ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿ ಸುದ್ದಿ ತಿಳಿದ ನಂತರವೂ ಮೋದಿ ಶೂಟಿಂಗ್ ಮುಂದುವರಿಸಿದ್ದರು- ನಿಜವೋ? ಸುಳ್ಳೋ?

Last Updated 29 ಜುಲೈ 2019, 11:56 IST
ಅಕ್ಷರ ಗಾತ್ರ

ಬೆಂಗಳೂರು: ಫೆಬ್ರುವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಸಿಆರ್‌ಪಿಎಫ್‍ನ 40 ಮಂದಿ ಯೋಧರು ಹುತಾತ್ಮರಾಗಿದ್ದರು.ದಾಳಿ ನಡೆದು ದೇಶಕ್ಕೆ ದೇಶವೇ ಶೋಕ ಸಾಗರದಲ್ಲಿ ಮುಳುಗಿರುವಾಗ ಪ್ರಧಾನಿ ನರೇಂದ್ರ ಮೋದಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಾಕ್ಷ್ಯಚಿತ್ರ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರುಎಂದು ಕಾಂಗ್ರೆಸ್ ಆರೋಪಿಸುತ್ತಿದೆ.
ಈ ಆರೋಪಕ್ಕೆಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಮೋದಿಯವರಿಗೆ ಪುಲ್ವಾಮದಲ್ಲಿ ಉಗ್ರ ದಾಳಿ ಸಂಭವಿಸಿರುವ ಸುದ್ದಿ ತಲುಪಿದ್ದೇ ತಡವಾಗಿ.ಅದು ತಿಳಿದ ಕೂಡಲೇ ಅವರು ದೆಹಲಿಗೆ ಹೊರಟು ನಿಂತಿದ್ದರು.ದಾಳಿಯ ಸಂಪೂರ್ಣ ಮಾಹಿತಿ ಸಿಗುವವರೆಗೆ ಅವರು ನೀರು, ಆಹಾರ ಸೇವಿಸಿರಲಿಲ್ಲ ಎಂದು ಹೇಳಿದೆ.

ಅಂದಹಾಗೆ ಫೆ.14ರಂದು ಮೋದಿಯವರ ದಿನಚರಿ ಹೇಗಿತ್ತು? ಅವರಿಗೆ ದಾಳಿಯ ಸುದ್ದಿ ತಲುಪಿದ್ದು ತಡವಾಗಿಯೇ? ದಾಳಿ ಸುದ್ದಿ ಲಭಿಸಿದ ನಂತರ ಮೋದಿ ಏನೆಲ್ಲಾ ಮಾಡಿದರು? ಎಂಬುದರ ಬಗ್ಗೆ ಸ್ಕ್ರಾಲ್ ಡಾಟ್ ಇನ್ ವರದಿ ಪ್ರಕಟಿಸಿದೆ.

ಪುಲ್ವಾಮದಲ್ಲಿ ದಾಳಿ ನಡೆದಿರುವುದು ತಿಳಿದ ಕೂಡಲೇ ಮೋದಿ ಆ ದಿನ ನಿಗದಿ ಪಡಿಸಿದ್ದ ರ್‍ಯಾಲಿಯನ್ನು ಮೋದಿ ರದ್ದು ಮಾಡಿದ್ದರು. ಆದರೆ ದಾಳಿ ನಡೆದ ಎರಡೇ ಗಂಟೆಗಲ್ಲಿ ಫೋನ್ ಮೂಲಕ ರಾಜಕೀಯ ಪ್ರಚಾರ ರ್‍ಯಾಲಿಯಲ್ಲಿ ಭಾಷಣ ಮಾಡಿದ್ದರು. ಈ ಭಾಷಣದಲ್ಲಿ ಅವರು ಪುಲ್ವಾಮ ದಾಳಿ ಬಗ್ಗೆ ಉಲ್ಲೇಖಿಸಲಿಲ್ಲ!

ಪುಲ್ವಾಮದಲ್ಲಿ ದಾಳಿ ನಡೆದು ಮೂರು ಗಂಟೆಯಾಗಿದ್ದರೂ ಪ್ರೈಮ್ ಟೈಮ್ ಮಿನಿಸ್ಟರ್ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಶುಕ್ರವಾರ ಟ್ವೀಟಿಸಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಶೂಟಿಂಗ್ ಬೆಳಗ್ಗೆ ನಡೆದಿತ್ತು.ರಾಹುಲ್ ಗಾಂಧಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿತ್ತು.

ನಿಜವಾಗಿಯೂ ನಡೆದದ್ದು ಏನು?
ರಾಜಕೀಯ ರ್‍ಯಾಲಿ : ನರೇಂದ್ರ ಮೋದಿ ರುದ್ರಪುರ್ ರ್‍ಯಾಲಿಯಲ್ಲಿ ಫೋನ್ ಮೂಲಕ ಜನರನ್ನುದ್ದೇಶಿಸಿ ಮಾತನಾಡಿದ್ದರು.ದೂರದರ್ಶನದಲ್ಲಿ ಪ್ರಸಾರವಾದ ಸುದ್ದಿ ಪ್ರಕಾರ ಮೋದಿ ಭಾಷಣ ಮಾಡಿದ್ದು ಸಂಜೆ ಸರಿ ಸಮಾರು 5.10ಕ್ಕೆ.ಪುಲ್ವಾಮದಲ್ಲಿ ಆತ್ಮಾಹುತಿ ದಾಳಿ ನಡೆದದ್ದು ಸಂಜೆ 3.10ಕ್ಕೆ.ಈ ಸುದ್ದಿ ಸಂಜೆ 5 ಗಂಟೆ ವೇಳೆಗೆ ಎಲ್ಲ ಸುದ್ದಿ ಮಾಧ್ಯಮಗಳಲ್ಲಿಯೂ ಬಿತ್ತರವಾಗಿತ್ತು. ದೂರದರ್ಶನದಲ್ಲಿ ಪ್ರಸಾರವಾದ ದೃಶ್ಯ ನೋಡಿದರೆ ಅದರಲ್ಲಿ ಮೋದಿ ಭಾಷಣದ ವೇಳೆ ಪುಲ್ವಾಮ ದಾಳಿ ಬಗ್ಗೆ ಸ್ಕ್ರಾಲ್ ಕಾಣಬಹುದು.

ಇಲ್ಲಿರುವ ಆಡಿಯೊ ಅಷ್ಟ ಸ್ಪಷ್ಟವಾಗಿಲ್ಲ.ಆದರೆ ವರದಿಗಳ ಪ್ರಕಾರ ಮೋದಿ ಈ ರ್‍ಯಾಲಿಯಲ್ಲಿ ಮಾತನಾಡುವಾಗ ಪುಲ್ವಾಮ ದಾಳಿ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ.ನಾನು ಉತ್ತರಾಖಂಡಕ್ಕೆಬಂದಿದ್ದರೂ ಹವಾಮಾನ ಹದಗೆಟ್ಟ ಕಾರಣ ನನಗೆ ನಿಮ್ಮನ್ನು ಭೇಟಿಯಾಗಲುಸಾಧ್ಯವಾಗಿಲ್ಲ. ಹೀಗಿದ್ದರೂ ನೀವು ನನ್ನ ಮಾತನ್ನು ಕೇಳಲು ಕಾಯುತ್ತ ಕುಳಿತಿರಿ ಎಂದು ಮೋದಿ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾಷಣದಲ್ಲಿ ಮೋದಿ ರೈತರ ಯೋಜನೆ ಬಗ್ಗೆ ಮಾತನಾಡಿದ್ದಾರೆ.ಉತ್ತರಾಖಂಡ ರಚನೆ ಮಾಡಿದ್ದಕ್ಕಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ ಮೋದಿ, ಬಿಜೆಪಿ ಈ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಿದೆ ಎಂದಿದ್ದಾರೆ. ರುದ್ರಾಪುರ್‌ ಬರಲು ಸಾಧ್ಯವಾಗದೇ ಇದ್ದುದು ಕೆಟ್ಟ ಹವಾಮಾನದಿಂದಾಗಿ ಎಂದಷ್ಟೇ ಮೋದಿ ಇಲ್ಲಿ ಹೇಳಿದ್ದು.

ಮೋದಿ ದಿನಚರಿ ಹೇಗಿತ್ತು?
ಫೆ. 14 ರಂದು ರ್‍ಯಾಲಿಯ ಮುನ್ನ ಮೋದಿ ಏನು ಮಾಡಿದರು? ರ್‍ಯಾಲಿ ನಂತರ ಏನು ಮಾಡಿದರು? ಎಂಬುದರ ಬಗ್ಗೆ ಒಂದೊಂದು ಮೂಲಗಳು ಒಂದೊಂದು ರೀತಿಯಲ್ಲಿ ಹೇಳುತ್ತಿವೆ. ಸ್ಥಳೀಯ ಸುದ್ದಿ ಮಾಧ್ಯಮಗಳ ವರದಿ ಆಧರಿಸಿ ಕಾಂಗ್ರೆಸ್ ಮೋದಿ ವಿರುದ್ಧ ಆರೋಪ ಮಾಡುತ್ತಿದೆ.ದಿ ಟೆಲಿಗ್ರಾಫ್ ಪತ್ರಿಕೆಗೆ ಉತ್ತರಾಖಂಡ ಅನಾಮಿಕ ಅಧಿಕಾರಿಗಳು ನೀಡಿರುವ ಮಾಹಿತಿ ಬೇರೆಯದೇದೇ ಇದೆ.ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯೂ ಬೇರೆ ಇದೆ. ಎಕನಾಮಿಕ್ಸ್ ಟೈಮ್ಸ್ ಸುದ್ದಿ ಪ್ರಕಾರ ಮೋದಿಗೆ ಸಂಜೆ4- 4.45ರ ಹೊತ್ತಿಗೆ ದಾಳಿಯ ಸುದ್ದಿ ಗೊತ್ತಾಗಿರುದ್ರಾಪುರ್‌ ರ್‍ಯಾಲಿಯನ್ನು ರದ್ದು ಮಾಡಿದ್ದರು.ಆನಂತರ ಸಂಜೆ 5.15ಕ್ಕೆ ರ್‍ಯಾಲಿಯಲ್ಲಿ ಫೋನ್ ಮೂಲಕ ಮಾತನಾಡುವುದಾಗಿ ಅವರು ನಿರ್ಧರಿಸಿದರು ಎಂದಿದೆ.

ಯಾರು ಏನು ಹೇಳಿದರು?
ಕಾಂಗ್ರೆಸ್ ಆರೋಪ: ದಾಳಿ ಸಂಭವಿಸಿದ ನಂತರವೂ ಮೋದಿ ಸಾಕ್ಷ್ಯ ಚಿತ್ರದ ಶೂಟಿಂಗ್ ಮುಂದುವರಿಸಿದರು, ಬೋಟ್ ರೈಡ್ ಮಾಡಿದ ಅವರು ಸರ್ಕ್ಯೂಟ್ ಹೌಸ್‍ನಲ್ಲಿ ಸಂಜೆ 6.45 ರವರೆಗೆಇದ್ದು ಉಪಹಾರ ಸೇವಿಸಿದ್ದರು.

ಉತ್ತರಾಖಂಡ ಅಧಿಕಾರಿಗಳು: ದಾಳಿ ಸಂಭವಿಸುವುದಕ್ಕೆ ಮುನ್ನವೇ ಮೋದಿ ಬೋಟ್ ರೈಡ್ ಮಾಡಿದ್ದರು. ಇದಾದ ನಂತರ ಅವರು ಜಂಗಲ್ ಸಫಾರಿ ಮಾಡಿ ತಮ್ಮ ಫೋನ್‍ನಲ್ಲಿಯೇ ಕೃಷ್ಣ ಮೃಗದಚಿತ್ರ ಕ್ಲಿಕ್ಕಿಸಿದ್ದರು.ಖಿನಾನೌಲಿ ಅತಿಥಿ ಗೃಹಕ್ಕೆ ತಲುಪಿದ ಅವರು ಅಲ್ಲಿ 4.30ರ ವರೆಗೆ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು.

ಸರ್ಕಾರದ ಅನಾಮಿಕ ಮೂಲಗಳು: ಮೋದಿ ರುದ್ರಪುರ್ ರ್‍ಯಾಲಿ ರದ್ದು ಮಾಡಿ ಫೋನ್ ಮೂಲಕ ಜನರನ್ನುದ್ದೇಶಿಸಿ ಮಾತನಾಡಿದ್ದರು, ಆನಂತರ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ , ಗೃಹ ಸಚಿವ ಮತ್ತು ಜಮ್ಮು ಕಾಶ್ಮೀರದ ರಾಜ್ಯಪಾಲರ ಜತೆಗೆ ದಾಳಿಯ ಮಾಹಿತಿ ಪಡೆದಿದ್ದಾರೆ.ಮಾಹಿತಿ ಸಿಗುವವರೆಗೆ ಅವರು ಏನೂ ತಿಂದಿಲ್ಲ.

ಸರ್ಕಾರದ ಹಿರಿಯ ಅಧಿಕಾರಿ: ದಾಳಿ ಬಗ್ಗೆ ಅವಲೋಕನಕಾರ್ಯದಲ್ಲಿರುವುದರಿಂದ ಅವರು ರುದ್ರಪುರ್ರ್‍ಯಾಲಿಯಲ್ಲಿ ಭಾಗವಹಿಸಿಲ್ಲ. ಅವರು ಸಂಜೆ5.10ಕ್ಕೆ ಫೋನ್ ಮೂಲಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದರು.ರಸ್ತೆ ಮಾರ್ಗವಾಗಿಅವರು ಬರೇಲಿಗೆ ಹೋದರು.

ಟಿವಿ ಸುದ್ದಿ ಮತ್ತು ಎಕಾನಮಿಕ್ ಟೈಮ್ಸ್: ದಾಳಿ ಬಗ್ಗೆ ಮೋದಿಗೆ ತಡವಾಗಿ ತಿಳಿಯಿತು.ಈ ಬಗ್ಗೆ ಮೋದಿ ಸಿಟ್ಟುಗೊಂಡಿದ್ದರು. ಆಮೇಲೆ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊಭಾಲ್‍ಗೆ ಪೋನ್ ಮಾಡಿ ವಿಷಯ ತಿಳಿದುಕೊಂಡರು. ನಂತರಅವರು ಫೋನ್ ಮೂಲಕ ಕೆಲವರು ನಾಯಕರೊಂದಿಗೆ ಸಭೆ ನಡೆಸಿದರು.

ಈ ಬಗ್ಗೆ ಅಧಿಕೃತ ಮೂಲಗಳಿಂದ ದಾಖಲೆಗಳು ಸಿಕ್ಕಿದರೆ ಮಾತ್ರ ಈ ಸುದ್ದಿಗಳಲ್ಲಿ ಯಾವುದು ನಿಖರ ಮಾಹಿತಿ ಎಂಬುದನ್ನು ಹೇಳಬಹುದು, ಆದಾಗ್ಯೂ ಈ ಎಲ್ಲ ಸುದ್ದಿಗಳನ್ನು ಮೂರು ವಿಧದಲ್ಲಿ ವಿಂಗಡಿಸಬಹುದು.

1.ದಾಳಿ ನಡೆದದ್ದು ತಿಳಿದೂ ಮೋದಿ ಕಾರ್ಯಕ್ರಮ ಮುಂದುವರಿಸಿದರು
2. ಮೋದಿಗೆ ಪುಲ್ವಾಮ ದಾಳಿ ಬಗ್ಗೆ ತಡವಾಗಿ ತಿಳಿಯಿತು
3. ಮೋದಿಗೆ ದಾಳಿ ಬಗ್ಗೆ ಗೊತ್ತಾಗಿದ್ದು ಅವರು ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದರು.

ಟ್ವೀಟ್ ಗಮನಿಸಿ
ಮೋದಿಯವರ ವೈಯಕ್ತಿಕ ಟ್ವಿಟರ್ ಖಾತೆ ಮತ್ತು ಪ್ರಧಾನಿಯವರ ಕಚೇರಿಯ ಟ್ವಿಟರ್ ಖಾತೆಯಲ್ಲಿ ಪುಲ್ವಾಮ ದಾಳಿ ಬಗ್ಗೆ ಟ್ವೀಟ್ ಪಬ್ಲಿಶ್ ಆಗಿದ್ದು ಸಂಜೆ 6.45ರ ನಂತರ.

ಇತ್ತ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ 5.48ಕ್ಕೆ ದಾಳಿ ಬಗ್ಗೆ ಟ್ವೀಟಿಸಿದ್ದರು.

ಯಾಕೆ ಇದು ಮುಖ್ಯ ಎನಿಸುತ್ತದೆ?
ಅಂದ ಹಾಗೆ ಇಷ್ಟೆಲ್ಲಾ ದಾಖಲೆಗಳನ್ನು ಪರಿಶೀಲಿಸುವಷ್ಟು ಅಗತ್ಯವೇನಿದೆ ಎಂದು ಅನಿಸಬಹುದು. ಏತನ್ಮಧ್ಯೆ, ಈ ವಿಷಯಗಳು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.

ಇದು ಪಾರದರ್ಶಕತೆಯ ಪ್ರಶ್ನೆ. ಪ್ರಧಾನಿಯವರು ಚುನಾವಣೆ ಪ್ರಚಾರದಲ್ಲಿದ್ದರೂ ಅವರ ನಿಗದಿತ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯಲ್ಲಿ ಸ್ಪಷ್ಟತೆ ಇಲ್ಲ.ದಾಳಿ ನಡೆದ ನಂತರವೂ ಮೋದಿ ಶೂಟಿಂಗ್ ಮುಂದುವರಿಸಿದ್ದರು ಎಂದು ಕಾಂಗ್ರೆಸ್ ಹೇಳುತ್ತಿದೆ. ಅದು ಒತ್ತಟ್ಟಿಗಿರಲಿ, ದಾಳಿ ನಡೆದ ನಂತರವೂ ಮೋದಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು ಎಂಬುದು ಮಾತ್ರಇಲ್ಲಿ ಸ್ಪಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT