದ ಯಾವುದೇ ದೇಣಿಗೆ ಸಂಗ್ರಹಿಸಿಲ್ಲ ಎಂದು ಬಿಎಸ್‌ಪಿ ಹೇಳಿದೆ. 2022–23ರಲ್ಲಿ ಒಟ್ಟು ₹ 29.27 ಕೋಟಿ ಸಂಗ್ರಹಿಸಿರುವುದಾಗಿ ಚುನಾವಣಾ ಅಯೋಗಕ್ಕೆ ಮಾಹಿತಿ ನೀಡಿದೆ. ಇದರಲ್ಲಿ ಬಹುಪಾಲು ಮೊತ್ತ ಬ್ಯಾಂಕ್‌ ಬಡ್ಡಿ (₹ 15.05 ಕೋಟಿ) ಮತ್ತು ಸದಸ್ಯತ್ವ ಶುಲ್ಕದಿಂದ (₹ 13.73 ಕೋಟಿ) ಬಂದಿದೆ.

ರಾಜಕೀಯ ಪಕ್ಷಗಳು ವ್ಯಕ್ತಿ ಅಥವಾ ಸಂಸ್ಥೆಯಿಂದ ₹ 20,000 ಕ್ಕಿಂತ ಕಡಿಮೆ ಪ್ರಮಾಣದ ದೇಣಿಗೆಯನ್ನು ಸಂಗ್ರಹಿಸಿದರೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುವ ಅವಶ್ಯಕತೆ ಇಲ್ಲ. ರಾಷ್ಟ್ರೀಯ ಪಕ್ಷಗಳು ಈ ರೀತಿ ಒಟ್ಟು ₹ 183.28 ಕೋಟಿ ದೇಣಿಗೆ ಪಡೆದಿವೆ. ಅನಾಮಧೇಯ ಮೂಲಗಳಿಂದ ಬಂದ ಮೊತ್ತದಲ್ಲಿ ಇದರ ಪಾಲು ಶೇ 10 ಆಗಿದೆ.

ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

ನವದೆಹಲಿ: ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲು ಮತ್ತಷ್ಟು ಸಮಯ ಕೇಳಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ವಿರುದ್ಧ ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಸಲ್ಲಿಸಲು ನಿಗದಿ ಮಾಡಲಾಗಿರುವ ಗಡುವನ್ನು ಎಸ್‌ಬಿಐ ಉದ್ದೇಶಪೂರ್ವಕ
ವಾಗಿ ಉಲ್ಲಂಘನೆ ಮಾಡುತ್ತಿದೆ ಎಂದು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಎಡಿಆರ್‌ ಹೇಳಿದೆ.

‘ಎಡಿಆರ್‌ ಸಲ್ಲಿಸಿರುವ ಅರ್ಜಿ ಕುರಿತು ಇ–ಮೇಲ್‌ ಕಳುಹಿಸಿ. ಈ ಅರ್ಜಿಯನ್ನು ವಿಚಾರಣಾ ಪಟ್ಟಿಗೆ ಸೇರಿಸಲಾಗುವುದು’ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು ವಕೀಲ ಪ್ರಶಾಂತ್‌ ಭೂಷಣ್‌ ಅವರಿಗೆ ತಿಳಿಸಿದೆ.

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಸಲ್ಲಿಸಲು ಜೂನ್‌ 30ರವರೆಗೆ ಸಮಯ ನೀಡುವಂತೆ ಕೋರಿ ಎಸ್‌ಬಿಐ ಸೋಮವಾರವಷ್ಟೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಎಡಿಆರ್‌ ವಾದವೇನು?

‘ಚುನಾವಣಾ ಬಾಂಡ್‌ಗಳ ಖರೀದಿ ಮತ್ತು ನಗದೀಕರಣಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಒದಗಿಸಲು ಮಾರ್ಚ್‌ 6ರ ಗಡುವನ್ನು ನೀಡಲಾಗಿತ್ತು. ಆದರೆ, ಗಡುವು ಮುಗಿಯಲು ಎರಡು ದಿನಗಳು ಬಾಕಿ ಇರುವಾಗ ಜೂನ್‌ 30ರವರೆಗೆ ಸಮಯಾವಕಾಶ ನೀಡುವಂತೆ ಕೋರಿ ಎಸ್‌ಬಿಐ ಉದ್ದೇಶಪೂರ್ವಕವಾಗಿ ಅರ್ಜಿ ಸಲ್ಲಿಸಿದೆ’ ಎಂದು ಎಡಿಆರ್‌ ದೂರಿದೆ.

‘ದಾನಿಗಳ ಹಾಗೂ ದೇಣಿಗೆ ಮೊತ್ತ ಕುರಿತ ವಿವರಗಳು ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನ ಬಹಿರಂಗಗೊಳ್ಳದಂತೆ ನೋಡಿಕೊಳ್ಳುವ ಉದ್ದೇಶದಿಂದ ಎಸ್‌ಬಿಐ ಈ ಅರ್ಜಿ ಸಲ್ಲಿಸಿದೆ’ ಎಂದೂ ಎಡಿಆರ್‌ ಆರೋಪಿಸಿದೆ.

‘ರಾಜಕೀಯ ಪಕ್ಷಗಳು ಕಾರ್ಪೋರೇಟ್‌ ಸಂಸ್ಥೆಗಳು ಹಾಗೂ ಚುನಾವಣಾ ಬಾಂಡ್‌ಗಳ ಮೂಲಕ ಬೃಹತ್ ಮೊತ್ತದ ಹಣವನ್ನು ಸ್ವೀಕರಿಸಿವೆ. ಈ ಕುರಿತ ವಿವರಗಳನ್ನು ಪಡೆಯುವ ಹಕ್ಕನ್ನು ನಾಗರಿಕರು ಹೊಂದಿದ್ದಾರೆ. ಆದರೆ, ವಿವರಗಳನ್ನು ಬಹಿರಂಗಪಡಿಸಲು ಎಸ್‌ಬಿಐ ನಿರಾಕರಿಸುತ್ತಿದೆ. ಎಸ್‌ಬಿಐನ ಇಂತಹ ಪಾರದರ್ಶಕವಲ್ಲದ ಹಾಗೂ ಉತ್ತರದಾಯಿತ್ವರಹಿತ ನಡೆ ಖಂಡನೀಯ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

‘ಈ ವಿಚಾರವಾಗಿ ಜನರ ದನಿಯನ್ನು ಹತ್ತಿಕ್ಕುವ ಉದ್ದೇಶವಿರುವುದು ಸ್ಪಷ್ಟವಾಗುತ್ತದೆ. ಅಲ್ಲದೇ, ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಗಳ ಕುರಿತು ಲೆಕ್ಕಪರಿಶೋಧನೆ ನಡೆಸುವ ಜನರ ಹಕ್ಕನ್ನು ದಮನ ಮಾಡಿದಂತಾಗುತ್ತದೆ. ಹಾಗಾಗಿ, ಈ ವಿಷಯವನ್ನು ಗಂಭೀರವಾದ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಬೇಕು’ ಎಂದೂ ಎಡಿಆರ್‌ ಹೇಳಿದೆ.

ಚುನಾವಣಾ ಬಾಂಡ್‌ ಯೋಜನೆ ಅಸಾಂವಿಧಾನಿಕ ಎಂಬುದಾಗಿ ಫೆ.15ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಅಲ್ಲದೇ, ದಾನಿಗಳ ಹಾಗೂ ಚುನಾವಣಾ ಬಾಂಡ್‌ಗಳ ಮೂಲಕ ಹಣ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಮಾರ್ಚ್‌ 6ರ ಒಳಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್‌ಬಿಐಗೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT