ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಮಂದಿರ, ಸಿಎಎ: ಪಶ್ಚಿಮಬಂಗಾಳದಲ್ಲಿ 35 ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿ ಬಿಜೆಪಿ

Published 11 ಫೆಬ್ರುವರಿ 2024, 6:28 IST
Last Updated 11 ಫೆಬ್ರುವರಿ 2024, 6:28 IST
ಅಕ್ಷರ ಗಾತ್ರ

ಕೋಲ್ಕತ್ತ: ಭ್ರಷ್ಟಾಚಾರದ ವಿಷಯವನ್ನು ಇಟ್ಟುಕೊಂಡು ಪಶ್ಚಿಮ ಬಂಗಾಳದಲ್ಲಿ ದೊಡ್ಡ ಸಾಧನೆ ಮಾಡಲಾಗದ ಬಿಜೆಪಿ, ರಾಮಮಂದಿರ ಉದ್ಘಾಟನೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಗಳಂತಹ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ 35ರಲ್ಲಿ ಗೆಲ್ಲಲು ಪಣ ತೊಟ್ಟಿದೆ ಎಂದು ವರದಿಗಳು ತಿಳಿಸಿವೆ.

ಬಿಜೆಪಿಯ ಈ ರಾಜಕೀಯ ತಂತ್ರಕ್ಕೆ ಟಿಎಂಸಿಯು ಇಂಡಿಯಾ ಬಣದಿಂದ ಹೊರಬಂದಿರುವುದು ಮತ್ತಷ್ಟು ಬಲ ತಂದಿದೆ. ಈ ಬೆಳವಣಿಗೆ, ಟಿಎಂಸಿ ವಿರೋಧಿ ಮತಗಳನ್ನು ಒಗ್ಗೂಡಿಸುವ ನಂಬಿಕೆ ಕೊಟ್ಟಿದೆ ಎಂಬುದು ನಾಯಕರ ಅಭಿಪ್ರಾಯವಾಗಿದೆ. 2014ರಲ್ಲಿ ಶೇ.17ರಷ್ಟಿದ್ದ ಬಿಜೆಪಿ ಮತ ಗಳಿಕೆ ಪ್ರಮಾಣ 2019ರಲ್ಲಿ ಶೇ 40ಕ್ಕೆ ಏರುವ ಮೂಲಕ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು.

2021ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರಲು ವಿಫಲವಾದ ಬಿಜೆಪಿ ಬಳಿಕ ಮಮತಾ ಬ್ಯಾನರ್ಜಿ ಸರ್ಕಾರದ ಭ್ರಷ್ಟಾಚಾರದ ಲಾಭ ಪಡೆಯಲು ಯತ್ನಿಸಿತ್ತು. ಆದರೆ, ಅದು ಅಷ್ಟರಮಟ್ಟಿಗೆ ಯಶಸ್ಸು ಕಾಣಲಿಲ್ಲ. ಹೀಗಾಗಿ, ರಾಮ ಮಂದಿರ ಮತ್ತು ಸಿಎಎ ಭಾವನಾತ್ಮಕ ಅಂಶಗಳನ್ನು ಮುಂದಿಟ್ಟುಕೊಂಡು 35 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯಲ್ಲಿದೆ ಎನ್ನುತ್ತಿವೆ ವರದಿಗಳು.

‘ಲೋಕಸಭೆ ಚುನಾವಣೆಯಲ್ಲಿ ರಾಮ ಮಂದಿರ ಉದ್ಘಾಟನೆ ಮತ್ತು ಸಿಎಎ ಬಿಜೆಪಿಯ ಎರಡು ಪ್ರಮುಖ ವಿಷಯಗಳಾಗಿವೆ’ಎಂದು ರಾಜ್ಯ ಘಟಕದ ವಕ್ತಾರರಾದ ಅಗ್ನಿಮಿತ್ರ ಪೌಲ್ ಹೇಳಿದ್ದಾರೆ.

'ಈ ಎರಡೂ ವಿಷಯಗಳು ಭಾವನಾತ್ಮಕ ವಿಷಯಗಳಾಗಿದ್ದು, ಜನರು ಬೇಗ ಸ್ಪಂದಿಸುತ್ತಾರೆ’ಎಂದು ಅವರು ಒತ್ತಿ ಹೇಳಿದ್ಧಾರೆ.

ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಚುನಾವಣೆಗೂ ಮುನ್ನವೇ ಸಿಎಎ ಜಾರಿಗೆ ಅಧಿಸೂಚನೆ ಹೊರಬೀಳಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ರಾಮ ಮಂದಿರದ ಭಾವನಾತ್ಮಕ ವಿಷಯವನ್ನು ಪ್ರಸ್ತಾಪಿಸಿ ಹಿಂದೂ ಮತಗಳನ್ನು ಒಗ್ಗೂಡಿಸುತ್ತೇವೆ ಮತ್ತು ವಿಶೇಷವಾಗಿ ಮಥುವಾ ಸಮುದಾಯ ಸೇರಿ ನಿರಾಶ್ರಿತರನ್ನು ಸಿಎಎ ವಿಚಾರದಲ್ಲಿ ಮನವೊಲಿಸಲಾಗುತ್ತದೆ ಎಂದು ಸಂಸದ ಮತ್ತು ರಾಜ್ಯ ಘಟಕದ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

‘ಸಿಎಎ ಜಾರಿ ಮಾಡುವ ನಮ್ಮ ಘೋಷಣೆಯು ಹಿಂದಿನ ಚುನಾವಣೆಗಳಲ್ಲಿ ಬಹಳ ಕೆಲಸ ಮಾಡಿದೆ’ಎಂದು ಘೋಷ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT