ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗರ್ಭ ಧರಿಸಿದ್ದ ಆನೆಗೆ ಗ್ರಾಮಸ್ಥರಿಂದ ಬೆಂಕಿ: ವಿಡಿಯೊ ನೋಡಿ ಸಾರ್ವಜನಿಕರ ಕಿಡಿ

Published 19 ಆಗಸ್ಟ್ 2024, 11:23 IST
Last Updated 19 ಆಗಸ್ಟ್ 2024, 11:23 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಝಾರ್ಗ್ರಾಮ್‌ನಲ್ಲಿ ಗ್ರಾಮಸ್ಥರು ಹೆಣ್ಣಾನೆಯೊಂದಕ್ಕೆ ಬೆಂಕಿ ಹಚ್ಚಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಕೆಲ ನೆಟ್ಟಿಗರ ಪ್ರಕಾರ, ಆನೆಯು ಗರ್ಭ ಧರಿಸಿದೆ. ಬೆಂಕಿ ಜ್ವಾಲೆಯ ಸರಳುಗಳನ್ನು ಸಮೀಪದ ಮನೆಯಿಂದ ಅದರ ಮೇಲೆ ಎಸೆಯುತ್ತಿದ್ದು, ಗಾಯಗೊಂಡ ಹೆಣ್ಣಾನೆ ನೋವಿನಿಂದ ಒದ್ದಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ತೀವ್ರ ಸುಟ್ಟ ಗಾಯಗಳಿಂದ ನರಳಿದ ಆನೆ ರಸ್ತೆ ಮೇಲೆ ಬೀಳುತ್ತಿದ್ದಂತೆ ವಿಡಿಯೊ ಅಂತ್ಯವಾಗುತ್ತದೆ.

ಈ ಕುರಿತಂತೆ ಪ್ರತಿಕ್ರಿಯೆಗೆ ಪಶ್ಚಿಮ ಬಂಗಾಳದ ಅರಣ್ಯ ಸಚಿವ ಬಿರ್ಬಾಹಾ ಹನ್ಸಾದಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಪಿಟಿಐ ಹೇಳಿದೆ. ‘ಘಟನೆ ಕುರಿತಂತೆ ನಮಗೆ ಮಾಹಿತಿ ಸಿಕ್ಕಿದೆ. ವಿಡಿಯೊ ನೋಡಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಹಿರಿಯ ಅರಣ್ಯಾಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಬೀದಿನಾಯಿಗಳಿಗೆ ಕಿರುಕುಳ ಕುರಿತಂತೆ ಸಿನಿಮಾ ಮಾಡಿದ್ದ ನಿರ್ದೇಶಕ ತಥಾಗತ ಮುಖರ್ಜಿ, ಆನೆ ಮೇಲೆ ದೌರ್ಜನ್ಯದ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ‘ಕಾಡಾನೆಗಳ ನಿರ್ವಹಣೆಯಲ್ಲಿ ತೊಡಗಿದ್ದ ಸ್ಥಳೀಯರು ಅರಣ್ಯ ಸಚಿವರ ಕ್ಷೇತ್ರದಲ್ಲೇ ಗರ್ಭ ಧರಿಸಿದ್ದ ಆನೆಯನ್ನು ಕೊಂದು ಹಾಕಿದ್ದಾರೆ. ಈ ಬಗ್ಗೆ ಎಲ್ಲರೂ ಮೌನವಹಿಸಿದ್ದಾರೆ’ಎಂದು ಬರೆದುಕೊಂಡಿದ್ದಾರೆ.

ನಟಿ ಶ್ರೀಲೇಖಾ ಮಿತ್ರಾ ಸಹ ಈ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ನಾವು ವಿನಾಶದತ್ತ ಹೋಗುತ್ತಿದ್ದೇವೆಯೇ? ಪ್ರಾಣಿಗಳ ಮೇಲಿನ ಇಂತಹ ಹಿಂಸಾಚಾರ ಮತ್ತು ಆಕ್ರಮಣವನ್ನು ನಾನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT