ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಶೆ ಕಾರು ಅಪಘಾತ: ಪೊಲೀಸ್‌ ವಶದಲ್ಲಿರುವ ಬಾಲಕನ ಬಗ್ಗೆ ಹೈಕೋರ್ಟ್‌ ಹೇಳಿದ್ದೇನು?

ಪುಣೆ ಪೋಶೆ ಕಾರು ಅಪಘಾತ ಪ್ರಕರಣ: ಬಾಂಬೆ ಹೈಕೋರ್ಟ್‌ ಪ್ರಶ್ನೆ
Published 21 ಜೂನ್ 2024, 13:09 IST
Last Updated 21 ಜೂನ್ 2024, 13:09 IST
ಅಕ್ಷರ ಗಾತ್ರ

ಮುಂಬೈ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಕನಿಗೆ ಜಾಮೀನು ನೀಡಿದ್ದರೂ ಆತನನ್ನು ಪುನಃ ಕಸ್ಟಡಿಗೆ ತೆಗೆದುಕೊಂಡು, ನಿರೀಕ್ಷಣಾ ಮಂದಿರದಲ್ಲಿ ಇರಿಸಲಾಗಿದೆ. ಇದು ಆತನನ್ನು ಬಂಧನಕ್ಕೆ ಒಳಪಡಿಸಿದಂತೆ ಆಗುವುದಿಲ್ಲವೇ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.

ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಹಾಗೂ ಮಂಜೂಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠವು, ‘ಈ ಅಪಘಾತ ದುರದೃಷ್ಟಕರ ಎಂಬುದನ್ನು ಅಲ್ಲಗಳೆಯಲಾಗದು. ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬಾಲಕನೂ ಸೇರಿದಂತೆ ಹಲವರಿಗೆ ಮಾನಸಿಕ ಆಘಾತವಾಗಿದೆ’ ಎಂದು ಹೇಳಿದೆ.

‘ಬಾಲ ಆರೋಪಿಗೆ ನೀಡಿರುವ ಜಾಮೀನನ್ನು ಕಾನೂನಿನ ಯಾವ ಅವಕಾಶದಡಿ ತಿದ್ದುಪಡಿ ಮಾಡಲಾಗಿದೆ ಹಾಗೂ ಆತನನ್ನು ಬಂಧನದಲ್ಲಿ ಇರಿಸಲಾಗಿದೆ’ ಎಂದು ಪೀಠವು ಪೊಲೀಸರನ್ನು ಪ್ರಶ್ನಿಸಿತು.

ಬಾಲ ನ್ಯಾಯ ಮಂಡಳಿ ಬಾಲ ಆರೋಪಿಗೆ ಜಾಮೀನು ನೀಡಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಪೊಲೀಸರು ಈ ವರೆಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿಲ್ಲ ಎಂಬ ಅಂಶವನ್ನು ಪೀಠ ಪರಿಗಣಿಸಿತು.

ಜಾಮೀನು ರದ್ದು ಮಾಡುವಂತೆ ಕೋರುವ ಬದಲು, ಜಾಮೀನು ಆದೇಶವನ್ನು ತಿದ್ದುಪಡಿ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ಆಧಾರದಲ್ಲಿ ಜಾಮೀನು ಆದೇಶವನ್ನು ತಿದ್ದುಪಡಿ ಮಾಡಲಾಗಿದ್ದು, ಬಾಲಕನನ್ನು ನಿರೀಕ್ಷಣಾ ಮಂದಿರಕ್ಕೆ ಕಳುಹಿಸಲಾಗಿದೆ ಎಂಬುದನ್ನು ಸಹ ಪೀಠ ಗಮನಿಸಿತು.

‘ಇದು ಯಾವ ರೀತಿಯ ರಿಮ್ಯಾಂಡ್‌? ಈ ರೀತಿಯ ರಿಮ್ಯಾಂಡ್‌ ಮಾಡುವುದಕ್ಕೆ ನಿಮಗಿರುವ ಅಧಿಕಾರ ಕುರಿತು ತಿಳಿಸಿ’ ಎಂದು ಪೀಠ ಪೊಲೀಸರಿಗೆ ಸೂಚಿಸಿದೆ.

‘ಬಾಲ ನ್ಯಾಯಮಂಡಳಿ ಹೊರಡಿಸಿರುವ ರಿಮ್ಯಾಂಡ್‌ ಆದೇಶ ಸಿಂಧುವಾಗಿದ್ದು, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವೇ ಇಲ್ಲ’ ಎಂದು ಸರ್ಕಾರಿ ವಕೀಲ ಹಿತೇನ್ ವೆನೆಗಾಂವಕರ್ ಪೀಠಕ್ಕೆ ತಿಳಿಸಿದರು.

ಬಾಲಕನ ಪರ ಹಾಜರಿದ್ದ ವಕೀಲ ಆಬಾದ್‌ ಪೊಂಡಾ,‘ನನ್ನ ಕಕ್ಷಿದಾರನ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಪೀಠಕ್ಕೆ ತಿಳಿಸಿದರು.

ವಾದ–‍ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಅರ್ಜಿ ಕುರಿತ ತನ್ನ ಆದೇಶವನ್ನು ಕಾಯ್ದಿರಿಸಿತು. ಜೂನ್‌ 25ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT