ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್ ಸಂಪುಟದಲ್ಲಿ 9 ಕೋಟ್ಯಧಿಪತಿ ಸಚಿವರು: ಮಾನ್, 6 ಸಚಿವರ ವಿರುದ್ಧ ಪ್ರಕರಣ

ಎಡಿಆರ್ ವಿಶ್ಲೇಷಣೆ
Last Updated 21 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್ ಸಚಿವ ಸಂಪುಟದಲ್ಲಿರುವ 11 ಸಚಿವರ ಪೈಕಿ (ಮುಖ್ಯಮಂತ್ರಿ ಸೇರಿ) ಏಳು ಜನರ ವಿರುದ್ಧ ಅಪರಾಧ ಪ್ರಕರಣಗಳು ಇವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ. ಸಚಿವರಲ್ಲಿ ಒಂಬತ್ತು ಮಂದಿ ಕೋಟ್ಯಧಿಪತಿಗಳಿದ್ದಾರೆ.

ಮುಖ್ಯಮಂತ್ರಿ ಮತ್ತು ಸಚಿವರು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದಾಗ ನೀಡಿದ್ದ ಪ್ರಮಾಣಪತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. 10 ಸಚಿವರು ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು.

ಶೇ 64ರಷ್ಟು ಸಚಿವರು ತಮ್ಮ ವಿರುದ್ಧ ಅಪರಾಧ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. ಈ ಪೈಕಿ ಶೇ 36ರಷ್ಟು ಸಚಿವರ ಮೇಲೆ ಗಂಭೀರ ಅಪರಾಧ ಪ್ರಕರಣ ದಾಖಲಾಗಿವೆ. ಐದು ವರ್ಷ ಹಾಗೂ ಅದಕ್ಕೂ ಹೆಚ್ಚು ವರ್ಷ ಶಿಕ್ಷೆ ನೀಡಬಹುದಾದ ಅಪರಾಧಗಳನ್ನು ಗಂಭೀರ ಪ್ರಕರಣಗಳು ಎಂದು ಪರಿಗಣಿಸಲಾಗುತ್ತದೆ.

ಮಾನ್ ಸೇರಿದಂತೆ ನಾಲ್ವರು ಸಚಿವರ ಮೇಲೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ದಾಖಲಾಗಿವೆ. ಗುರ್ಮೀತ್ ಸಿಂಗ್‌ ಮೀತ್ ಹಾಯರ್, ಕುಲದೀಪ್ ಸಿಂಗ್ ಧಲಿವಾಲಾ ಹಾಗೂ ಹರ್ಪಾಲ್ ಸಿಂಗ್ ಚೀಮಾ ಅವರು ಈ ಪಟ್ಟಿಯಲ್ಲಿದ್ದಾರೆ. ಧಲಿವಾಲಾ ಅವರು ಕೊಲೆ ಪ್ರಕರಣ ಎದುರಿಸುತ್ತಿದ್ದು, ಉಳಿದ ಮೂವರ ವಿರುದ್ಧ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವಿದೆ.

9 ಸಚಿವರು ಕೋಟಿ ಒಡೆಯರು!: ಪಂಜಾಬ್ ಸಚಿವ ಸಂಪುಟದಲ್ಲಿರುವ 9 ಸಚಿವರು ತಮ್ಮ ಬಳಿ ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ. ಸಚಿವರ ಸರಾಸರಿ ಆಸ್ತಿ ಮೌಲ್ಯ ₹2.87 ಕೋಟಿ.

ಹೋಶಿಯಾರ್‌ಪುರದಿಂದ ಗೆದ್ದಿರುವ ಬ್ರಹ್ಮಶಂಕರ್ (ಜಂಪಾ) ಅವರ ಬಳಿ ಹೆಚ್ಚು ಮೌಲ್ಯದ (₹8.56 ಕೋಟಿ) ಆಸ್ತಿಯಿದೆ. ಲಾಲ್‌ಚಂದ್ ಅವರ ಆಸ್ತಿ ಮೌಲ್ಯ ಎಲ್ಲರಿಗಿಂತ (₹6.19 ಲಕ್ಷ) ಕಡಿಮೆಯಿದೆ. 9 ಸಚಿವರು ತಮಗೆ ಸಾಲ ಇದೆ ಎಂದು ಪ್ರಕಟಿಸಿದ್ದಾರೆ. ಬ್ರಹ್ಮಶಂಕರ್ ಅವರು ₹1.08 ಕೋಟಿ ಸಾಲ ಪಡೆದಿದ್ದಾರೆ.

ಮಾನ್‌ಗೆ ಗೃಹ, ಚೀಮಾಗೆ ಹಣಕಾಸು
ಮುಖ್ಯಮಂತ್ರಿ ಭಗವಂತ ಮಾನ್ ಅವರು ನೂತನ ಸಚಿವರಿಗೆ ಖಾತೆಗಳನ್ನು ಸೋಮವಾರ ಹಂಚಿಕೆ ಮಾಡಿದ್ದಾರೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹರ್ಪಾಲ್ ಸಿಂಗ್ ಚೀಮಾ ಅವರಿಗೆ ಹಣಕಾಸು ಖಾತೆ ವಹಿಸಿದ್ದಾರೆ. ಕಂದಾಯ ಖಾತೆಯನ್ನೂ ಅವರಿಗೆ ನೀಡಲಾಗಿದೆ. ಗೃಹಖಾತೆಯನ್ನು ಮಾನ್ ಅವರು ತಮ್ಮ ಬಳಿ ಇರಿಸಿಕೊಂಡಿದ್ದಾರೆ.

ಗುರ್ಮೀತ್ ಸಿಂಗ್ ಮೀತ್ ಹಾಯರ್ ಅವರು ಶಿಕ್ಷಣ ಸಚಿವರಾಗಲಿದ್ದಾರೆ. ಸಂಪುಟದ ಏಕೈಕ ಮಹಿಳೆ ಡಾ. ಬಲ್ಜೀತ್ ಕೌರ್ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾಮಾಜಿಕ ಭದ್ರತೆ ಖಾತೆ ನೀಡಲಾಗಿದೆ. ಡಾ. ವಿಜಯ ಸಿಂಗ್ಲಾ ಅವರು ಆರೋಗ್ಯ ಖಾತೆ ನಿಭಾಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT